

ಪ್ರತಿಧ್ವನಿ ಯಲ್ಲಾಪುರ: ಅತ್ಯಂತ ಹಿಂದುಳಿದಿರುವ ಧನಗರಗೌಳಿ ಸಮುದಾಯ ಅತ್ಯಂತ ಮುಗ್ದ ಸಮಾಜವಾಗಿದ್ದು, ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ ಆದರೇ ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಸಮಾಜವಾಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಇತ್ತೀಚೆಗೆ ಗಣನೀಯವಾಗಿ ಮುಂದೆ ಬರುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಸಮಾಜ ಸೇವಕ ಕೊಡುಗೈ ದಾನಿ ಯುವ ನಾಯಕ ಬಾಲಕೃಷ್ಣ ನಾಯಕ್ ಹೇಳಿದರು.

ಅವರು ಪಟ್ಟಣದ ಲಕ್ಷ್ಮೀ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ರವಿವಾರ ಕರ್ನಾಟಕ ರಾಜ್ಯ ಧನಗರಗೌಳಿ ಯುವ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಉತ್ತರ ಕನ್ನಡ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಈ ಸಮಾಜದಲ್ಲಿ ಇತ್ತೀಚೆಗೆ ಭಾರತೀಯ ಸೇನೆಗೆ ಸೇರುವ ಯುವಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಲು ರಾಜ್ಯ ಯುವ ಸೇನೆ ಕಳೆದ ಮೂರು ವರ್ಷದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯ ಹಮ್ಮಿಕೊಳ್ಳುತ್ತಿರುವ ಕೆಲಸ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಈ ಸಮಾಜದ ಏಳಿಗೆಗಾಗಿ ತಾನೂ ಕೂಡ ಸದಾ ಸಹಕಾರ ನೀಡಲು ಕಟಿ ಬದ್ಧನಿರುವುದಾಗಿದ್ದೇನೆ ಹಾಗು ಸಮಾಜದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಮಾಜದ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.



2025-26 ನೆ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉತ್ತರ ಕನ್ನಡ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಧನಗರ ಗೌಳಿ ಯುವ ಸೇನೆ ವತಿಯಿಂದ ಗೌರವಿಸಿ ಸನ್ಮಾನಿಸಿ ನೆನೆಪಿನಕಾಣಿಕೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜದ ಮೊಟ್ಟ ಮೊದಲ ಲೆಕ್ಕಪರಿಶೋಧಕ (CA) ಭಾಗು ಡೋಯಿಪೊಡೆ ಅವರು ಮಾತನಾಡುತ್ತ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ತಿಳಿಸಿದರು. ಕಠಿಣ ಪರೀಕ್ಷೆಗಳನ್ನು ಎದುರಿಸಲು ಕಠಿಣ ಪರಿಶ್ರಮ ಬಹುಮುಖ್ಯವಾಗಿರುತ್ತದೆ. ಗುರಿ ತಲುಪಬೇಕಾದರೇ ಶಿಸ್ತಿನೊಂದಿಗೆ ಸಂಸ್ಕಾರ ಮೈಗೂಡಿಸಿಕೊಂಡಾಗ ಮಾತ್ರ ಗುರಿ ತಲುಪಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಜ್ಯ ಯುವ ಸೇನೆಯ ರಾಜ್ಯಾಧ್ಯಕ್ಷರಾದ ಸಂತೋಷ್ ವರಕ್ ಸಮಾಜದಲ್ಲಿ ಶಿಕ್ಷಣದ ಮಹತ್ವ ಬಗ್ಗೆ ತಿಳಿಸಿದರು. ಯಾವ ಸಮಾಜದಲ್ಲಿ ಶಿಕ್ಷಣಕ್ಕೆ ಮಹತ್ವ ನೀಡುವುದಿಲ್ಲವೋ ಅಂತಹ ಸಮಾಜ ಆಭಿವೃದ್ದಿ ಹೊಂದಲು ಅಸಾಧ್ಯ ಹಾಗೂ ಮುಖ್ಯವಾಹಿನಿಗೆ ಬರಲು ಇನ್ನೊಂದು ಶತಮಾನವೇ ಬೇಕಾಬಹುದು ಎಂದು ಅಭಿಪ್ರಾಯ ಪಟ್ಟರು. ಧನಗರಗೌಳಿ ಸಮಾಜ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಅವರನ್ನು ಕೂಡ ಗಂಡು ಮಕ್ಕಳಂತೆಯೇ ಶಿಕ್ಷಣಕೊಡಿಸಿದ್ದಲ್ಲಿ ಹೆಣ್ಣು ಮಕ್ಕಳು ಕೂಡ ಸಮಾಜಕ್ಕೆ ಗೌರವ, ಕೀರ್ತಿ ತರುವುದು ನಿಶ್ಚಿತ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಲ್ಲಿ ಮಾತ್ರ ಪಡೆದ ಶಿಕ್ಷಣಕ್ಕೆ ಮೌಲ್ಯ ಬರುತ್ತದೆ. ಶಿಕ್ಷಣ ಮತ್ತು ಸಂಸ್ಕಾರ ಒಂದೇ ಗಾಡಿಯ ಎರಡು ಚಕ್ರಗಳು, ಎರಡು ಕೂಡ ಸಮಾವಾಗಿ ಚಲಿಸಿದಾಗ ಮಾತ್ರ ಜೀವನದಲ್ಲಿ ಅಸಾಧ್ಯವಾದುದ್ದನ್ನು ಸಾಧ್ಯವಾಗಿಸಬಹುದು ಎಂದರು. ಇಟ್ಟ ಗುರಿಯನ್ನು ತಲುಪಬೇಕಾದರೇ ಕೆಣುಕುವರನ್ನು ಇಣುಕಿ ಸಹ ನೋಡಬಾರದು ಆಗ ಮಾತ್ರ ಹಿಡಿದ ಕನಸನ್ನು ನನಸು ಮಾಡಲು ಸಾಧ್ಯ ಎಂದರು.

ಸಮಾಜ ಸೇವೆಯನ್ನು ತಮ್ಮ ದ್ಯೇಯವಾಗಿಸಿಕೊಂಡು ನಿಷ್ಕಲ್ಮಷ ಮನಸ್ಸಿನಿಂದ ವಿಶೇಷವಾಗಿ ಗೌಳಿ ಸಮಾಜದ ಏಳಿಗೆಗಾಗಿ ಸಾಮಾಜಿಕ ಹಾಗು ಶೈಕ್ಷಣಿಕ ಕ್ಷೇತ್ದ ಉನ್ನತಿಗಾಗಿ ಶ್ರಮಿಸುತ್ತಿರುವ ಸಮಾಜಸೇವಕ ಭವಿಷ್ಯದ ನಾಯಕ ಬಾಲಕೃಷ್ಣ ನಾಯಕ್ ಅವರನ್ನು ಸಮುದಾಯದ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಧನಗರಗೌಳಿ ಸಮಾಜದ ಹಿರಿಯರಾ ಬಮ್ಮು ಬೀರು ಎಡಗೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಠ್ಠು ಶೆಳಕೆ, ಯುವ ಸೇನೆಯ ಪ್ರಧಾನ ಕಾರ್ಯದರ್ಶಿಗಳಾದ ಕೊಂಡು ಭಾವಧಾನೆ, ವೇಣುಗೋಪಾಲ್ ಪಟಕಾರೆ, ಉಪಾಧ್ಯಕ್ಷರಾದ ಬಾಬು ಶೇಂಡಗೆ, ಖಜಾಂಚಿಗಳಾದ ಲಕ್ಷ್ಮಣ ಕೋಕರೆ, ಸಂಘಟನಾ ಕಾರ್ಯದರ್ಶಿಗಳಾದ ಬಮ್ಮು ಫೋಂಡೆ, ಮಾಜಿ ಗ್ರಾಮಪಂಚಾಯತ್ ಸದಸ್ಯರಾದ ನಯನಾ ಶೇಂಡಗೆ, ನಿವೃತ್ತ ಸೈನಿಕರಾದ ಧೂಳು ಶಿಂಧೆ, ಹಿರಿಯರಾದ ಧೂಳು ಡೋಯಿಪೊಡೆ, ಮಾಲು ವರಕ್, ಸಾಮು ಜೋರೆ, ರಾಮು ಬಿಚ್ಚುಕಲೆ, ಜಾನು ಪಾಂಡ್ರಮೀಸೆ, ಯುವ ಸೇನೆಯ ಪಾದಾಧಿಕಾರಿಗಳು ಹಾಗೂ ಇತರರು ಇದ್ದರು.

ಸಮಾರಂಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗಳು,ಪೋಷಕರು,ಸಮಾಜದ ಹಿರಿಯರು ಸ್ಥಳೀಯ ನಾಗರಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡರು.
ಯುವ ಸೇನೆಯ ರಾಜ್ಯ ಗೌರವಾಧ್ಯಕ್ಷರಾದ ಲಕ್ಷ್ಮಣ ಬೋಡಕೆ ಸ್ವಾಗತಿಸಿದರು. ವನವಾಸಿ ವಿದ್ಯಾರ್ಥಿ ನಿಲಯದ ಮಕ್ಕಳು ಪ್ರಾರ್ಥಿಸಿದರು, ಕಾರ್ಯಕ್ರಮದ ಸಂಚಾಲಕ ಭರತ್ ಕೋಕ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ಜಾನಕರ್ ಕಾರ್ಯಕ್ರಮ ನಿರೂಪಿಸಿದರು, ಲಕ್ಷ್ಮಣ ಕೋಕ್ರೆ ವಂದಿಸಿದರು.













Prathidvani Yellapura