
ಪ್ರತಿಧ್ವನಿ ಯಲ್ಲಾಪುರ : ಮತದಾರರ ಪಟ್ಟಿಯ ಶುದ್ಧತೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಎಸ್.ಐ.ಆರ್ ಪ್ರಕ್ರಿಯೆ ಅತ್ಯಂತ ಮಹತ್ವಪೂರ್ಣ ಆಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಬೇಕೆಂದು ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಡಾ,ಆರ್.ಡಿ.ಜನಾರ್ಧನ್ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲ್ಲಾಪುರದ ಚುನಾವಣಾ ಸಾಕ್ಷರತಾ ಕ್ಲಬ್ (Electoral Literacy Club) ವತಿಯಿಂದ ಹಮ್ಮಿಕೊಂಡ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಕುರಿತ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಸಂತೋಷ್ ಕುಮಾರ್ ಜಿಗಳೂರ್ ಸಂಯೋಜಕರು, ಬ್ಲಾಕ್ ಸಂಪನ್ಮೂಲ ಕೇಂದ್ರ, ಶಾಲಾ ಶಿಕ್ಷಣ ಇಲಾಖೆ ಯಲ್ಲಾಪುರ, ಮಾತನಾಡಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಸಮಗ್ರಕುರಿತು ಸಮಗ್ರ ಹಾಗೂ ವಿಶೇಷ ಉಪನ್ಯಾಸ ನೀಡಿದರು. ಅವರು ಎಸ್.ಐ.ಆರ್ನ ಉದ್ದೇಶ, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ, ಹೊಸ ಮತದಾರರ ನೋಂದಣಿ, ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ಅಳಿಸುವಿಕೆ, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ನಾಗರಿಕರ ಪಾತ್ರದ ಕುರಿತು ವಿವರವಾಗಿ ಮಾಹಿತಿ ನೀಡಿದರು. ಜೊತೆಗೆ, ಭಾರತ ಚುನಾವಣಾ ಆಯೋಗದ ನಿರ್ದೇಶನಗಳು ಹಾಗೂ ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವಲ್ಲಿ ಮತದಾರರ ಜಾಗೃತಿಯ ಮಹತ್ವವನ್ನು ಉದಾಹರಣೆಗಳೊಂದಿಗೆ ಮನದಟ್ಟು ಮಾಡಿದರು.
ಚುನಾವಣಾ ಸಾಕ್ಷರತಾ ಕ್ಲಬ್ನ ಉದ್ದೇಶಗಳು, ಮತದಾನದ ಮಹತ್ವ ಹಾಗೂ ಎಸ್.ಐ.ಆರ್ ಅಭಿಯಾನದ ಹಿನ್ನೆಲೆ, ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿವು ಬೆಳೆಸಿಕೊಳ್ಳುವ ಅಗತ್ಯವನ್ನು ಸಾಕ್ಷರತಾ ಕ್ಲಬ್ನ ಸಂಚಾಲಕಿ,ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರುಬೀನಾಖಾತು ಪ್ರಾಸ್ತಾವಿಕ ನುಡಿಯೊಂದಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಂತೇರಿ ದಾಮೋದರ್ ಪೈ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಚುನಾವಣಾ ಅರಿವು, ಮತದಾರರ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಮೂಡಿಸಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.












Prathidvani Yellapura