






ಪ್ರತಿಧ್ವನಿ ಯಲ್ಲಾಪುರ : ಕಳೆದು ಹೋದ ಬೇಸಿಗೆ ಯಲ್ಲಾಪುರ ತಾಲೂಕಿನ ಜನತೆಗೆ ಹಲವು ಸೂಕ್ಷ್ಮ ಮುನ್ನೆಚ್ಚರಿಕೆ ನೀಡಿದೆ. ಪ್ರತಿಬಾರಿಗಿಂತ ಬಿಸಿಲಿನ ತಾಪಮಾನ 35 ರಿಂದ 40 ಡಿಗ್ರಿಯಷ್ಟು ಏರಿಕೆಯಾಗಿತ್ತು. ಇದು ಅಪಾಯದ ಮುನ್ಸೂಚನೆಯಾಗಿದ್ದು ಅರಿತು ಎಚ್ಚೆತ್ತುಕೊಂಡರೆ ಭವಿಷ್ಯದಲ್ಲಿ ಇಂತಹ ಸವಾಲನ್ನು ಎದುರಿಸಬಹುದಾಗಿದೆ.

ಈ ವರ್ಷ ಬೇಸಿಗೆ ಅತ್ಯಂತ ಪ್ರಖರವಾಗಿದ್ದು ಜೀವ ಸಂಕುಲವೆ ಬೆಚ್ಚಿ ಬೀಳುವಂತಿತ್ತು. ಆ ಸಮಯದಲ್ಲಿ ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸಿದನ್ನು ನೋಡಿದ್ದೇವೆ ಓದಿದ್ದೇವೆ ನಂತರ ಮಳೆಗಾಲ ಪ್ರಾರಂಭವಾಗುತ್ತಲೆ ಎಲ್ಲವನ್ನು ಮರೆತು ಯಥಾ ಪ್ರಕಾರ ಮುಂದುವರೆಯುತ್ತಿದ್ದೇವೆ ಇದು ಆತಂಕದ ನಡಿಗೆಯಾಗಲಿದೆ. ಭವಿಷ್ಯದ ದಿನಗಳಿಗೆ ಇದು ಪಾಠವಾಗಬೇಕಿದೆ.

ಸರ್ಕಾರ ವಿನೂತನ ಪ್ರಯತ್ನದೊಂದಿಗೆ ಮಳೆನೀರು ಕೊಯ್ಲು ಯೋಜನೆಯನ್ನು ವ್ಯಾಪಕವಾಗಿ ಜಾಗೃತಗೊಳಿಸಿ ಬಾವಿ, ಕೊಳವೆ ಬಾವಿ, ಕೆರೆ, ಕಟ್ಟೆಗಳಲ್ಲಿ ನೀರು ಹೆಚ್ಚು ಶೇಖರಣೆಯಾಗುವಂತೆ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡಬೇಕಿದೆ. ಇದರಿಂದ ಭವಿಷ್ಯದ ಬೇಸಿಗೆಯು ತನ್ನ ಪ್ರಖರತೆಯ ತೀಕ್ಷ÷್ಣತೆಯನ್ನು ತಗ್ಗಿಸಿಕೊಳ್ಳಬಹುದಾಗಿದೆ ಎಂಬುದು ಹಲವರ ಅನಿಸಿಕೆಯಾಗಿದೆ.

ಈಗಾಗಲೆ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಗಾಗಿ ಅಲ್ಲಲ್ಲಿ ಗುಂಡಿಗಳನ್ನು ನಿರ್ಮಾಣ ಮಾಡಿದ್ದು ಅದನ್ನೆ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ಒತ್ತುಕೊಟ್ಟು ಮಳೆಗಾಲದಲ್ಲಿ ನೀರು ಶೇಖರಣೆಯಾಗುವಂತೆ ನೋಡಿಕೊಳ್ಳಬೇಕಿದೆ. ಗ್ರಾಮೀಣ ಭಾಗದ ಕೆರೆಗಳ ಪುನಶ್ಚೇತನಕ್ಕೆ ಮುಂದಾಗಬೇಕಿದೆ. ಆಯಾ ವ್ಯಾಪ್ತಿಯ ಅರಣ್ಯ ಇಲಾಖೆಗೆ ಈ ಜವಾಬ್ದಾರಿ ನೀಡಿ ನೀರು ಸಂಗ್ರಹಿಸುವ ಕಾರ್ಯ ಮಾಡಬೇಕಿದೆ. ಇದರಿಂದ ಭೂಮಿಯ ತಾಪಮಾನದ ಸಮತೋಲನಕ್ಕೆ ಸಹಕಾರಿಯಾಗುವುದಲ್ಲದೆ ಅಂತರ್ಜಲ ಮಟ್ಟ ಹೆಚ್ಚಲೂ ಕಾರಣವಾಗುತ್ತದೆ. ಗಿಡ ಮರಗಳಿಗೆ ಪ್ರಾಣಿ ಪಕ್ಷಿಗಳಿಗೆ ನೀರಿನ ಅವಶ್ಯಕತೆ ಪೂರೈಕೆಯಾಗುವುದು ಹಾಗು ಬೇಸಿಗೆ ಸಮಯದಲ್ಲಿ ಆಕಸ್ಮಿಕವಾಗಿ ಅರಣ್ಯಕ್ಕೆ ತಗಲುವ ಬೆಂಕಿ ನಂದಿಸಲು ಅಲ್ಲಲ್ಲಿ ಕೆರೆಗಳಂತಹ ಗುಂಡಿಗಳಲ್ಲಿ ನೀರು ಇದ್ದರೆ ಸಹಕಾರಿಯಾಗಲಿದೆ.

ಸರ್ಕಾರ ಮಳೆನೀರು ಕೊಯ್ಲಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಸುರಿದ ಮಳೆ ನೀರು ಸಮುದ್ರ ಸೇರುವುದನ್ನು ಶತಾಯಗತಾಯ ತಡೆದು ತಾಲೂಕಿನ ವ್ಯಾಪ್ತಿಯಲ್ಲಿ ನೀರು ಇಂಗಿಸುವ ಕಾರ್ಯವಾಗಬೇಕಿದೆ.

ಯಲ್ಲಾಪುರ ಪಟ್ಟಣವಂತು ಕೇವಲ ಕೊಳವೆ ಬಾವಿಗಳನ್ನೆ ಆಶ್ರಯಿಸಿ ಪಟ್ಟಣದ ಜನರ ನೀರಿನ ಬೇಡಿಕೆ ಪೂರೈಸುತ್ತಾ ಬರುತ್ತಿರುವ ಅಪರೂಪದ ಪಟ್ಟಣ ಪಂಚಾಯತಗಳಲ್ಲಿ ಒಂದಾಗಿದೆ. ಪಟ್ಟಣದಲ್ಲಿ ಸುಮಾರು 9 ಕೆರೆಗಳಿದ್ದು ಅಂತರ್ಜಲ ಹೆಚ್ಚಿಸುವ ಕಾರ್ಯ ಮಾಡುತ್ತಿವೆ ಅವುಗಳ ಹದ್ದುಬಸ್ತು ಮಾಡಿ ಪಿಚ್ಚಿಂಗ್ ಕಟ್ಟಿ ಸುತ್ತಲಿನ ಪರಿಸರ ಸ್ವಚ್ಚವಾಗಿಟ್ಟು ಕೆರೆಯ ವ್ಯಾಪ್ತಿ ಅತಿಕ್ರಮಣಗೊಳಗಾಗದಂತೆ ಒಂದಾನು ವೇಳೆ ಅತಿಕ್ರಮಣವಾಗಿದ್ದರೆ ಯಾವುದೆ ಮುಲಾಜಿಗೊಳಗಾಗದೆ ಭವಿಷ್ಯದ ಪೀಳಿಗೆಯನ್ನು ಮನದಲ್ಲಿಟ್ಟು ತತಕ್ಷಣ ತೆರವುಗೊಳಿಸಿ ನೀರು ಶೇಖರಣೆ ಹೆಚ್ಚಿನ ಮಟ್ಟದಲ್ಲಿ ಆಗುವಂತೆ ನೋಡಿಕೊಳ್ಳಬೇಕಿದೆ.

ಒಟ್ಟಿನಲ್ಲಿ ವೇದಿಕೆಯಲ್ಲಿ ಭಾಷಣಕ್ಕೆ ಲೇಖನಗಳಲ್ಲಿ ವರ್ಣನೆಗೆ ಯಲ್ಲಾಪುರ ತಾಲೂಕು ಸುಂದರ ಜಲಪಾತಗಳ ಆಗರವಾಗಿದೆಯೆ ಹೊರತು ದುಮ್ಮಿಕ್ಕಿ ಹರಿವ ಜಲಪಾತದ ನೀರು ತಾಲೂಕಿನ ವ್ಯಾಪ್ತಿಯಲ್ಲಿ ಉಳಿಯದೆ ಸರಾಗವಾಗಿ ಸಮುದ್ರ ಸೇರುತ್ತಿದೆ ಇದನ್ನು ತಡೆದು ಕುಡಿಯುವ ಮತ್ತು ಇತರೆ ಬಳಕೆಗೆ ನೀರು ಬಳಸಿಕೊಳ್ಳುವಂತಾಗಬೇಕಿದೆ.

ನೀರಿನ ಕುರಿತು ನಗರ ಪ್ರದೇಶಗಳಲ್ಲಿ ಇರುವ ಜಾಗೃತಿ ಗ್ರಾಮೀಣ ಭಾಗದಲ್ಲಿ ಇಲ್ಲದಿರುವುದು ದುರಂತವಾಗಿದೆ. ಮಳೆ ನೀರಿನ ಕೊಯ್ಲು ಅತ್ಯಂತ ಉತ್ತಮ ಯೋಜನೆಯಾಗಿದೆ. ಭೂಮಿಯ ವಾತಾವರಣ ತಂಪಾಗಿಸಲು ಮರಗಿಡಗಳು ಹಸಿರಾಗಿರಲು ಅಂತರ್ಜಲ ಮಟ್ಟ ಏರಲು ಮಳೆ ನೀರು ಕೊಯ್ಲು ಒಂದು ವರದಾನವಾಗಲಿದೆ. ಸದ್ಯ ಸರ್ಕಾರ ಮಟ್ಟದಲ್ಲಿ ಗ್ರಾಮ ಪಂಚಾಯತ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಅಳವಡಿಸಲು ನಿರ್ದೇಶನ ಬಂದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವಾಗಲಿದೆ. – ನಟರಾಜ್ ತಾಲೂಕು ಪಂಚಾಯತ್ ಆಡಳಿತಾಧಿಕಾರಿ.
Prathidvani Yellapura