Breaking News

ಭತ್ತದ ಬೆಳೆಗೆ ಕಾಡುತ್ತಿರುವ ಬೆಂಕಿರೋಗ–ಕಂದುಜಿಗಿ, ಎಲೆಸುರುಳಿ ಕೀಟ ನಿಯಂತ್ರಣಕ್ಕೆ ಕೃಷಿ ಇಲಾಖೆ ಸಲಹೆ ಪಡೆದುಕೊಳ್ಳಿ – ನಾಗರಾಜ್ ನಾಯ್ಕ್ (ಸ.ಕೃ.ನಿ)


ಪ್ರತಿಧ್ವನಿ ಯಲ್ಲಾಪುರ: ತಾಲ್ಲೂಕಿನಲ್ಲಿ ಕಳೆದ 15 ದಿನಗಳಿಂದ 120 ದಿನಗಳ ಭತ್ತದ ಬೆಳೆ ಬೆಳವಣಿಗೆಯ ಹಂತದಲ್ಲಿದ್ದು, ಕಳೆದ ಕೆಲ ದಿನಗಳಿಂದ ಮಳೆಯ ಪ್ರಮಾಣ ತೀವ್ರವಾಗಿ ಕಡಿಮೆಯಾಗಿ, ಬೆಳಗಿನ ಜಾವ ಮಂಜು ಕವಿದ ವಾತಾವರಣ ಕಂಡುಬರುತ್ತಿದೆ. ಈ ವಾತಾವರಣವು ಬೆಂಕಿರೋಗದ ಶಿಲೀಂಧ್ರದ ಬೆಳವಣಿಗೆಗೆ ಪೂರಕವಾಗಿದ್ದು, ತಾಲ್ಲೂಕಿನ ಹೊಸಳ್ಳಿ, ಕಂಚನಳ್ಳಿ, ಕಿರವತ್ತಿ, ಮದನೂರು, ಹೆಮ್ಮಾಡಿ, ಭರತನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭತ್ತದ ಬೆಳೆಗೆ ಬೆಂಕಿರೋಗದ ಬಾಧೆ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ರೈತರು ಕೆಳಕಂಡ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ನಾಗರಾಜ್ ನಾಯ್ಕ್ ಸಹಾಯಕ ಕೃಷಿ ನಿರ್ದೇಶಕರು ಯಲ್ಲಾಪುರ ಮಾದ್ಯಮದ ಮೂಲಕ ಸಲಹೆ ನೀಡಿದ್ದಾರೆ.

ಬೆಂಕಿರೋಗ ನಿಯಂತ್ರಣ:
ಬೆಂಕಿರೋಗವು ಶಿಲೀಂಧ್ರದಿಂದ ಉಂಟಾಗುವ ರೋಗವಾಗಿದ್ದು, ಮಳೆ ಕಡಿಮೆಯಾಗಿ ಇಬ್ಭನಿ ಹೆಚ್ಚಾದಾಗ ಕಾಣಿಸಿಕೊಳ್ಳುತ್ತದೆ. ಬಾಧಿತ ಎಲೆಗಳಲ್ಲಿ ಕಣ್ಣೀರಿನಾಕಾರದ ಕಂದುಚುಕ್ಕೆಗಳು ಕಂಡುಬಂದು, ಕ್ರಮೇಣ ಸುಟ್ಟಂತೆ ಕಾಣುತ್ತವೆ. ರೋಗದ ಹತೋಟಿಗಾಗಿ ಟ್ರೈಸೈಕ್ಲೊಜೋಲ್ (ಬೀಮ್) 0.6 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಾರಜನಕಯುಕ್ತ ಯೂರಿಯಾ ಗೊಬ್ಬರದ ಹೆಚ್ಚಿನ ಬಳಕೆಯನ್ನು ಮಾಡಬಾರದು ಎಂದು ಇಲಾಖೆ ಸೂಚಿಸಿದೆ.

ಕಂದುಜಿಗಿ ಹುಳದ ಕಾಟ
ಈ ಕೀಟವು ಬೆಣೆ ಆಕಾರದಲ್ಲಿದ್ದು, ಪೌಢ ಮತ್ತು ಮರಿಹುಳುಗಳು ಕಾಂಡವನ್ನು ಹಾನಿಗೊಳಿಸಿ ರಸ ಹೀರುತ್ತವೆ. ಇದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಕ್ರಮೇಣ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತವೆ. ಕೀಟದ ಬಾಧೆ ಹೆಚ್ಚಾಗಿ ಕಂಡುಬಂದಲ್ಲಿ ಇಮಿಡಾಕ್ಲೋಪ್ರಿಡ್ 0.3 ಮಿ.ಲೀ ಅಥವಾ ಥಯೋಮಿಥಾಕ್ಸಾಮ್ 0.5 ಗ್ರಾಂ ಅಥವಾ ಬುಪ್ರೊಫೆಜಿನ್ 1.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ, ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ತಯಾರಿಸಿ ಸಿಂಪಡಿಸಬೇಕು.

ಎಲೆಸುರುಳಿ ಕೀಟ ನಿಯಂತ್ರಣ:
ನಾಟಿ ಮಾಡಿದ 15 ದಿನಗಳಿಂದ ತೆನೆ ಬರುವವರೆಗೂ ಈ ಕೀಟದ ಬಾಧೆ ಕಂಡುಬರಬಹುದು. ಮರಿಹುಳು ಎಲೆಯನ್ನು ಸುರುಳಿ ಮಾಡಿ ಅದರೊಳಗಿನ ಹಸಿರು ಭಾಗವನ್ನು ಕೆರೆದು ತಿನ್ನುವುದರಿಂದ ಎಲೆಗಳು ಸುಟ್ಟಂತೆ ಕಾಣುತ್ತವೆ. ನಿಯಂತ್ರಣಕ್ಕಾಗಿ ಪ್ರೊಫೆನೊಫಾಸ್ 50 EC 2 ಮಿ.ಲೀ ಅಥವಾ ಕ್ಲೋರಾಂಟ್ರಾನಿಲಿಪ್ರೋಲ್ 20 EC 2 ಮಿ.ಲೀ ಅಥವಾ ಕ್ವಿನಾಲ್ಫಾಸ್ 25 EC 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಎಕರೆಗೆ 200 ಲೀಟರ್ ಸಿಂಪರಣಾ ದ್ರಾವಣ ತಯಾರಿಸಿ ಸಿಂಪಡಿಸಬೇಕು. ಸಿಂಪರಣೆಗೆ ಮುನ್ನ ಮುಳ್ಳಿನ ಕಡ್ಡಿಯಿಂದ ಗದ್ದೆಯ ಮೇಲೆ ಹಾಯಿಸುವಂತೆ ಮಾಡಿ ಕೀಟಗಳನ್ನು ಹೊರಬರುವಂತೆ ಮಾಡುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.

ತೆನೆ ತಿಗಣೆ ನಿಯಂತ್ರಣ:
ಭತ್ತದ ತೆನೆಗಳಲ್ಲಿ ಹಾಲುಗಾಳು ಹಂತದಲ್ಲಿರುವಾಗ ಈ ಕೀಟ ಕಾಣಿಸಿಕೊಳ್ಳುತ್ತದೆ. ಕೀಟವು ತೆನೆಗಳಲ್ಲಿನ ಹಾಲನ್ನು ಹೀರಿ ತೆನೆಗೆ ಹಾನಿ ಮಾಡುತ್ತದೆ. ಕೀಟವನ್ನು ಕೈಯಿಂದ ಮುಟ್ಟಿದಾಗ ಪಟ್ಟಾದ ವಾಸನೆ ಬರುತ್ತದೆ. ಇದರ ನಿಯಂತ್ರಣಕ್ಕಾಗಿ ಮೆಲಾಥಿಯಾನ್ 20 EC 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳಗಿನ ಜಾವ ಸಿಂಪಡಿಸುವಂತೆ ಕೃಷಿ ಇಲಾಖೆ ಸೂಚಿಸಿದೆ.

ರೈತರು ಬೆಳೆಗಳಲ್ಲಿ ಕೀಟ ಮತ್ತು ರೋಗದ ಬಾಧೆ ಕಂಡುಬಂದ ತಕ್ಷಣ ಸೂಕ್ತ ಕ್ರಮ ಕೈಗೊಂಡು, ಕೃಷಿ ಇಲಾಖೆಯ ತಾಂತ್ರಿಕ ಸಲಹೆಯಂತೆ ಮಾತ್ರ ಕೀಟನಾಶಕಗಳನ್ನು ಬಳಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *