Breaking News

ನಮ್ಮ ಗ್ರಾಮ ನಮ್ಮ ರಸ್ತೆ ಸರ್ಕಾರಿ ಯೋಜನೆ – ರಸ್ತೆ ದುರವಸ್ತೆ ಕಂಡು ವರ್ಷಗಳೆ ಕಳೆದರು ಕೇಳುವವರಿಲ್ಲದಾಗಿದೆ.

ಕೇಬಲ್ ನಾಗೇಶ್, ಯಲ್ಲಾಪುರ..🖊


ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಕರಡೊಳ್ಳಿ ಯಿಂದ ಮುಂಡಗೋಡು ರಸ್ತೆ ಸಂಪರ್ಕಿಸುವ ರಸ್ತೆ 2020 ರಲ್ಲಿ ನಿರ್ಮಾಣವಾಗಿ 2025 ರ ವರೆಗೆ ಗುತ್ತಿಗೆದಾರನೆ ನಿರ್ವಹಣೆ ಮಾಡುವ ಕರಾರಿತ್ತು. ನಂತರ ಮರು ಡಾಂಬರಿಕರಣ ಕಾಣ ಬೇಕಿದ್ದ ರಸ್ತೆ ಇದೀಗ ರಸ್ತೆಯನ್ನೆ ಹುಡುಕುವ ಸ್ಥಿತಿ ತಲುಪಿದೆ.  ಸರ್ಕಾರದ ನಿಯಮಾವಳಿಯಂತೆ ನಿರ್ವಹಣೆ ಮಾಡಬೇಕಿದ್ದ ಗುತ್ತಿಗೆದಾರ ನಿಯಮಾವಳಿ ಗಾಳಿಗೆ ತೂರಿ  ಮಾಯವಾಗಿದ್ದರೆ ನಿತ್ಯ ನರಕ ಅನುಭವಿಸುತ್ತಿರುವವರು ಇದೇ ರಸ್ತೆಗೆ ತಮ್ಮ ತೆರಿಗೆ ಹಣ ಭರಿಸಿದ ಗ್ರಾಮಸ್ಥರಾಗಿದ್ದಾರೆ.

ರಸ್ತೆ ಸಮಸ್ಯೆ ಹೇಳಿದಾಗಲೆಲ್ಲಾ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರ ಪರಿಣಾಮ.!!
ರಸ್ತೆ ನಿರ್ಮಿಸಿ ವರ್ಷದೊಳಗೆ ದುರವಸ್ತೆ ತಲುಪಲು ಪ್ರಾರಂಭಿಸಿದೆ. ರಸ್ತೆ ಪರಿಸ್ಥಿತಿಯನ್ನು ಸ್ಥಳೀಯ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಾಗಲೆಲ್ಲ ಸಬೂಬು ಹೇಳುತ್ತ ಬಂದು ಗುತ್ತಿಗೆದಾರನ ನಿರ್ವಹಣೆ ಕರಾರಿನ ದಿನಗಳು ಮುಗಿದ ನಂತರ ಮತ್ತು ಮರು ಡಾಂಬರಿಕರಣ ಆಗುವ ಸಂದರ್ಭದಲ್ಲಿ ಗುತ್ತಿಗೆದಾರ ನಮ್ಮ ಮಾತು ಕೇಳುತ್ತಿಲ್ಲ ಆತನಿಗೆ ನೋಟಿಸ್ ನೀಡಿದ್ದು ಆತನ ಪರವಾನಗಿ ರದ್ದು ಮಾಡುತ್ತೇವೆ ಎಂಬ ನುಣುಚಿಕೊಳ್ಳುವ ಉತ್ತರ ನೀಡುತ್ತಿರುವುದು ಸಾರ್ವಜನಿಕರ ಸಮಸ್ಯೆಗಳನ್ನು ಗೇಲಿ ಮಾಡಿದಂತಾಗಿದೆ.

ಅಧಿಕಾರಿಗಳ ಜಾಣ ಕುರುಡೆ ಅಥವ ಸಾರ್ವಜನಿಕರ ತೆರಿಗೆ ಹಣದ ಉಡಾಫೆಯೆ.??
ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಹಾಕಿರುವ ಫಲಕದ ಮಾಹಿತಿ ಪ್ರಕಾರ 2020 ರಿಂದ 2025 ರ ವರೆಗೆ ರಸ್ತೆ ಸಮರ್ಪಕ ನಿರ್ವಹಣೆ ಅದಕ್ಕು ಸಹ ಪ್ರತಿ ವರ್ಷ ನಿರ್ವಹಣಾ ವೆಚ್ಚ ನೀಡಲಾಗಿದೆ. ನಂತರ ಮರುಡಬರಿಕರಣ ಮಾಡಬೇಕಿರುವುದು ಗುತ್ತಿಗೆದಾರನ ಕರ್ತವ್ಯ ಇದು ನಿಯಮವಾಗಿದೆ ಆದರೆ ಇದಾವುದನ್ನು ಇಲ್ಲಿ ಮಾಡಿಲ್ಲ ಒಂದೇಒಂದು ವರ್ಷವು ನಿರ್ವಹಣೆ ಮಾಡಿಲ್ಲ ಇದನ್ನು ಸರ್ಕಾರಿ ಸಂಬಳ ಎಣಿಸುತ್ತಿರುವ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸಿ ಈಗ ನೋಟಿಸ್ ನೀಡಿದ್ದೇವೆ ಎಂಬ ಸಿದ್ದ ಉತ್ತರ ನೀಡುತ್ತಿರುವುದು ದುರಂತವಾಗಿದೆ‌.

ಮಂಕುಬೂದಿ ಎರಚುವ ಜನರ ಮೇಲೆ ಎಚ್ಚರವಿರಲಿ ಸಾರ್ವಜನಿಕ ತೆರಿಗೆ ಹಣದ ಲೆಕ್ಕ ಪಕ್ಕಾ ಇರಲಿ.
ಇಷ್ಟು ವರ್ಷ ನರಕ ಅನುಭವಿಸಿದ ಸಾರ್ವಜನಿಕರು ಕೆಲವು ಸಂದರ್ಭಗಳಲ್ಲಿ ತಾವೆ ರಸ್ತೆ ದುರಸ್ತಿ ಕಾರ್ಯ ಮಾಡಿಕೊಂಡಿದ್ದಾರೆ. ತಮ್ಮ ತೆರಿಗೆ ಹಣದಲ್ಲಿ ರಸ್ತೆ ನಿರ್ಮಿಸಿ ಮತ್ತು ನಿರ್ವಹಣೆಗು ತಮ್ಮದೆ ಹಣ ನೀಡಿ ಕೊನೆಗೆ ತಾವೆ ರಸ್ತೆ ದುರಸ್ತಿ ಮಾಡಿಕೊಂಡದ್ದು ವ್ಯವಸ್ಥೆಯ ಅವ್ಯವಸ್ಥೆ ಆಗಿದೆ. ಈ ಅನ್ಯಾಯಕ್ಕೆ ಹೊಣೆ ಯಾರು. ನಿಯಮ ಉಲ್ಲಂಘಿಸಿದ ಗುತ್ತಿಗೆದಾರನಿಂದ ಸಂಪೂರ್ಣ ಹಣ ಹಿಂಪಡೆಯಬೇಕಿದೆ ಮತ್ತು ಅದರ ಮಾಹಿತಿ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಿದೆ. ಇಲ್ಲವಾದಲ್ಲಿ ಮತ್ತೆ ಇದೇರೀತಿ ಸರ್ಕಾರಕ್ಕೆ ಹಾಗು ಸಾರ್ವಜನಿಕರಿಗೆ ಮಂಕುಬೂದಿ ಎರಚುವ ಮಹನೀಯರ ಸಂಖ್ಯೆ ಹೆಚ್ಚಲಿದೆ.

ನಿಮ್ಮೂರಲ್ಲು ಸಮಸ್ಯೆ ಇದ್ದರೆ ಕಣ್ಮುಚ್ಚಿ ಕುಳಿತುಕೊಳ್ಳದೆ ಧ್ವನಿ ಎತ್ತಿ ನಿಮ್ಮ ತೆರಿಗೆ ಹಣದ ಲೆಕ್ಕ ಕೇಳಿ.
ತಾಲೂಕಿನಲ್ಲಿ ಇಂತಹ ಸಮಸ್ಯೆ ಮತ್ತಷ್ಟು ಇರುವ ಸಾದ್ಯತೆ ಇದ್ದು ಸಾರ್ವಜನಿಕರೆ ಎಚ್ಚೆತ್ತು ನಿಮ್ಮ ತೆರಿಗೆ ಹಣದ ಲೆಕ್ಕ ನೀವೆ ಕೇಳಬೇಕಿದೆ ಇಲ್ಲವಾದಲ್ಲಿ ಇಲಿ ಹೆಗ್ಗಣಗಳ ಸಂಖ್ಯೆ ಹೆಚ್ಚುವುದರಲ್ಲಿ ಅನುಮಾನವಿಲ್ಲ.
ತಾಲೂಕಿನಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಬ ಯೋಜನೆಯಲ್ಲಿ ಹಳ್ಳ ಹಿಡಿದಿರುವ ರಸ್ತೆಗಳ ಸಮರ್ಪಕ ನಿರ್ವಹಣೆ ಆಗದಿದ್ದಲ್ಲಿ ಮತ್ತು ಮರು ಡಾಂಬರಿಕರಣ ಆಗದಿದ್ದಲ್ಲಿ ನೀವೆ ಪ್ರಶ್ನಿಸಿ ಗುತ್ತಿಗೆದಾರನಿಂದ ಕೆಲಸ ತೆಗೆದುಕೊಳ್ಳಿ ಎಂಬುದು ಹೋರಾಟಗಾರರ ಮಾತಾಗಿದೆ.

ಫಲಕದ ಮೇಲಷ್ಟೆ ಲೆಕ್ಕ – ಹೊರಗೆ ರಸ್ತೆ ಹಾಳಾಗಿ ಹದಗೆಟ್ಟಿರುವುದಷ್ಟೆ ಪಕ್ಕ
ಸದ್ಯ ಕರಡೊಳ್ಳಿ ಯಿಂದ ಯಲ್ಲಾಪುರ-ಮುಂಡಗೋಡು ಸಂಪರ್ಕಿಸುವ 2.10 ಕಿ.ಮೀ ಉದ್ದದ ರಸ್ತೆ ಅದರಲ್ಲಿ 1.72 ಕಿ.ಮೀ ಡಾಂಬರ್ ಮತ್ತು 0.38 ಕಿ.ಮೀ ಕಾಂಕ್ರೀಟ್ ರಸ್ತೆಯಾಗಿ ನಿರ್ಮಿಸಲಾಗಿದೆ. ಇದನ್ನು ವಿಜಯಾನಂದ ಶೆಟ್ಟಿ ಎಂಬ ಗುತ್ತಿಗೆದಾರ ನಿರ್ಮಿಸಿದ ರಸ್ತೆಯಾಗಿದೆ. 2020-21 ರಲ್ಲಿ 1.28 ಲಕ್ಷ 21-22 ರಲ್ಲಿ 2.06 ಲಕ್ಷ, 22-23 ರಲ್ಲಿ 2.62 ಲಕ್ಷ, 23-24 ರಲ್ಲಿ 3.20 ಲಕ್ಷ,24-25 ರಲ್ಲಿ 3.80 ಲಕ್ಷ ನಿರ್ವಹಣಾ ವೆಚ್ಚವನ್ನು ಗುತ್ತಿಗೆದಾರನಿಗೆ ನೀಡಲಾಗಿದೆ ಆದರೆ ಇದರಲ್ಲಿ ನಯಾ ಪೈಸೆ ನಿರ್ವಹಣಾ ಕಾಮಗಾರಿ ನಡೆದಿಲ್ಲ. ಆದರೆ ರಸ್ತೆ ಫಲಕದಲ್ಲಿ ಮಾತ್ರ ರಾರಾಜಿಸುತ್ತಿದೆ. ಸರ್ಕಾರ ಈ ಕೂಡಲೆ ಸಮಗ್ರ ತನಿಖೆ ನಡೆಸಿ ಕ್ರಮ ಜರುಗಿಸಬೇಕಿದೆ ಮತ್ತು ರಸ್ತೆ ಸಮರ್ಪಕ ಸಂಚಾರಕ್ಕೆ ಸಿದ್ದಪಡಿಸಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಇದು ಸಾರ್ವಜನಿಕರ ಅನುಕೂಲಕ್ಕಾಗಿ ಮಾಡುತ್ತಿರುವ ಹೋರಾಟ ತೆರಿಗೆ ಹಣ ನಮ್ಮದು ಎನ್ನುವವರು ಕೈ ಜೋಡಿಸಿ ಲೆಕ್ಕ ಕೇಳಿ.
ಈ ಸಂಬಂಧ ಬುಧವಾರ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್, ಯೋಜನಾ ಉಪ ವಿಭಾಗ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಯಲ್ಲಾಪುರ ಇವರಲ್ಲಿ ಸಾಮಾಜಿಕ ಹೋರಾಟಗಾರರಾದ ಲಕ್ಷ್ಮಣ್ ಕೋಕರೆ, ಶ್ಯಾಮ್ ಸಿಂಧೇ, ದೊಂಡು ಕೊಕರೆ, ದೊಂಡು ಎಡಗೆ ಇವರು ಮನವಿ ಪತ್ರ ಸಲ್ಲಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ …

Leave a Reply

Your email address will not be published. Required fields are marked *