
ಪ್ರತಿಧ್ವನಿ ಯಲ್ಲಾಪುರ : ನಾಡಿಗೆ ಗೌರಿ ಗಣೇಶ ಹಬ್ಬದ ಸಡಗರ ಸಂಭ್ರಮ, ಈ ಬಾರಿಯ ಹಬ್ಬವು ಮತ್ತಷ್ಟು ವಿಶೇಷ ಏಕೆಂದರೆ ಸಾಮಾನ್ಯವಾಗಿ ಭಾದ್ರಪದ ಮಾಸದ ತದಿಗೆಯ ದಿನದಂದು ಗೌರಿ ಹಬ್ಬವನ್ನು ಆಚರಿಸಿದರೇ, ಅದರ ಮರುದಿನ ಅಂದರೆ ಚೌತಿಯ ದಿನದಂದು ಗಣಪತಿ ಹಬ್ಬವನ್ನು ಆಚರಿಸಲಾಗುತ್ತದೆ.

ನಮ್ಮ ಜನಪದರ ಪ್ರಕಾರ ಹೆಣ್ಣು ಮಕ್ಕಳಂತೆ ಗೌರಿ ಕೂಡ ಭೂಲೋಕದ ಮಗಳಾಗಿದ್ದು, ಕೈಲಾಸದಿಂದ ತನ್ನ ತವರುಮನೆಗೆ ಆಗಮಿಸುತ್ತಾಳೆ. ಪತಿ ಶಿವನು ನನ್ನ ಅರ್ಧಾಂಗಿಯನ್ನು ಕ್ಷಣ ಕೂಡ ಬಿಟ್ಟಿರಲಾರದೆ, ವಿರಹ ವೇದನೆಯಿಂದ ನೊಂದು, ತನ್ನ ಮಗ ಗಣೇಶನಿಗೆ ತಾಯಿಯನ್ನು ಕರೆದುಕೊಂಡು ಬರುವಂತೆ ಆಜ್ಞಾಪಿಸಿ, ಗಣಪನ ಅಜ್ಜಿಯ ಮನೆಗೆ ಅಂದರೆ ಭೂಲೋಕಕ್ಕೆ ಕಳುಹಿಸುತ್ತಾನೆ. ಗಣೇಶ ಭೂಲೋಕದ ಮುದ್ದಿನ ಮೊಮ್ಮಗನಾಗಿದ್ದು, ಅವನ ಆಗಮನವನ್ನು ಸಂಭ್ರಮಿಸಿದ ಭೂಲೋಕದ ಜನರು ಅವನಿಗಾಗಿ ವಿಶೇಷ ತಿನಿಸುಗಳನ್ನು ತಯಾರಿಸಿ, ಉಣಬಡಿಸುತ್ತಾರೆ. ಬಳಿಕ ತಾಯಿ ಮತ್ತು ಮಗ ಸಂತೋಷದಿಂದ ಉಂಡು, ತಾಯಿಯು ತನಗೆ ಬಾಗಿನವನ್ನು ನೀಡಿದ ಮುತ್ತೈದೆಯರಿಗೆ ದೀರ್ಘ ಸುಮಂಗಲಿತನಕ್ಕೆ, ತನ್ನನ್ನು ಆರಾಧಿಸಿದ ಯುವತಿಯರಿಗೆ ತನ್ನ ಪತಿಯಾದ ಶಿವನಂತೆ ಅರ್ಧನಾರೀಶ್ವರನಾದಂತಹ ವರ ದೊರೆಯಲಿ ಎಂದು, ಗಣೇಶ ತನಗೆ ಪ್ರಿಯವಾದ ತಿನಿಸುಗಳನ್ನು ತಯಾರಿಸಿ, ಸಂತೃಪ್ತಿಪಡಿಸಿದ ಜನರಿಗೆ ಹಾರೈಸಿ ಕೈಲಾಸಕ್ಕೆ ತೆರಳುತ್ತಾರೆ.

ಈ ಬಾರಿ ಗೌರಿ ಮತ್ತು ಗಣೇಶ ಒಟ್ಟಾಗಿ ಭೂಲೋಕಕ್ಕೆ ಆಗಮಿಸುತ್ತಿದ್ದು, ಅದು ಶಿವನ ವಾರವಾದ ಸೋಮವಾರದಂದೇ ಆಗಿರುವುದು ಕಾಕತಾಳೀಯ. ಹೀಗಾಗಿ ಇಡೀ ಕುಟುಂಬವನ್ನೇ ಆರಾಧಿಸುವಂತಹ ಒಂದು ಶುಭ, ಸುಕೃತ ಮತ್ತು ಸಂತಸಕರ ಅವಕಾಶ ದೊರೆತಿದೆ.

ಗೌರಿ ಹಬ್ಬವು ಮುತ್ತೈದೆಯರ ಹಬ್ಬವಾಗಿದ್ದು ಇದಕ್ಕಾಗಿ ತೆಂಗಿನಕಾಯಿಗಳನ್ನು ಖರೀದಿಸಿ, ಅವುಗಳನ್ನು ಸಿಂಗರಿಸಿ, ಮುತ್ತೈದೆಯರ ಸಂಕೇತಗಳಾದ ಮಾಂಗಲ್ಯ, ಅರಿಶಿಣ-ಕುಂಕುಮ, ಹೂವು, ಬಳೆ ಮುಂತಾದವುಗಳನ್ನು ಬಾಗಿನದ ತೆಂಗಿನಕಾಯಿಗಳೊಂದಿಗೆ ಜೋಡಿಸಿಟ್ಟುಕೊಂಡು ಸಿದ್ಧತೆ ನಡೆಸುವುದು.

ಮುದ್ದು ಮೊಮ್ಮಗನಾದ ಗಣೇಶನನ್ನು ಬರಮಾಡಿಕೊಳ್ಳಲು, ತಿಂಡಿಪೋತನಾದ ಆತನಿಗೆ ಹೊಟ್ಟೆಬಿರಿಯೇ ತಿನ್ನಿಸಿ ಸಂತೃಪ್ತಿಪಡಿಸಲು ಮೋದಕ, ಕಡುಬು, ಚಕ್ಕುಲಿ, ಕರ್ಜಿಕಾಯಿ, ಉಂಡೆ ಸೇರಿದಂತೆ ಪಂಚಭಕ್ಷ್ಯ ಪರಮಾನ್ನಗಳನ್ನು ಮನೆಯಲ್ಲಿಯೇ ತಯಾರಿಸುವಲ್ಲಿ ನಿರತರಾಗಿದ್ದಾರೆ.

ಇನ್ನು ಗೌರಿಯನ್ನು ಕೂರಿಸುವ, ಗಣೇಶನನ್ನು ಕರೆತಂದು ಪೂಜೆಯನ್ನು ನಡೆಸುವ ಮನೆಗಳಲ್ಲಿ ಹೆಚ್ಚಿನ ಕೆಲಸದ ಆಯಾಸದ ನಡುವೆಯೂ ಸಡಗರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.




















Prathidvani Yellapura