
ಡಿ.ಜಿ.ದುಂಡಿ,ವಜ್ರಳ್ಳಿ ಅವರ ಲೇಖನಿಯಲ್ಲಿ🖊
ಪ್ರತಿಧ್ವನಿ ಯಲ್ಲಾಪುರ : ಜನ ನಾಯಕ ಜಾನುವಾರು ನಾಯಕ ಜನರ ಮೇಲೊಂದು ಚಿಕ್ಕ ಕಾಳಜಿ ,ಜನರನ್ನು ಸ್ವಲ್ಪ ಆಕರ್ಷಿಸುವ ಮಾತುಗಾರಿಕೆ ಸಾಮಾಜಿಕ ಕಾಳಜಿ ( ಈ ಕಾಲದಲ್ಲಿ ದುಡ್ಡೂ
ಇರಬೇಕು) ಇದ್ದವರು ಸುಲಭವಾಗಿ ಜನ
ನಾಯಕರಾಗಬಹುದು.
(ಇತ್ತೀಚಿನ ದಿನಗಳಲ್ಲಂತೂ ನಾಲ್ಕು ಜನ ಅಕ್ಕ
ಪಕ್ಕದಲ್ಲಿ ಇದ್ದರೆ ಸಾಕು ತಾನು ಜನ ನಾಯಕ
ಅಂತ ತಿಳಿದುಕೊಳ್ಳುವವರು ಹೆಚ್ಚಾಗಿದ್ದಾರೆ.)
ಆದರೆ ನಾನಿಲ್ಲಿ ಹೇಳುತ್ತಿರುವುದು ಜಾನುವಾರು ನಾಯಕ ಜನರ ಹೃದಯದಲ್ಲಿ ಕುಳಿತು ಜನನಾಯಕನಾದ ಕಥೆ.

ಈ ಪಟ್ಟ ಸುಲಭದ್ದಲ್ಲ.
ಮೊದಲನೆಯದಾಗಿ – ಮೂಕ ಪ್ರಾಣಿಗಳ ಮೇಲೆ
ಕಾಳಜಿ ಅಪಾರ ಮಮತೆ ಇರಬೇಕು.ಆಗಷ್ಟೇ
ಅವುಗಳ ಮೂಕ ಭಾಷೆಯನ್ನು ಹಂತ ಹಂತವಾಗಿ
ಅರಿಯಲು ಸಾಧ್ಯ.ಜೊತೆಗೆ ಕೊಟ್ಟಿಗೆಯ ಹೊಲಸು
ಕಂಡು ಹೇಸುವಂತಿಲ್ಲ. ಪ್ರಾಣಿ ವಿಜ್ಞಾನದಲ್ಲಿ ಆಳ
ಅನುಭವ ಗಳಿಸಲು ಅಧ್ಯಯನ ಮಾಡಬೇಕು.
ಚಿಕ್ಕ ಮಕ್ಕಳಿಗೆ ಔಷಧ ಮಾಡಿದಂತೆ ಮೂಕ
ಪ್ರಾಣಿಗಳ ರೋಗ ತಿಳಿದು ಔಷಧ ಕೊಡಬೇಕು.
ಇದೆಲ್ಲವನ್ನೂ ತಿಳಿದು ಹಗಲು ರಾತ್ರಿ ಅನ್ನುವ
ಭೇದವಿಲ್ಲದೆ ದಿನದ ಇಪ್ಪತ್ನಾಲ್ಕು ಘಂಟೆ ಒಬ್ಬ
ಯೋಧನಂತೆ , ಗೋವುಗಳನ್ನು ಪ್ರೀತಿಸುವ
ಗೋಪಾಲನಂತೆ ಗೋವುಗಳ ಆಪದ್ಭಾಂದವ
ಊರಿಗೊಬ್ಬ ಆದರ್ಶ ಪಶುಪಂಡಿತ ಈಗ ನಾನು
ಹೇಳುವ ಕೃಷ್ಣಮೂರ್ತಿ ಜಿ.ಹೆಗಡೆ ( ಕೆ.ಜಿ. ಹೆಗಡೆ) ಕಣ್ಣಮುಂದೆ
ಬಂದು ನಿಲ್ಲುತ್ತಾರೆ.
ಸೌಲಭ್ಯಗಳ ಕೊರತೆ ನಡುವೆ ನಿಸ್ವಾರ್ಥ ಸೇವೆ
ಹಿಂದುಳಿದ ಕಡಿದಾದ ಗುಡ್ಡ ದಟ್ಟವಾದ ಅರಣ್ಯದಿಂದ
ಕೂಡಿದ ಕಳಚೆಗೆ ಬರಲು ಯಾವುದೇ ನೌಕರರು
ಹೆದರುವ ದಿನಗಳಲ್ಲಿ ಶಿರಸಿ ತಾಲೂಕಿನ
ಬೆಂಗಳೆ ಓಣಿಕೇರಿಯ ಸುಂದರ ಸಧ್ರಢ ಯುವಕ
ಕೃಷ್ಣಮೂರ್ತಿ ಹೆಗಡೆಯವರು ನೌಕರಿಗೆ ಸೇರಿದ
ಹೊಸ ಉತ್ಸಾಹದಿಂದ ಹೆಗಲಿಗೆ ಬ್ಯಾಗ್ ಏರಿಸಿ
ಹೊರಟೇಬಿಟ್ಟರು.
ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಜೀವ ತುಂಬಿದರು
ಆರ್ಥಿಕ ಮೂಲಕ್ಕಾಗಿ ಕೇವಲ ಕೃಷಿ ಅವಲಂಬಿಸಿ
ಹಾಲು,ಮೊಸರು, ತುಪ್ಪಕ್ಕೆ ಮಾತ್ರ ಆಕಳು ಎಮ್ಮೆ
ಸಾಕುವ ದಿನಗಳಲ್ಲಿ ಪಶುಪಾಲನೆಯಲ್ಲೂ
ಬದುಕು ಕಟ್ಟಿಕೊಳ್ಳಲು ಒಂದು ಮಾರ್ಗವಿದೆ
ಎಂದು ಜನರನ್ನು ಹುರಿದುಂಬಿಸಿ ಅವಶ್ಯಕ
ಮಾರ್ಗದರ್ಶನ ನೀಡಿ ಊರಿನ ಪ್ರತಿ ಮನೆಯಲ್ಲಿ
ಹಸು ಸಾಕುವ ಗೀಳು ಹಚ್ಚಿ ಊರಿಗೆ ಊರೇ
ನಂದಗೋಕುಲವಾಗಿ ಪರಿವರ್ತಿಸಿದ ಹರಿಕಾರ
ಕೃಷ್ಣನಾದರು.ಹಾಲು ಉತ್ಪಾದನೆಯಿಂದ ಇಷ್ಟೆಲ್ಲ
ಲಾಭವಿದೆ ಎಂದು ತೋರಿಸಿ ಕ್ರಾಂತಿ ಮಾಡಿದಾಗ
ಕಳಚೆ,ಇರಾಪುರ,ಬೀಗಾರ, ಕಿರಗಾರಿ ಕೇರಿ ತೆಲಂಗಾರ
ಈ ಎಲ್ಲ ಹಳ್ಳಿಗಳಲ್ಲಿ ಡೈರಿ ಪ್ರಾರಂಭ. ಇವರ ಸೇವಾ ಅವಧಿಯಲ್ಲಿ ಪ್ರತಿ ಊರಿನಲ್ಲಿ ಹಾಲಿನ ಹೊಳೆಯೇ
ಹರಿಯತೊಡಗಿತು. ಹಲವು ಬಡವರು ತಮ್ಮ
ಆರ್ಥಿಕತೆ ಸುಧಾರಿಸಿಕೊಂಡರು. ಅದಕ್ಕೆಲ ಇದೇ
ಪಶುಗಳ ಧನ್ವಂತರಿ ಕಾರಣಕರ್ತರಾದರು.
ಹಣಕ್ಕಾಗಿ ದುಡಿದವರಲ್ಲ ಸೇವೆಗಾಗಿ ಶ್ರಮಿಸಿದವರು.
ಯಾವುದೇ ದುರ್ಗಮ ಪ್ರದೇಶದ ಹಳ್ಳಿಗಳಿಂದ
ಹಗಲಿರಲಿ, ಇರುಳಿರಲಿ ಆಗದು ಎನ್ನುವ ಪ್ರಶ್ನೆಇಲ್ಲ. ಕೆಜಿ ಹೆಗಡೆ ಅವರ ಬೈಕ್ ಹೊರಟದ್ದೇ.ನೇರ ಕೊಟ್ಟಿಗೆ ಪ್ರವೇಶ ಚಿಕಿತ್ಸೆ ಚಹ, ಕಾಫಿಗಾಗಿ ಕರೆದರೆ ಇಲ್ಲ ಮುಂದಿನ ಚಿಕಿತ್ಸೆಗೆ ಪಯಣ ಹೊರಟೇಬಿಟ್ಟರು.ಚಿಕಿತ್ಸೆಗೆ ಹಣ ಪಡೆಯಲೂ
ಸಮಯವಿಲ್ಲ.ಇನ್ನಾವಾಗಲೋ ಕೊಟ್ಟಷ್ಟು ಪಡೆವ
ಜಾಯಮಾನ ಅವರದು.
ಅವರ ಪಶುಸೇವೆಯ ಬಗ್ಗೆ ಹೇಳಲು ನನಗೆ
ಸಾಕಷ್ಟು ಶಬ್ದಗಳೇ ಸಿಗುತ್ತಿಲ್ಲ ಎಂದರೆ
ಅತಿಶಯೋಕ್ತಿ ಆಗದು.
ಅವರೊಂದಿಗೆ ಸ್ವಲ್ಪ ಕಾಲ ಮಾತನಾಡಲು ಸಿಗ
ಬೇಕೆಂದರೆ ನಮ್ಮ ಭಾಗ್ಯ ಎಂದು ತಿಳಿಯಬೇಕಿತ್ತು.
ಮೂಢ ನಂಬಿಕೆ, ನಮ್ಮ ಕೆಲಸ ನಾವು ಮಾಡದೇ
ಸುಮ್ಮನೇ ದೇವರನ್ನುನಂಬಿ ಕುಳಿತರೆ …
ಈ ವಿಷಯದ ಕುರಿತು ಮಾತನಾಡುವುದು
ಅವರ ಆಸಕ್ತಿಯ ವಿಷಯ.
ನನಗೂ ಶ್ರೀಕೃಷ್ಣಮೂರ್ತಿ ಗುರುಗಳು ಅನ್ನಬಹುದು
ನಿವೃತ್ತಿ ಆಗುವ ವರೆಗೆ ನಾನು ಕೊಟ್ಟಿಗೆಯ ಕಡೆ
ಎತ್ತಿ ಎರಗಿ ನೋಡಿದವನಲ್ಲ.ಆಗಾಗ ಮನೆಗೆ ಬಂದಾಗ
ಹಸುಗಳು ಕೊಡುವ ಖುಷಿಯ ಬಗ್ಗೆ ಚರ್ಚೆ ಮಾಡಿದ್ದು
ಇಂದು ಎರಡು ಹಸುಗಳನ್ನು ಸಾಕುತ್ತಿದ್ದೇವೆ.ಖುಷಿ
ಸಿಗುತ್ತಿದೆ.
ಪತಿಯ ಕಾಯಕಕ್ಕೆ ಸದಾ ಹೆಗಲಾಗಿ ನಿಂತ ಮಡದಿ ಶ್ಯಾಮಲಾ

ಕಳಚೆ ಕಾಶ್ಮೀರ ಎನ್ನುವ ಮಾತಿದೆ.ಸಸ್ಯ ಶಾಮಲೆಯ
ಮಡಿಲಿನಲ್ಲಿ ಜನಿಸಿದ ಶ್ಯಾಮಲಾ ಇವರ ಜೀವನ
ಸಂಗಾತಿ ಆದದ್ದೂ ಒಂದು ವಿಷೇಶ. ಎತ್ತರದ ನಿಲುವಿನ
ಕೃಷ್ಣಮೂರ್ತಿ ಅವರಿಗೆ ಅವರ ಬುಜದ ವರೆಗೆ
ಬರುವ ಶ್ಯಾಮಲಾ ಅವರು ಸಮಯದ ಪರಿವೆ
ಇಲ್ಲದೇ ಸದಾ ಗೋಸೇವೆಯಲ್ಲಿ ತೊಡಗಿರುವ
ಪತಿಯೊಂದಿಗೆ ಹೆಗಲಿಗೆ – ಹೆಗಲು (ತಲೆ) ಕೊಟ್ಟು
ಸಹಕರಿಸಿದ ,ಸಂಸಾರ ಸುಂದರ ಗೊಳಿಸಿದ ಕೀರ್ತಿ
ಶ್ಯಾಮಲಾ ಅವರಿಗೆ ಸಲ್ಲಬೇಕು . ಇವರಜೀವನ ಗೋಸೇವಾ ಫಲದಿಂದ ಅಕ್ಷಯ
ವಾಗುತ್ತಿರಲೆಂದು ಇವರ ಕುಡಿ ಅಕ್ಷಯ
ಸಂಸಾರದಲ್ಲಿ ಸೇರಿಕೊಂಡು ಪಶುವೈದ್ಯಕೀಯ
ದಲ್ಲಿ ಸ್ನಾತಕೋತ್ತರ ಪದವಿ ಪಡೆದದ್ದೂ ಆಯ್ತು
ಆದರೆ ಐದು ವರ್ಷ ಕಾದರೂ ಸರಕಾರ ಈ
ವಿಭಾಗದಲ್ಲಿ ನೌಕರಿ ತುಂಬದಿರುವುದರಿಂದ
ಬೇಸತ್ತು ಶೇರ್ ಬಿಜಿನಸ್ ಆಯ್ಕೆ ಮಾಡಿಕೊಂಡು
ಮುನ್ನುಗ್ಗಿ ಹಲವು ಮೆಟ್ಟಿಲು ಏರಿದ್ದೂ ಇತಿಹಾಸ.
ಅಕ್ಷಯ ಕುಮಾರ ಯಶಸ್ಸು ಪಡೆದ
ಆದರೆ ಒಬ್ಬ ತಜ್ಞ ಪಶುವೈದ್ಯ ರನ್ನು ಕಳಕೊಂಡ
ನಾವು ಪ್ರತಿಭಾ ಪಲಾಯನದಿಂದ ಹಾನಿಗೊಳಗಾಗಿ
ಕೈ ಹಿಸುಕಿಕೊಳ್ಳುವಂತಾದುದು ಸತ್ಯ.
ಈಗ ನೌಕರಿ ಯಿಂದ ನಿವೃತ್ತಿ ಹೊಂದಿದ ಧನ್ವಂತರಿ
ಅವರಿಗೆ ಸಪ್ಟೆಂಬರ್ ಆರರಂದು ವಜ್ರಳ್ಳಿಯ
ಸರ್ವೋದಯ ಸಭಾ ಭವನದಲ್ಲಿ ಆತ್ಮೀಯ
ನಾಗರಿಕ ಸಮ್ಮಾನ ನಡೆಯಲಿದ್ದು . ನಾವೆಲ್ಲರೂ
ಸೇರಿ ಈ ಗೋಸೇವಕ ಕುಟುಂಬಕ್ಕೆ ಶುಭ
ಹಾರೈಸಿ ಕೃತಜ್ಞತೆ ಸಲ್ಲಿಸಿ ನಮ್ಮ ಭಾವನೆಯ
ಪುಷ್ಪವನ್ನು ಅರ್ಪಿಸೋಣ.



















Prathidvani Yellapura