
ಪ್ರತಿಧ್ವನಿ ಯಲ್ಲಾಪುರ (ಬೆಂಗಳೂರು, ಮಾರ್ಚ್ 23) : ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಸೋಮವಾರ ವಿಧಾನಸಭೆಯ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಮುಂಡಗೋಡ ತಾಲೂಕಿನ ಮಳಗಿ, ಪಾಳಾ ಹಾಗೂ ಬನವಾಸಿ ಹೋಬಳಿ ವ್ಯಾಪ್ತಿಯ ಬದನಗೋಡ ಭಾಗದಲ್ಲಿ ಉಂಟಾಗುತ್ತಿರುವ ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಸದನದ ಗಮನ ಸೆಳೆದರು.

ಸದನದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಬ್ಯಾಡಗಿ ಹಾಗೂ ಸವಣೂರಿನಲ್ಲಿ ರೈಲ್ವೆ ಟ್ರ್ಯಾಕ್ಷನ್ ಉಪಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಪರಿಣಾಮವಾಗಿ, ಹಾವೇರಿ ಜಿಲ್ಲೆಯಿಂದ ನಮ್ಮ ಕ್ಷೇತ್ರದ ಮಳಗಿ, ಪಾಳಾ, ಕಾತೂರ ಹಾಗೂ ಬದನಗೋಡ ಪ್ರದೇಶಗಳಿಗೆ ನೀಡುವ ವಿದ್ಯುತ್ ನಲ್ಲಿ ಸುಮಾರು 7 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ ಎಂದು ವಿವರಿಸಿದರು. ಇದರ ಪರಿಣಾಮವಾಗಿ ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿರುವ ರೈತರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನು ಮನಗಂಡು, ಮುಂಡಗೋಡ ತಾಲೂಕಿನ ಕಾತೂರ ಗ್ರಾಮದಲ್ಲಿ ಈಗಾಗಲೇ ಸುಮಾರು 1 ಎಕರೆ ಜಾಗವನ್ನು ವಿದ್ಯುತ್ ಗ್ರೀಡ್ ನಿರ್ಮಾಣಕ್ಕಾಗಿ ಮೀಸಲಿರಿಸಲಾಗಿದ್ದು, ಈ ಸ್ಥಳದಲ್ಲಿ 110 ಕೆ.ವಿ ಸಾಮರ್ಥ್ಯದ ನೂತನ ಗ್ರೀಡ್ ಮಂಜೂರು ಮಾಡುವಂತೆ ಸಂಬಂಧಿತ ಸಚಿವರಿಗೆ ಮನವಿ ಸಲ್ಲಿಸಿದರು.

ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಧನ ಸಚಿವರಾದ ಕೆ. ಜೆ. ಜಾರ್ಜ್ ಅವರು, ಈ ವಿಷಯವನ್ನು ತುರ್ತುವಾಗಿ ಪರಿಗಣಿಸಿ ಕರ್ನಾಟಕ ರಾಜ್ಯ ವಿದ್ಯುತ್ ಸರಬರಾಜು ಮಂಡಳಿಯ ಸಭೆಯಲ್ಲಿ ನೂತನ 110 ಕೆ.ವಿ ಸಾಮರ್ಥ್ಯದ ಗ್ರೀಡ್ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.





Prathidvani Yellapura