

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸಮೀಪದಲ್ಲಿರುವ ನಾರಾಯಣಪುರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಕಳ್ಳರು ತಮ್ಮ ಕೈಚಳಕ ತೋರಿದ್ದು ಗುಣಮಟ್ಟದ ಮತ್ತು ಉತ್ತಮ ತಿರುಳಿರುವ ಗಂಧದ ತುಂಡುಗಳನ್ನು ಹೊತ್ತೊಯ್ದು ತಿರುಳಿಲ್ಲದ ಎಳೆಯ ತುಂಡುಗಳನ್ನು ಸ್ಥಳದಲ್ಲೆ ಬಿಟ್ಟು ಹೋಗಿದ್ದಾರೆ.

ಸ್ಥಳದಲ್ಲಿ ಕಳ್ಳರು ಬಿಟ್ಟು ಹೋದ 44 ಕೆಜಿ ಬುಡಚಿ ಮತ್ತು ತಿರುಳಿಲ್ಲದ ತುದಿ ಭಾಗ 85 ಕೆಜಿ ತೂಕದ ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಧೀಶರ ಅನುಮತಿ ಪಡೆದು ಪ್ರಥಮ ವರ್ತಮಾನ ವರದಿ ಸಲ್ಲಿಸಲಾಗಿದೆ.

ಪಟ್ಟಣ ವ್ಯಾಪ್ತಿಯಲ್ಲಿ ಬೆಳೆದು ಉತ್ತಮ ತಿರುಳು ಹೊಂದಿರುವ ಮರಗಳು ಅಲ್ಲಲ್ಲಿ ಕಾಣಿಸುತ್ತಿದ್ದು ಇಂದಲ್ಲ ನಾಳೆ ಕಳ್ಳರ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಅರಣ್ಯ ಇಲಾಖೆ ಇಂತಹ ಮರಗಳನ್ನು ಇಲಾಖೆಯ ನಿಯಮಾವಳಿ ಅಡಿಯಲ್ಲಿ ಸರ್ಕಾರದ ಸಮ್ಮತಿ ಪಡೆದು ಕಟಾವು ಮಾಡಿ ವಶಕ್ಕೆ ಪಡೆದರೆ ರಾಜ್ಯ ಬೊಕ್ಕಸಕ್ಕೆ ಒಂದಷ್ಟು ಆರ್ಥಿಕ ವರಮಾನ ಸೇರ್ಪಡೆ ಆಗಲಿದೆ. ಅಲ್ಲದೆ ಇಂತಹ ಮರಗಳನ್ನು ಕಳ್ಳರು ಕಡಿಯುವ ಸಂದರ್ಭದಲ್ಲಿ ಸಾರ್ವಜನಿಕರು ಕಂಡಾಗ ಅವರ ಮೇಲೆ ಹಲ್ಲೆಯಾಗುವ ಅಥವ ಜೀವಕ್ಕೆ ಅಪಾಯವಾಗುವ ಸಾದ್ಯತೆ ಇದ್ದು ಈ ಕುರಿತು ಇಲಾಖೆ ಗಂಭೀರವಾಗಿ ಗಮನಹರಿಸಿ ಶ್ರೀಗಂಧದ ಮರಗಳ ವಿಚಾರದಲ್ಲಿ ಸೂಕ್ತ ನಿಲುವುತಾಳ ಬೇಕಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.
ವಿಶೇಷ ಎಂದರೆ ಯಲ್ಲಾಪುರ ತಾಲೂಕಿನಲ್ಲಿ ನಡೆದ ಬಹುತೇಕ ಶ್ರೀಗಂಧದ ಕಳ್ಳತನ ಪ್ರಕರಣಗಳಲ್ಲಿ ಮರ ಕಡಿದ ಕಳ್ಳರು ಇದುವರೆಗು ಪತ್ತೆಯಾದ ಉದಾಹರಣೆಗಳಿಲ್ಲ, ಯಾವುದಾದರು ಪ್ರಕರಣದಲ್ಲಿ ಕಳ್ಳರ ಸೆರೆಯಾದರೆ ಅದು ಬಾಕಿ ಕಳ್ಳರಿಗೆ ಎಚ್ಚರಿಕೆ ಆಗಲಿದೆ.























Prathidvani Yellapura