
ಪ್ರತಿಧ್ವನಿ ಯಲ್ಲಾಪುರ : ಇದು ಅಪರೂಪದಲ್ಲಿ ಅಪರೂಪದ ಘಟನೆ. ಒಬ್ಬ ಸರಳ,ಸಜ್ಜನ,ರಾಜಕೀಯ ಹಿನ್ನೆಲೆ ಇಲ್ಲದ,ಶ್ರೀಮಂತಿಕೆ ಇರದ, ನಿತ್ಯ ಜನರ ನಡುವೆಯೆ ಇದ್ದು ತುತ್ತಿನ ಚೀಲ ತುಂಬುವ ಕೃಷಿಕಾಯಕದೊಂದಿಗೆ ಹುಟ್ಟಿದ ಮಣ್ಣಿನ ಋಣ ತೀರಿಸುವ ಸೇವಾ ಕಾರ್ಯದಲ್ಲಿ ಬಿಡುವಿಲ್ಲದಂತೆ ತೊಡಗಿಕೊಂಡ ಬುಡಕಟ್ಟು ಸಿದ್ದಿ ಸಮುದಾಯದ ಮೊದಲ ಪದವೀಧರ ಶಾಂತಾರಾಮ್ ಬುಡ್ನ ಸಿದ್ದಿ ಅವರಿಗೆ ಭಾರತೀಯ ಜನತಾ ಪಕ್ಷದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನ ಒಲಿದು ಬಂದಿತ್ತು.
ಇದರಿಂದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಘನತೆ ಹೆಚ್ಚಿದಂತಹ ಅನುಭವ, ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಯು ಸಹ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯ ಬಹುದು ಎಂಬ ನಿರಾಳ ಮನೋಭಾವಕ್ಕೆ ಕಿರೀಟ ಇಟ್ಟಂತ ಸನ್ನಿವೇಶ.

ಸಂಘದ ಸೇವೆ,ವನವಾಸಿಗಳ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟದ ಫಲವೆ ಎಂ.ಎಲ್.ಸಿ ಪಧವಿ
ವಿಧಾನ ಪರಿಷತ್ ಶಾಸಕ ಸ್ಥಾನ ಅಷ್ಟು ಸುಲಭಕ್ಕೆ ಸಿಗುವುದಲ್ಲ. ಹಣಬಲ,ತೋಳ್ಬಲ,ಜಾತಿ ಬಲ ಎಲ್ಲವು ಇದ್ದು ರಾಜಕೀಯ ನಾಯಕರ ಕೃಪಾ ಕಟಾಕ್ಷ ಜೊತೆಯಲ್ಲಿ ಅದೃಷ್ಟ ಇರದ ಹೊರತು ಈ ಸ್ಥಾನ ಸಿಗುವುದು ಕನಸಿನ ಮಾತು. ಆದರೆ ಬಾಲ್ಯದಿಂದಲೂ ಹಿಂದುತ್ವ ಉಸಿರಾಗಿಸಿಕೊಂಡು,ಸಂಘ ಪರಿವಾರದಲ್ಲಿ ಸಕ್ರಿಯ ಸೇವಕನಾಗಿ ಬಗಲಿಗೆ ಜೋಳಿಗೆ ಹಾಕಿ ಧರ್ಮ ಮತ್ತು ರಾಷ್ಟ್ರೀಯತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿ ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯದಲ್ಲಿಯು ಸೇವಾ ಕಾರ್ಯದಲ್ಲಿ ತೊಡಗಿಕೊಂಡ ಶಾಂತಾರಾಮ್ ಸಿದ್ದಿ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಿದ್ದು ಬಿಜೆಪಿಗೆ ಘನತೆ ಹೆಚ್ಚಿದ್ದಲ್ಲದೆ ಬುಡಕಟ್ಟು ಸಮುದಾಯಕ್ಕೆ ನೀಡಿದ ನೈತಿಕ ಬಲದ ರೀತಿ ಅನಿಸಿತ್ತು.

ಒಲಿದು ಬಂದ ಸ್ಥಾನ ಮಾನಕ್ಕೆ ಅಹಂಕಾರ ಅಂಟಿಸಿಕೊಳ್ಳದೆ ಸರಳತೆಯಲ್ಲೆ ಅವಧಿ ಮುಗಿಸಿದ ಶಾಂತಾರಾಮ್ ಸಿದ್ದಿ
ಉತ್ತರ ಕನ್ನಡದ ಹಲವುಕಡೆಗಳಲ್ಲಿ ಬೀಡು ಬಿಟ್ಟಿರುವ ಬುಡಕಟ್ಟು ಸಿದ್ದಿ ಸಮುದಾಯದಲ್ಲಿ ಇದುವರೆಗು ಇಷ್ಟೊಂದು ಉನ್ನತ ಸ್ಥಾನ ಅಲಂಕರಿಸಿರಲಿಲ್ಲ. ಶಾಂತಾರಾಮ್ ಬುಡ್ನ ಸಿದ್ದಿ ಅವರು ವಿಧಾನ ಪರಿಷತ್ ಸ್ಥಾನ ಅಲಂಕರಿಸಿ ಆ ಸ್ಥಾನಕ್ಕೆ ಒಂದು ಗೌರವ ತಂದುಕೊಟ್ಟರು.


ತಮಗೆ ದೊರೆತ ಅವಕಾಶ ಸದುಪಯೋಗ ಪಡಿಸಿಕೊಂಡು ದೇಶದ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಶ್ರಮ
2020 ಕ್ಕೆ ವಿಧಾನ ಪರಿಷತ್ ಶಾಸಕರಾಗಿ ಅಧಿಕಾರ ವಹಿಸಿಕೊಂಡವರು ಸತತ 6 ವರ್ಷಗಳ ಸುದೀರ್ಘ ಸೇವೆ ರಾಜ್ಯಕ್ಕೆ ಮಾತ್ರವಲ್ಲದೆ ದೇಶದ ಉದ್ದಗಲಕ್ಕು ಸಂಚರಿಸಿ ಬುಡಕಟ್ಟು ಸಮುದಾಯಗಳಿಗೆ ಬಲ ತುಂಬುವಲ್ಲಿ ಯಶಸ್ವಿಯಾದರು ಇದೀಗ ಜುಲೈ 21 ಕ್ಕೆ ಶಾಂತಾರಾಮ್ ಸಿದ್ದಿ ಅವರು ಅಲಂಕರಿಸಿದ ವಿಧಾನಪರಿಷತ್ ಸ್ಥಾನದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ವಿಧಾಯ ಹೇಳುತ್ತಿದ್ದಾರೆ.

ಶಾಂತಾರಾಮ್ ಸಿದ್ದಿ ಅವರಿಗೆ ದೊರೆತ ಎಂ.ಎಲ್.ಸಿ ಗೌರವ ಯಲ್ಲಾಪುರ ತಾಲೂಕಿಗೆ ಸಂದ ಹೆಮ್ಮೆ
ಒಂದಂತು ಸತ್ಯ ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ ಅಡಿಯಲ್ಲಿ ಸೇವಾ ಕಾರ್ಯದಲ್ಲಿ ತೊಡಗಿ ನಿರಂತರವಾಗಿ ವನವಾಸಿ ಜನರ ಅಭ್ಯುದಯಕ್ಕಾಗಿ ಹಲವು ಹೋರಾಟಗಳನ್ನು ಮಾಡಿದ್ದಲ್ಲದೆ ತಮ್ಮ ಸಮುದಾಯಕ್ಕೆ ಸಿಗಬೇಕಾದ ಸರ್ಕಾರಿ ಸವಲತ್ತುಗಳನ್ನು ಅದೇ ಜನರಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದ ಕಾರಣದಿಂದಾಗಿ ಪಕ್ಷ ಅಷ್ಟೊಂದು ಮಹತ್ವದ ಸ್ಥಾನ ನೀಡಿತ್ತು. ಇದು ಕೇವಲ ಆ ಪಕ್ಷದ ಸಂತಸ ಮಾತ್ರವಲ್ಲ ಉತ್ತರ ಕನ್ನಡ ಜಿಲ್ಲೆಗೆ ಸಂದ ಗೌರವ ವಿಶೇಷವಾಗಿ ಯಲ್ಲಾಪುರ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ.

ಡಾ,ಬಿ.ಆರ್.ಅಂಬೇಡ್ಕರ್ ದೇಶಕ್ಕೆ ನೀಡಿದ ಪವಿತ್ರ ಸಂವಿಧಾನದ ಬಲದಿಂದಲೆ ದೊರೆತ ಎಂ.ಎಲ್.ಸಿ ಸ್ಥಾನ
ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ಉಳಿದು ಜಯಿಸಬೇಕೆಂದರೆ ಜಾತಿ ಬಲ ಹಣದ ಬಲ ಬೇಕು ಅವೆರಡು ಇಲ್ಲದೆ ರಾಜಕೀಯದಲ್ಲಿ ಮೇಲೆ ಬರುವುದು ಅಸಾದ್ಯದ ಮಾತು. ಡಾ,ಬಿ.ಆರ್ ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನದ ಬಲದಿಂದ ಬುಡಕಟ್ಟು ಸಿದ್ದಿ ಸಮುದಾಯದ ವ್ಯಕ್ತಿ ಒಬ್ಬರು ಬೆಂಗಳೂರಿನ ವಿಧಾನ ಪರಿಷತ್ ನಲ್ಲಿ ಕುಳಿತು ಸಲಹೆ ಸೂಚನೆ ನೀಡಿದ್ದಲ್ಲದೆ ಅತ್ಯಂತ ಪ್ರಮುಖ ವಿಷಯದಲ್ಲಿ ಗಂಭೀರ ಚರ್ಚೆಗಳಲ್ಲಿ ಪಾಲ್ಗೊಂಡ ಕೀರ್ತಿ ಶಾಂತಾರಾಮ್ ಸಿದ್ದಿಯವರಿಗೆ ಸಲ್ಲುತ್ತದೆ. ದೇಶದ ಇತಿಹಾಸದಲ್ಲಿ ಕರ್ನಾಟಕ ರಾಜ್ಯದ ಇತಿಹಾಸದಲ್ಲು ಸಹ ಅತ್ಯಂತ ಪ್ರಮುಖ ಸಂಗತಿಯಾಗಿದೆ.

ವಿಧಾನ ಪರಿಷತ್ ಇತಿಹಾಸದಲ್ಲಿ ಯಲ್ಲಾಪುರ ತಾಲೂಕಿನ ಮಣ್ಣಿನ ಮಗ ಸಭಾಪತಿಯಾಗಿ ಸದನ ನಡೆಸಿ ಇತಿಹಾಸ ಸೃಷ್ಟಿ
ಒಮ್ಮೆ ವಿದಾನ ಪರಿಷತ್ ಸಭಾಪತಿ ಸ್ಥಾನ ಅಲಂಕರಿಸಿ ಸಭಾಪತಿ ಕಾರ್ಯ ನಿರ್ವಹಿಸಿ ಸದನ ನಡೆಸಿ ಇತಿಹಾಸ ಸೃಷ್ಟಿಸಿದ ಕೀರ್ತಿ ಶಾಂತಾರಾಮ್ ಸಿದ್ದಿಯವರಿಗೆ ಸಲ್ಲುತ್ತದೆ.

ಅವಧಿ ಮುಗಿಯುತ್ತಲೆ ಎಂ.ಎಲ್.ಸಿ ಸ್ಥಾನಕ್ಕೆ ವಿಧಾಯ ಮುಂದೆ..???
ಶಾಂತಾರಾಮ್ ಸಿದ್ದಿ ಅವರು ತಮಗೆ ದೊರೆತ ಎಂ.ಎಲ್.ಸಿ ಸ್ಥಾನವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ. ಇದೀಗ ವಿಧಾಯ ಹೇಳಿ ಹೊರಟು ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸುತ್ತಾರ ಕಾದು ನೋಡಬೇಕು.

ಒಂದು ಹಂತದಲ್ಲಿ ಶಾಂತಾರಾಮ್ ಸಿದ್ದಿ ಅವರು ಕೇವಲ ರಾಜ್ಯ ರಾಜಕಾರಣದಲ್ಲಿ ಮಾತ್ರ ಗುರುತಿಸಿಕೊಂಡಿಲ್ಲ ಬದಲಾಗಿ ತಮ್ಮ ಅಧಿಕಾರದ ಅವಧಿಯಲ್ಲಿ ದೇಶಾದ್ಯಂತ ಇರುವ ಬುಡಕಟ್ಟು ಸಮುದಾಯಗಳ ಅಭ್ಯುದಯಕ್ಕೆ ಮತ್ತು ಸಂಘಟಿಸಲು ನಿರಂತರ ಶ್ರಮಿಸಿದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕಾರಣದಲ್ಲು ತಮ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಈಗಾಗಲೆ ಕೇಂದ್ರ ಬುಡಕಟ್ಟು ಅಭಿವೃದ್ಧಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಹೈ ಕಮಾಂಡ್ ರಾಜ್ಯ ರಾಜಕಾರಣದಲ್ಲಿ ಉಳಿಸಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಎಂ.ಎಲ್.ಎ ಅಭ್ಯರ್ಥಿಯಾಗಿಸುತ್ತಾ.? ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳತ್ತಾ.? ಅಥವ ಕೇಂದ್ರ ರಾಜಕಾರಣಕ್ಕೆ ಕರೆಸಿಕೊಳ್ಳತ್ತಾ ಕಾದು ನೋಡಬೇಕಿದೆ ಒಟ್ಟಿನಲ್ಲಿ “ಸೆಕೆಂಡ್ ಇನ್ನಿಂಗ್ಸ್ ” ನಿಗೂಢ.

ಶಾಂತಾರಾಮ್ ಸಿದ್ದಿ ಅವರ ಅಂತರಾಳದ ಆತ್ಮೀಯ ಕೃತಜ್ಞತೆ ಸಲ್ಲಿಕೆ
ವಿಧಾನ ಪರಿಷತ್ತಿನ ನನ್ನ ಅವಧಿಯು ಜುಲೈ ತಿಂಗಳ 21ಕ್ಕೆ ಮುಕ್ತಾಯವಾಗಲಿದ್ದು ನಾನು ನಿವೃತ್ತಿ ಹೊಂದುತ್ತಿದ್ದೇನೆ.
2020 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮತ್ತು ವನವಾಸಿ ಕಲ್ಯಾಣ ಆಶ್ರಮದ ಹಿರಿಯರ ಸೂಚನೆಯಂತೆ ನನಗೆ ವಿಧಾನ ಪರಿಷತ್ತಿನ ಶಾಸಕನಾಗಿ ನಾಮ ನಿರ್ದೇಶನ ಮಾಡಲು ಭಾರತೀಯ ಜನತಾ ಪಾರ್ಟಿಯ ಸರಕಾರ ಮಾನ್ಯ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಅಂದಿನಿಂದ ಇಂದಿನವರೆಗೆ ಆರು ವರ್ಷಗಳ ಕಾಲ ನನಗೆ ಸಹಕಾರ ನೀಡಿದ ಸಂಘದ ಎಲ್ಲಾ ಸ್ವಯಂಸೇವಕರಿಗೆ, ವನವಾಸಿ ಕಲ್ಯಾಣ ಆಶ್ರಮದ ಕಾರ್ಯಕರ್ತರಿಗೆ ಮತ್ತು ಭಾರತೀಯ ಜನತಾ ಪಾರ್ಟಿಯ ಎಲ್ಲಾ ಕಾರ್ಯಕರ್ತರಿಗೆ ಅನೇಕನೇಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಈ ಅವಧಿಯಲ್ಲಿ ತಮ್ಮ ನಿರೀಕ್ಷೆಯ ಅರ್ಧದಷ್ಟು ಕೆಲಸಗಳನ್ನು ಮಾಡಲು ನನ್ನಿಂದ ಆಗದೆ ಇರಬಹುದು. ರಾಜಕೀಯ ಕ್ಷೇತ್ರದ ಯಾವುದೇ ಹಿನ್ನೆಲೆ ಅಥವಾ ಅನುಭವ ಇಲ್ಲದ ಕಾರಣ ಅದಕ್ಕೆ ಹೊಂದಿಕೊಳ್ಳಲು ಒಂದಷ್ಟು ಸಮಯ ಕಳೆದು ಹೋಯಿತು. ಉಳಿದಂತೆ ದೇಶ ಕಾಲ ಪರಿಸ್ಥಿತಿಗೆ ಅನುಗುಣವಾಗಿ ನನ್ನ ಮನಸ್ಸಿಗೆ ಸಮಾಧಾನವಾಗುವಷ್ಟು ಕೆಲಸ ಮಾಡಿದ್ದೇನೆ. ರಾಜಕೀಯ ಕ್ಷೇತ್ರದ ಯಾವುದೇ ವ್ಯಕ್ತಿ ಎಲ್ಲಾ ಕಾರ್ಯಕರ್ತರಿಗೆ ಸಮನಾಗಿ ನೋಡಬಹುದು ಆದರೆ ಸಮಾಧಾನ ಪಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನನ್ನಿಂದ ಕೂಡ ಅನೇಕ ರಿಗೆ ಒಂದಷ್ಟು ಬೇಸರವಾಗಿದೆ ಎಂಬುದು ನನಗೂ ಗೊತ್ತು. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಮುಂದೆ ಕೂಡ ತಮ್ಮ ಸಹಕಾರ ನಿರಂತರ ಇರಲಿ. ಮತ್ತೊಮ್ಮೆ ಧನ್ಯವಾದಗಳೊಂದಿಗೆ ಶಾಂತಾರಾಮ್ ಬುಡ್ನಾ ಸಿದ್ದಿ, ವಿಧಾನ ಪರಿಷತ್ ಸದಸ್ಯರು












Prathidvani Yellapura