Breaking News

ಪರಿಸರಕ್ಕು ಪೂರಕ ಮನಸ್ಸಿಗು ನೆಮ್ಮದಿ  ಹೂ ಮತ್ತು ಹಣ್ಣಿನಗಿಡಗಳ ಪೋಷಣೆ – ಹಿಮವತಿ ಭಟ್ಟ..


ಪ್ರತಿಧ್ವನಿ ಯಲ್ಲಾಪುರ : ಪ್ರತಿಯೊಬ್ಬರ ಮನೆಗಳಲ್ಲಿ ಹೂವು, ಹಣ್ಣಿನ ಗಿಡಗಳನ್ನು ಬೆಳೆಸುವ ಅಭ್ಯಾಸ ಶ್ರೇಷ್ಠವಾದದ್ದು. ಅದನ್ನು ಪ್ರತಿಯೊಬ್ಬ ಮಹಿಳೆಯರೂ ರೂಢಿಸಿಕೊಳ್ಳಬೇಕು. ಪರಿಸರಕ್ಕೂ ಪೂರಕವಾಗಿರುವುದಲ್ಲದೇ ಮಾನಸಿಕ ನೆಮ್ಮದಿಯ ಜೊತೆ ಆರ್ಥಿಕವಾಗಿ ಮಹಿಳೆಯರಿಗೆ ಸಬಲತೆಯನ್ನು ಉಂಟುಮಾಡುತ್ತದೆ ಎಂದು ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಹೇಳಿದರು.


ಅವರು, ಶನಿವಾರ ಪಟ್ಟಣದ ಎ.ಪಿ.ಎಂ.ಸಿ.ಯ ಶ್ರೀಮಾತಾ ಟ್ರೇಡಿಂಗ್ ಕಂಪೆನಿ ಆವಾರದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಸಸ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.



ಮಹಿಳೆಯರಲ್ಲಿ ಪರಿಸರಕ್ಕೆ ಪೂರಕವಾದ ಇಂತಹ ಸಸ್ಯಗಳನ್ನು ಬೆಳೆಸುವ ಮೂಲಕ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಂಡು, ನಮ್ಮ ಆರೋಗ್ಯದ ರಕ್ಷಣೆಯನ್ನೂ ಮಾಡಿಕೊಳ್ಳಬಹುದು. ಆ ದೃಷ್ಟಿಯಲ್ಲಿ ನಮ್ಮ ಸಂಘಟನೆ ಕಳೆದ ೮ ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ವರ್ಷ ಹತ್ತನೇ ಕಾರ್ಯಕ್ರಮವನ್ನು ಅತ್ಯಂತ ವಿಶೇಷವಾಗಿ ಗಿಡಗಳ ಮಾರಾಟ ಪ್ರದರ್ಶನಗಳ ಜೊತೆ ಹಳ್ಳಿಯ ತಿಂಡಿ-ತಿನಿಸುಗಳ ವ್ಯಾಪಾರ ವಿನಿಮಯವನ್ನೂ, ಉಡುಪುಗಳ ಮಾರಾಟವನ್ನು ಏರ್ಪಡಿಸಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದ ಅವರು, ನಮ್ಮ ತಾಲೂಕಿನವರೇ ಆದ ಗೀತಾ ವೈದ್ಯ ಹಲವು ರೀತಿಯ ಚಿಕಿತ್ಸೆಗಳನ್ನು ನೀಡಿ, ಅನೇಕ ಮಹಿಳೆಯರ ಆತ್ಮಬಲವನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿರುವುದು ನಮಗೆಲ್ಲ ಸಂತಸ ತಂದಿದೆ. ಆ ನೆಲೆಯಲ್ಲಿ ಅವರನ್ನು ನಮ್ಮ ಸಂಘಟನೆ ಸನ್ಮಾನಿಸಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ, ತ್ರಿಪುರಾಂಬಿಕಾ ಒಕ್ಕೂಟದ ನಿರ್ದೇಶಕಿ ಮುಕ್ತಾ ಶಂಕರ ಹೇಳಿದರು.

 ಇದೇ ಸಂದರ್ಭದಲ್ಲಿ ಚಿಕಿತ್ಸಕಿ ಗೀತಾ ರಾಜಾರಾಮ ವೈದ್ಯ ಅವರನ್ನು ಸನ್ಮಾನಿಸಲಾಯತು. ನಂತರ ಮಾತನಾಡಿದ ಅವರು ಯಲ್ಲಾಪುರದಲ್ಲೂ ಇಂತಹ ಸಸ್ಯ ಮೇಳವನ್ನು ಆಯೋಜಿಸಿರುವುದು ಸಂತಸ ತಂದಿದೆ. ಎಲ್ಲ ಮಹಿಳೆಯರಿಗೂ ಇದೊಂದು ಪ್ರೇರಣೆಯಾಗಲಿದೆ. ಇಂತಹ ಸಂದರ್ಭದಲ್ಲಿ ನನ್ನನ್ನು ಗುರುತಿಸಿ, ಸನ್ಮಾನ ನೀಡಿರುವುದು ನನಗೆ ಸಂತಸ. ಸಂಘಟಕರನ್ನು ನಾನು ಹೃದಯತುಂಬಿ ಅಭಿನಂದಿಸುತ್ತೇನೆ ಎಂದರು.
ಶ್ರೀಮಾತಾ ಟ್ರೇಡಿಂಗ್ ಕಂಪನಿ ಮಾಲಕ ಶ್ರೀಪಾದ ಭಟ್ಟ ಮಾತನಾಡಿ, ಮಹಿಳೆಯರು ಆಸಕ್ತಿ, ಶ್ರದ್ಧೆಯಿಂದ ಇಂತಹ ಉತ್ತಮ ಕಾರ್ಯ ಮಾಡುತ್ತಿರುವುದನ್ನು ಗಮನಿಸಿ, ನಮ್ಮ ಸಂಸ್ಥೆಯಿಂದ ಎಲ್ಲ ರೀತಿಯ ನೆರವನ್ನು ನೀಡುತ್ತಿದ್ದೇವೆ. ಇದು ರಾಜ್ಯ, ದೇಶ ವ್ಯಾಪ್ತಿಯಲ್ಲಿ ಪಸರಿಸುವಂತಾಗಲಿ ಎಂದರು.


ಮನೆಯಂಗಳದಲ್ಲಿ ಗಿಡಗಳನ್ನು ಬೆಳೆಸುವಲ್ಲಿ ಸಾಧನೆ ಮಾಡಿದ ಶ್ವೇತಾ ಗೇರಗದ್ದೆ ಗಿಡಗಳನ್ನು ಹೇಗೆ ಬೆಳೆಸಬೇಕೆಂಬ ಬಗ್ಗೆ ವಿವರಿಸಿದರು.
ಕುಮಾರ ಅಕ್ಷಯ ಭಟ್ಟ ಮಣ್ಮನೆ ಪ್ರಾರ್ಥಿಸಿದನು. ಒಕ್ಕೂಟದ ಉಪಾಧ್ಯಕ್ಷೆ ಸಂಧ್ಯಾ ಕೊಂಡದಕುಳಿ ಸ್ವಾಗತಿಸಿದರು. ಅಧ್ಯಕ್ಷೆ ಜಾಹ್ನವಿ ಮಣ್ಮನೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗಾಯತ್ರಿ ಬೋಳಗುಡ್ಡೆ ನಿರ್ವಹಿಸಿದರು. ನಿರ್ದೇಶಕಿಯರಾದ ಆಶಾ ಪಟೇಲ ಸನ್ಮಾನ ಪತ್ರ ವಾಚಿಸಿದರು. ಅನಿತಾ ಹೆಗಡೆ ವಂದಿಸಿದರು.


ಎ.ಪಿ.ಎಂ.ಸಿ.ಯ ಶ್ರೀಮಾತಾ ಟ್ರೇಡಿಂಗ್ ಕಂಪೆನಿ ಆವಾರದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡ ಸಸ್ಯ ಸಂಭ್ರಮದಲ್ಲಿ ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ವಿವಿಧ ಸಸ್ಯ ಮಳಿಗೆಗಳನ್ನು ಉದ್ಘಾಟಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪ್ರಥದರ್ಜೆ ಕಾಲೇಜಿನಲ್ಲಿ SIR ಕುರಿತ ಜಾಗೃತಿ ಕಾರ್ಯಕ್ರಮ.

ಪ್ರತಿಧ್ವನಿ ಯಲ್ಲಾಪುರ : ಮತದಾರರ ಪಟ್ಟಿಯ ಶುದ್ಧತೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಎಸ್‌.ಐ.ಆರ್ ಪ್ರಕ್ರಿಯೆ ಅತ್ಯಂತ ಮಹತ್ವಪೂರ್ಣ ಆಗಿದೆ. ಪ್ರತಿಯೊಬ್ಬ …

Leave a Reply

Your email address will not be published. Required fields are marked *