
ಪ್ರತಿಧ್ವನಿ ಯಲ್ಲಾಪುರ : ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಲಾದ ಏಳನೆ ಅಧಿಸೂಚನೆಗೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿ ಜಿಲ್ಲೆಯ ವನವಾಸಿ,ಬುಡಕಟ್ಟು,ರೈತಾಪಿ ಜನರ ಬೆನ್ನಿಗೆ ನಿಲ್ಲಬೇಕಿದೆ. ಈ ಬಗ್ಗೆ ಅಧಿವೇಶನದಲ್ಲಿ ಕೂಲಂಕುಷವಾಗಿ ಚರ್ಚಿಸುವ ಅಗತ್ಯವಿದೆ, ವರದಿ ಅವೈಜ್ಞಾನಿಕವಾಗಿದ್ದು ಒಂದುವೇಳೆ ರಾಜ್ಯ ಸರ್ಕಾರ ಸುಮ್ಮನೆ ಕುಳಿತರೆ ಏಳನೆ ಅಧಿಸೂಚನೆ ಜಿಲ್ಲೆಯ ಜನತೆಗೆ ಮರಣಶಾಸನವಾಗಲಿದೆ ಎಚ್ಚರ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಶಾಂತಾರಾಮ್ ನಾಯಕ ಎಚ್ಚರಿಸಿದ್ದಾರೆ.

ಅವರು ಕಸ್ತೂರಿ ರಂಗನ್ ವರದಿ ವಾಪಸಾತಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಉ.ಕ. ಜಿಲ್ಲೆಯ ವಿವಿಧೆಡೆ ಪ್ರತಿಭಟನಾ ಪ್ರದರ್ಶನಗಳು ನಡೆಯುತ್ತಿದ್ದು. ಅಂಕೋಲಾದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರಿಂದ ನಡೆದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ನಗರದ ಸ್ವಾತಂತ್ರ್ಯ ಸಂಗ್ರಮ ಸ್ಮಾರಕ ಭವನ ಎದುರಿನಿಂದ ಮೆರವಣಿಗೆ ನಡೆದು ತಹಶಿಲ್ದಾರರ ಕಛೇರಿ ತಲುಪಿತು. ಮುಖ್ಯಮಂತ್ರಿ ಗಳಿಗೆ ಬರೆದ ಮನವಿಯನ್ನು ಉಪ ತಹಶಿಲ್ದಾರ್ ಅನುಪಮ ನಾಯ್ಕ ಸ್ವಿಕರಿಸಿದರು .

ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ವಿಶೇಷವಾಗಿ ಚರ್ಚಿಸಲು ಮತ್ತು ಅರಣ್ಯ ವಾಸಿಗಳ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಲಾಯಿತು.

ಹೋರಾಟದ ನೇತ್ರತ್ವವನ್ನು ರೈತ ಸಂಘದ ತಾಲೂಕ ಸಮಿತಿ ಅಧ್ಯಕ್ಷರಾದ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಪದಾದಿಕಾರಿಗಳಾದ ಉದಯ ನಾಯ್ಕ ಹೊಸಗದ್ದೆ, ವೆಂಕಟರಮಣ ಗೌಡ, ಮಾದೇವ ಗೌಡ ಮೀನಾಕ್ಷಿ ಗೌಡ, ಗುರು ನಾಯ್ಕ ಅಗಸೂರ, ಸಂದೀಪ್ ನಾಯ್ಕ ಸುಂಕಸಾಳ ಮುಂತಾದವರು ವಹಿಸಿದ್ದರು, ನಾಗರಾಜ ಹೆಗಡೆ ಕೊಡ್ಲಗದ್ದೆ, ಬಾಲಚಂದ್ರ ಶೆಟ್ಟಿ, ರಮಾನಂದ ಅಚವೆ, ಜ್ಯೋತಿ ನಾಯ್ಕ, ವಿಠ್ಠಲ ಗೌಡ, ಕೇಶವ ನಾಯಕ, ಚಂದ್ರು ಗೌಡ ಶಿರಗುಂಜಿ, ಶಿವರಾಮ ಪಟಗಾರ ಬ್ರಹ್ಮೂರು ಸೇರಿ ನೂರಾರು ಜನ ಪಾಲ್ಗೊಂಡಿದ್ದರು.














Prathidvani Yellapura