

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ಕಳೆದ 32 ವರ್ಷಗಳಿಂದ ಗಣೇಶ ಚತುರ್ಥಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದಾರೆ.

ವಿಶೇಷವೆಂದರೆ ಕಳೆದ ಅನೇಕ ವರ್ಷಗಳಿಂದ ಶಿರಸಿ ಕೆ.ಹೆಚ್.ಬಿ ಕಾಲೋನಿ ನಿವಾಸಿ ಶ್ರೀಧರ ಸಂಜೀವ ಕೆರೆಕರ ಈತನು ಮುತ್ತು ಹವಳಗಳಿಂದ ಅಲಂಕೃತಗೊಂಡ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸಿ ನೀಡುತ್ತ ಬಂದಿದ್ದು ಈ ವರ್ಷ ಆಮೆಯ ಮೇಲೆ ಕುಳಿತಿರುವ ಪಾಂಡುರಂಗ ವಿಠಲ ಶೈಲಿಯ ಉತ್ಸವ ಗಣೇಶ ಮೂರ್ತಿಯನ್ನು ತಯಾರಿಸಿದ್ದು, ಈತನ ಕಲೆಯನ್ನು ಪ್ರೋತ್ಸಾಹಿಸಲು ಕಛೇರಿಯ ಅಧಿಕಾರಿಗಳಾದ ಅಶೋಕ ಬಿ. ಬಂಟ್-ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್ ಉಪ ವಿಭಾಗ, ಯೋಜನಾ ಉಪ ವಿಭಾಗ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಇಲಾಖೆ ಸಿಬ್ಬಂದಿಗಳು ಸೇರಿ ಈತ ತಯಾರಿಸಿದ ಗಣೇಶನ ಮೂರ್ತಿಯನ್ನು ಕಛೇರಿಯಲ್ಲಿ ಪ್ರತಿಷ್ಠಾಪಿಸಲು ನಿರ್ಣಯಿಸಿ ಗಣೇಶನ ಮೂರ್ತಿಯನ್ನು ಸೆಪ್ಟೆಂಬರ್ 14 ರಂದು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು.

ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಗುತ್ತಿಗೆದಾರರು ಸೇರಿ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸುತ್ತಿದ್ದು, ಶ್ರೀಮತಿ ಶಶಿಕಲಾ ಸಂತೋಷ ಬಾಂದಿವಾಡೇಕರ, ಬೆಳಗಾವಿ ಇವರು ಮಾಡಿರುವ ಪಾಂಡುರಂಗ ವಿಠಲ ಮಂದಿರದ ಗರ್ಭಗುಡಿ ಹೋಲುವ ಮಂಟಪದ ಅಲಂಕಾರ ವಿಶೇಷವಾಗಿದೆ.

ನಾಲ್ಕನೇ ದಿನ ಗುರುವಾರ ಮಹಾಪೂಜೆ ಪ್ರಸಾದ ಭೋಜನ ವಿತರಣೆ, ನಂತರ ಸಂಜೆ 6.45 ಗಂಟೆಗೆ ನುರಿತ ಕಲಾವಿದರಿಂದ “ಶರಸೇತು ಬಂಧನ ತಾಳಮದ್ದಳೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹಾಗೂ ಐದನೇ ದಿನ ಶುಕ್ರವಾರದಂದು ಮಂಗಳಮೂರ್ತಿಯನ್ನು ಜಾಂಜ್ ವಾದ್ಯದ ಭವ್ಯ ಮೆರವಣಿಗೆಯೊಂದಿಗೆ ವಿಸರ್ಜಿಸಲಾಗುತ್ತದೆ ಎಂದು ಕಚೇರಿ ಮೂಲಗಳಿಂದ ತಿಳಿದು ಬಂದಿದೆ.






















Prathidvani Yellapura