
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಇತ್ತೀಚೆಗೆ ಪುನಃ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಎಲ್ಲೆಂದರಲ್ಲಿ ಗುಂಪುಗುಂಪಾಗಿ ತಿರುಗುತ್ತ ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗುತ್ತಿದ್ದು ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.



ಪಟ್ಟಣದಲ್ಲಿನ ಶಾಲಾ ಕಾಲೇಜು ಅಂಗನವಾಡಿಗಳ ಸಮೀಪ ನಾಯಿಗಳ ಗುಂಪು ಕಾಣಿಸುತ್ತಿದ್ದು ಇದರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು ಹೊರಗಿನಿಂದ ನಾಯಿಗಳನ್ನು ತಂದು ಯಲ್ಲಾಪುರಕ್ಕೆ ಬಿಟ್ಟು ಹೋಗುತ್ತಿರಬಹುದೇನೊ ಎಂಬ ಅನುಮಾನ ಕಾಡುತ್ತಿದೆ. ಅದೇನೆ ಇರಲಿ ಬೀದಿ ನಾಯಿಗಳಿಂದ ಆತಂಕ ತಪ್ಪಿದ್ದಲ್ಲ.

ಇತ್ತೀಚೆಗೆ ಸ್ಥಳೀಯ ಶಿಕ್ಷಣ ಸಂಸ್ಥೆ ಆವಾರದಲ್ಲಿ ವಿದ್ಯಾರ್ಥಿ ಓರ್ವನಿಗೆ ಕಚ್ಚಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಮಸ್ಯೆಗಳ ಕುರಿತು ಸ್ಥಳೀಯ ಆಡಳಿತದ ಗಮನಕ್ಕೆ ತಂದರು ಯಾವುದೆ ಪ್ರಯೋಜನ ಆಗುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ನಾಯಿಗಳ ನಿಯಂತ್ರಣಕ್ಕೆ ವೈಜ್ಞಾನಿಕ ಮಾರ್ಗೋಪಾಯ ಅನುಸರಿಸಿ ಕಡಿವಾಣ ಹಾಕಬೇಕಿದೆ ಎಂಬುದು ಹಲವರ ಅಭಿಪ್ರಾಯ ಆಗಿದೆ.

ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ನಾಯಿಗಳಿಗೆ ತೊಂದರೆ ಮಾಡುವಂತಿಲ್ಲ ಮತ್ತು ಜೀವಕ್ಕೆ ಸಮಸ್ಯೆ ಶಗುವಂತಹ ಯಾವ ಕ್ರ ಕೈಗೊಂಡರು ಅಪರಾಧವಾಗಲಿದೆ. ಆದರೆ ಸಾರ್ವಜನಿಕರಿಗೆ ಅವುಗಳಿಂದಾಗುವ ಅಪಾಯಕ್ಕೆ ಅನ್ಯ ಮಾರ್ಗವನ್ನು ಸ್ಥಳೀಯ ಆಡಳಿತ ಹುಡುಕಬೇಕಿದೆ ಎಂಬುದು ನಾಗರಿಕರೊಬ್ಬರ ಅಭಿಪ್ರಾಯವಾಗಿದೆ.

ನಮ್ಮ ಶಾಲಾ ಆವರಣದಲ್ಲಿ ಹಲವು ದಿನಗಳಿಂದ ಬೀದಿ ನಾಯಿಗಳು ಗುಂಪು ಗುಂಪಾಗಿ ಅಡ್ಡಾಡುತ್ತಿದ್ದು ವಿದ್ಯಾರ್ಥಿಗಳ ಅಭ್ಯಾಸಕ್ಕೆ,ಕ್ರೀಡಾ ಚಟುವಟಿಕೆಗೆ ಸಮಸ್ಯೆ ಆಗುತ್ತಿದೆ. ಈ ಕುರಿತು ಸ್ಥಳೀಯ ಆಡಳಿತದ ಗಮನಕ್ಕು ತಂದಿದ್ದೆವು.ಸಮಸ್ಯೆ ಹಾಗೆ ಉಳಿದಿರುವುದು ದುರಂತವಾಗಿದೆ. ಮತ್ತೊಮ್ಮೆ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತಕ್ಕೆ ಪತ್ರ ಬರೆಯಲಾಗುವುದು. ಆನಂದ್ ಹೆಗಡೆ, ಪ್ರಾಂಶುಪಾಲರು ವೈಟಿಎಸ್ಎಸ್ ಶಿಕ್ಷಣ ಸಂಸ್ಥೆ, ಯಲ್ಲಾಪುರ
ನಿತ್ಯ ಕಾಲೇಜು ಆವರಣ ಮತ್ತು ಕಾಲೇಜು ರಸ್ತೆಯಲ್ಲಿ ಬೀದಿನಾಯಿಗಳು ಅಡ್ಡಾಡುತ್ತಿದ್ದು ವಿದ್ಯಾರ್ಥಿಗಳ ಚಲನವಲನಕ್ಕೆ ಅಡಚಣೆಯಾಗುತ್ತಿದೆ. ಮುಂದೆ ಇದು ಅಪಾಯಕಾರಿಯಾಗುವ ಸಂಭವ ಇದ್ದು ಸ್ಥಳೀಯ ಆಡಳಿತ ಸಮಸ್ಯೆ ಬಗೆಹರಿಸಿ ಬೀದಿನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ. ವಿಕಾಸ್ ಮುಕಾಶಿ, ಉಪನ್ಯಾಸಕರು, ಸರ್ಕಾರಿ ಪದವಿಪೂರ್ವ ಕಾಲೇಜು, ಯಲ್ಲಾಪುರ












Prathidvani Yellapura