
ಪ್ರತಿಧ್ವನಿ ಯಲ್ಲಾಪುರ ಛಲ ಬಿಡದ ತ್ರಿವಿಕ್ರಮನಂತೆ, ಸರಕಾರ ಹಾಗೂ ಸಂಬಂಧಿತ ಇಲಾಖೆಗಳ ಬೆನ್ನು ಬಿದ್ದು, ಕುಮಟಾದಲ್ಲಿ ಅತ್ಯಾಧುನಿಕ ಟ್ರೋಮಾ ಸೆಂಟರ್ ಆಸ್ಪತ್ರೆ ಆರಂಭಿಸಿದ ಶಾಸಕ ದಿನಕರ ಶೆಟ್ಟರಿಗೆ, ನಾಗರಿಕ ವೇದಿಕೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಯಲ್ಲಾಪುರದ ನಾಗರಿಕ ವೇಧಿಕೆ ಅಧ್ಯಕ್ಷ ರಾಮುನಾಯ್ಕ್ ಮಾದ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಪ್ರತಿ ದಿನ ಒಂದಿಲ್ಲೊಂದು ವಾಹನ ಅಪಘಾತ, ಸಾವು ನೋವು ಸಂಭವಿಸುವ ಅರಬೈಲ ಘಟ್ಟದಂತಹ ಪ್ರದೇಶ ಹೊಂದಿರುವ ಯಲ್ಲಾಪುರ ತಾಲೂಕಿಗೂ ಇಂತಹ ಟ್ರೋಮಾ ಸೆಂಟರಿನ ಅವಶ್ಯಕತೆಯಿದೆ. ಇದು ನಮ್ಮ ಈಗಿನ ಬೇಡಿಕೆಯಲ್ಲ, ಯಲ್ಲಾಪುರ ನಾಗರಿಕರ ದಶಕಗಳ ಬೇಡಿಕೆಯಾಗಿದೆ.
ಟ್ರೋಮಾ ಸೆಂಟರ್ ಆಸ್ಪತ್ರೆ ಮಹತ್ವ
ಟ್ರೋಮಾ ಸೆಂಟರ್ ಅಂದರೆ, ಭೀಕರ ರಸ್ತೆ ಅಪಘಾತಗಳು, ಮರಗಿಡಗಳು, ಗುಡ್ಡ ಕುಸಿತ, ಆನೆ, ಹುಲಿ, ಕರಡಿ, ಹಾವು ಇತ್ಯಾದಿಗಳಿಂದ ತೊಂದರೆಯಾದವರಿಗೆ, 24×7 ಸೇವೆ ಸಲ್ಲಿಸುವ ಆಸ್ಪತ್ರೆಯಾಗಿದೆ. ಇಲ್ಲಿ ನುರಿತ ವೈಧ್ಯರು, ಸಿಬ್ಬಂಧಿ, ಅಂಬುಲೆನ್ಸ್, ಸಿ.ಟಿ.ಸ್ಕ್ಯಾನ್, ಎಂ.ಆರ್.ಐ. ಸ್ಕ್ಯಾನ್, ಐ.ಸಿ.ಯು.ಘಟಕ ಎಲ್ಲವೂ ಇರುತ್ತದೆ. ಸರಕಾರ ಅಪಘಾತ ವಲಯದವರಿಗೆಂದೇ ಈ ವಿಶೇಷ ಯೋಜನೆ ಜಾರಿಗೆ ತಂದಿದೆ.
ಈ ಭಾಗದಲ್ಲಿ ತೊಂದರೆಗೆ ಒಳಗಾದವರಿಗೆ 80-100 ಕಿ.ಮಿ.ದೂರದ ಹುಬ್ಬಳ್ಳಿ, ಕಾರವಾರ, ಕುಮಟಾ ಇತ್ಯಾದಿ ದೊಡ್ಡಾಸ್ಪತ್ರೆಗಳಿಗೆ ಒಯ್ಯಬೇಕಾಗುತ್ತದೆ. ಯಲ್ಲಾಪುರದಲ್ಲಿಯೇ ಟ್ರೋಮಾ ಆಸ್ಪತ್ರೆಯಾದರೆ, ಕೇವಲ 20 ಕಿ.ಮಿ.ಅಂತರದಲ್ಲಿಯೇ ನುರಿತ ವೈಧ್ಯಕೀಯ ಸೌಲಭ್ಯ ದೊರಕುತ್ತದೆ.
ಜಿಲ್ಲಾ ಆಸ್ಪತ್ರೆ ಬೇರೆಕಡೆಗೆ, ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇರೆ ಕಡೆಗೆ, ಮೆಡಿಕಲ್ ಕಾಲೇಜು ಬೇರೆಕಡೆಗೆ, ಈ ಅಪಘಾತ ವಲಯ ಯಲ್ಲಾಪುರಕ್ಕೆ ಕನಿಷ್ಠ ಒಂದು ಟ್ರೋಮಾ ಸೆಂಟರ್ ಆಸ್ಪತ್ರೆಯೂ ಬೇಡವೇ?. ಈಗಿನ ಸರಕಾರಿ ಆಸ್ಪತ್ರೆ ಚನ್ನಾಗಿ ಕೆಲಸ ಮಾಡುತ್ತಿದೆ. ಆದರೆ, 24×7 ವ್ಯವಸ್ಥೆ ಇರುವ ಟ್ರೋಮಾ ಸೆಂಟರ್ ಆದರೆ ಇನ್ನೂ ಅನುಕೂಲವಲ್ಲವೇ?.
ರಾಜ್ಯದ ನೂತನ ಮುಖ್ಯಮಂತ್ರಿಗಳ ಮೇಲೆ, ನೂತನ ಆರೋಗ್ಯ ಸಚಿವರು ಹಾಗೂ ನಮ್ಮ ಜಿಲ್ಲೆಯ ಉಸ್ತುವಾರಿಗಳೂ ಆಗಿರುವ ಯು.ಟಿ.ಖಾದರ್ ರವರ ಮೇಲೆ ಒತ್ತಡ ಹಾಕಿ, ನಮ್ಮ ಕ್ಷೇತ್ರದ ಜನಪ್ರತಿನಿಧಿಗಳೂ ತ್ರಿವಿಕ್ರಮರಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ













Prathidvani Yellapura