
ಕೇಬಲ್ ನಾಗೇಶ್, ಯಲ್ಲಾಪುರ..🖋
ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಕಾರ್ಮಿಕ ಇಲಾಖೆ ಎಂಬ ಒಂದು ವ್ಯವಸ್ಥೆ ಕೆಲಸ ಮಾಡುತ್ತಿದೆ ಎಂಬುದನ್ನು ನಾಡಿಗೆ ತೋರಿಸಿಕೊಟ್ಟು ಕಾರ್ಮಿಕ ಇಲಾಖೆಗೊಂದು ನವ ಚೈತನ್ಯ ತುಂಬಿ ಶ್ರಮಿಕ ವರ್ಗಕ್ಕೊಂದು ಘನತೆ ತಂದು ಕೊಟ್ಟ ಕೀರ್ತಿ ಅರಬೈಲ್ ಶಿವರಾಮ ಹೆಬ್ಬಾರ್ ಅವರಿಗೆ ಸಲ್ಲುತ್ತದೆ.

ಯಾವುದೇ ನೂತನ ಸರ್ಕಾರ ರಚನೆ ಸಂದರ್ಭದಲ್ಲಿ ವಿವಿಧ ಖಾತೆಗಳ ಹಂಚಿಕೆಯಲ್ಲಿ ಲಾಭಿ ನಡೆಯುವುದು ಸಹಜ ಆದರೆ ಲಾಭಿ ನಡೆಯದೆ ಹಾಗೆ ಉಳಿಯುತ್ತಿದ್ದ ಖಾತೆ ಎಂದರೆ ಅದು ಕಾರ್ಮಿಕ ಖಾತೆ ಅದು ಕೊನೆಯಲ್ಲಿ ಅಳಿದುಳಿದ ಅಸಮದಾನಿತರಿಗೆ ಕೊಡುತ್ತ ಸಮಾದಾನಪಡಿಸುವ ಖಾತೆಯಾಗಿ ಮಾರ್ಪಾಡಾಗಿತ್ತು. ಇಂತಹ ಸಂದರ್ಭದಲ್ಲಿ ಆ ಖಾತೆಗೆ ಹೊಸ ಬಾಷ್ಯ ಬರೆದು ರಾಜ್ಯದಲ್ಲಿ ಕಾರ್ಮಿಕ ಖಾತೆಗೆ ಲಾಭಿ ನಡೆಸುವಷ್ಟರ ಮಟ್ಟಿಗೆ ಆ ಖಾತೆಗೆ ಪ್ರಾಮುಖ್ಯತೆ ತಂದು ಕೊಟ್ಟದ್ದು ಅಂದಿನ ಕಾರ್ಮಿಕ ಸಚಿವ ಹಾಲಿ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್.

ರಾಜ್ಯದ ಕಾರ್ಮಿಕ ಇಲಾಖೆ ತಮ್ಮ ಹೆಗಲಿಗೆ ಹೊತ್ತವರು ಅದನ್ನು ಇಳಿಸುವ ವೇಳೆಗೆ ಬೃಹದಾಕಾರವಾಗಿ ಬೆಳೆದ ಇಲಾಖೆಯಾಗಿತ್ತು. ಹತ್ತು ಹಲವು ಶ್ರಮಿಕರಪರ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಯಿತು. ದೇಶಕ್ಕೆ ಅನ್ನ ನೀಡುವ ರೈತ,ದೇಶ ಕಾಯುವ ಸೈನಿಕ, ಅಕ್ಷರ ಕಲಿಸುವ ಶಿಕ್ಷಕ ಎಷ್ಟು ಪ್ರಾಮುಖ್ಯತೆ ಪಡೆದಿದ್ದಾರೊ ಅಷ್ಟೇ ಸಮನಾಗಿ ದೇಶ ಕಟ್ಟುವ ಕಾರ್ಮಿಕರ ಶ್ರಮ ದೇಶದ ಪ್ರಗತಿಯ ಮೈಲಿಗಲ್ಲು ಎಂಬುದನ್ನು ರಾಷ್ಟ್ರಕ್ಕೆ ಪರಿಚಯಿಸಿದವರು ಶಿವರಾಮ ಹೆಬ್ಬಾರ್.

ಒಬ್ಬ ಕೂಲಿ ಕಾರ್ಮಿಕನ ಮಗ ಅಥವಾ ಮಗಳು ಪೈಲಟ್ ಆಗುವ ಕನಸು ನನಸಾಗಿಸಿದ ಕೀರ್ತಿ ಹೆಬ್ಬಾರ್ ಅವರಿಗೆ ಸಲ್ಲುತ್ತದೆ. ವಿವಿಧ ರೂಪದ ವಿದ್ಯಾರ್ಥಿ ನಿಧಿ, ಲ್ಯಾಪ್ ಟಾಪ್ ವಿತರಣೆ, ದುಡಿಯುವ ಕೈಗಳಿಗೆ ಬೇಕಾದ ಸಾಮಾಗ್ರಿಗಳ ಕಿಟ್, ಸಂಕಷ್ಟದಲ್ಲಿ ಆಹಾರದ ಕಿಟ್, ಕಾರ್ಮಿಕ ಹೆಣ್ಣು ಮಕ್ಕಳ ಮದುವೆಗೆ ಸಹಾಯ, ಮನೆ ಕಟ್ಟಲು ಸಹಾಯ ಹೀಗೆ ಹತ್ತು ಹಲವು ಜನಪರ ಯೋಜನೆಗಳ ಪ್ರವಾಹವನ್ನೆ ಹರಿಸಿದವರು ಹೆಬ್ಬಾರ್ ಅವರು.

ಹೆಬ್ಬಾರ್ ಅವರು ಕಾರ್ಮಿಕ ಇಲಾಖೆ ಹೊಸ ಚೈತನ್ಯ ತುಂಬಿದ ನಂತರ ಕಾರ್ಮಿಕ ಕಾಡ್೯ ಗಳಿಗಾಗಿ ಮುಗಿಬಿದ್ದವರೆ ಹೆಚ್ಚು. ವಿಶೇಷವಾಗಿ ಕಾರ್ಮಿಕ ಅಧಿಕಾರಿಗಳು ಯಾರೆಂಬುದೇ ಜನರಿಗೆ ತಿಳಿಯದಿದ್ದ ಕಾಲದಲ್ಲಿ ಶ್ರಮಿಕ ವರ್ಗ ಇಲಾಖೆಯ ಅಧಿಕಾರಿಗಳು ಯಾರು ನಮ್ಮ ಕಚೇರಿ ಎಲ್ಲಿದೆ ಎಂದು ಹುಡುಕಾಟ ಪ್ರಾರಂಭಿಸಿದ್ದೆ ಹೆಬ್ಬಾರ್ ಕಾಲದಲ್ಲಿ ಅನ್ನೊದೆ ವಿಶೇಷ.

ಶಾಸಕ ಶಿವರಾಮ ಹೆಬ್ಬಾರ್ ಅವರ ರಾಜಕೀಯ ಸ್ಥಿತ್ಯಂತರದ ಸಂದರ್ಭದಲ್ಲಿ ಒಲಿದ ಕಾರ್ಮಿಕ ಖಾತೆಗೆ ತಾವು ಕಂಡಿದ್ದ ಬಡತನದ ಅನುಭವ ಹಾಗು ತಾವೆ ಒಬ್ಬ ಕ್ಲೀನರ್ / ಡ್ರೈವರ್ ಆಗಿ ಕಂಡ ಕಷ್ಟಗಳನ್ನು ಉದಾಹರಣೆಯಾಗಿಸಿಕೊಂಡು ತಮ್ಮ ಅಧಿಕಾರವಧಿಯಲ್ಲಿ ಶ್ರಮಿಕ ವರ್ಗಕ್ಕೆ ಏನೆಲ್ಲಾ ಸಹಾಯ ಸಹಕಾರ ಮಾಡಬೇಕೆನಿಸಿಕೊಂಡುದ್ದರೊ ಅದಕ್ಕಿಂತ ಹೆಚ್ಚಿನ ಸವಲತ್ತುಗಳನ್ನು ಶ್ರಮಿಕ ವರ್ಗಕ್ಕೆ ಸಲ್ಲುವಂತೆ ಮಾಡಿದ್ದಾರೆ.
ಹಿತ್ತಲ ಗಿಡ ಮದ್ದಲ್ಲ ಅನ್ನೊ ಮಾತು ಸತ್ಯ ಕಾರಣ ಶ್ರಮಿಕ ವರ್ಗದ ಏಳಿಗೆಗಾಗಿ ದುಡಿದ ಅಪ್ಪಟ ಕಾರ್ಮಿಕ ಶಿವರಾಮ ಹೆಬ್ಬಾರ್ ಶ್ರೇಷ್ಟತೆ ಹಳೆ ಮೈಸೂರು ಭಾಗದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂದಿಗೂ ಹೆಬ್ಬಾರ್ ಅವರ ಭಾವಚಿತ್ರ ಪ್ರತಿ ಕಾರ್ಮಿಕರ ಮನೆಯ ಗೋಡೆಯೇಲಿದೆ.









ಯಲ್ಲಾಪುರ-ಮುಂಡಗೋಡು-ಬನವಾಸಿ ಭಾಗಗಳಲ್ಲಿ ಶಾಸಕ ಶಿವರಾಮ ಹೆಬ್ಬಾರ್ ರಾಜಕೀಯ ನಡೆಯ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದರೆ ಕನ್ನಡ ನಾಡಿನ ಶ್ರಮಿಕ ವರ್ಗ ಅವರ ಮನೆಗಳಿಗೆ ಮತ್ತು ಬದುಕಿಗೆ ಬೆಳಕು ತಂದ ಅವರ ದೂರದೃಷ್ಟಿ ಯೋಜನೆಗಳ ಬಗ್ಗೆ ನೆನಪಿಸುತ್ತಾರೆ.
ಒಬ್ಬ ಜನನಾಯಕ ದೀರ್ಘ ಕಾಲ ಜನತೆಯ ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವುದು ಅವರು ಜನೋಪಯೋಗಿ ಯೋಜನೆಗಳನ್ನು ಅನುಷ್ಟನಕ್ಕೆ ತಂದಾಗ ಮಾತ್ರ.

ಹಿಂದೆ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಶಿಕ್ಷಣ ಖಾತೆ ನಿಭಾಯಿಸಿದ ಮಲೆನಾಡ ಗಾಂಧಿ ಎಂದೇ ಖ್ಯಾತರಾದ ದಿವಂಗತ ಹೆಚ್.ಜಿ.ಗೋವಿಂದೇ ಗೌಡರ ಹೆಸರು ಹೇಳಿಕೊಂಡು ಅದೆಷ್ಟೋ ಶಿಕ್ಷಕ/ಶಿಕ್ಷಕಿಯರ ಕುಟುಂಬ ಅನ್ನ ತಿನ್ನುತ್ತಾ ಅವರನ್ನ ದೇವರ ರೂಪದಲ್ಲಿ ನೆನೆಪಿಸುತ್ತಾರೆ, ಪ್ರತಿ ಗ್ರಾಮದ ಜನರ ಕುಡಿಯುವ ನೀರಿನ ದಾಹ ತೀರಿಸುವ ಕಾಯಕಕ್ಕೆ ಮುಂದಾಗಿದ್ದ ಪಂಚಾಯತ್ ರಾಜ್ ಮಂತ್ರಿ ನಜೀರ್ ಸಾಬ್, ಎರಡು ರೂಪಾಯಿಗೆ ಕೆಜಿ ಅಕ್ಕಿ ನೀಡಿ ಜನರ ಹಸಿವು ನೀಗಿಸಿದ್ದ ದಿವಂಗತ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ದಿವಂಗತ ಮುಖ್ಯ ಮಂತ್ರಿ ದೇವರಾಜ ಅರಸು ಇನ್ನು ಅನೇಕ ಮಹನೀಯರ ಕಾರ್ಯಗಳೆ ಅವರನ್ನು ಜನರು ಇಂದಿಗು ಸ್ಮರಿಸುವಂತೆ ಮಾಡಿದೆ ಅದರಂತೆ ಶ್ರಮಿಕ ವರ್ಗದವರ ಏಳಿಗೆಗಾಗಿ ಅನೇಕ ಯೋಜನೆಯನ್ನು ಕಾರ್ಮಿಕ ಇಲಾಖೆಯಡಿ ಅನುಷ್ಟಾನಕ್ಕೆ ತಂದು ಶ್ರಮಿಕವರ್ಗದ ಕುಟುಂಬಕ್ಕೆ ಘನತೆ ತಂದು ಕೊಟ್ಟ ಅರಬೈಲ್ ಶಿವರಾಮ ಹೆಬ್ಬಾರ್ ಅವರನ್ನು ಸಹ ಭವಿಷ್ಯದ ಪೀಳಿಗೆಯು ರಾಜಕಾರಣಕ್ಕು ಮಿಗಿಲಾಗಿ ಅವರನ್ನು ಕಾಣುತ್ತದೆ.

ಶಾಸಕ ಶಿವರಾಮ ಹೆಬ್ಬಾರ್ ಹೆಗಲ ಮೇಲೆ ಹೊತ್ತು ಸಾಗಿದ ಕಾರ್ಮಿಕ ಇಲಾಖೆ ಸದ್ಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಂತೋಷ್ ಲಾಡ್ ನಿಭಾಯಿಸುತ್ತಿದ್ದು ಶಾಸಕ ಶಿವರಾಮ ಹೆಬ್ಬಾರ್ ಅಂದು ಕಾರ್ಮಿಕ ಸಚಿವರಾಗಿ ಅನುಷ್ಟಾನಕ್ಕೆ ತಂದ ಜನಪರ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಮೇ 1 ವಿಶ್ವ ಕಾರ್ಮಿಕರ ದಿನ ಇಂತಹ ಸಂದರ್ಭದಲ್ಲಿ ಈ ವಲಯಕ್ಕೆ ಗೌರವ ತಂದು ಕೊಟ್ಟ ಮಹನೀಯರ ನೆನೆಯದೆ ಇದ್ದರೆ ಓದಿ,ಕಂಡು,ತಿಳಿದವರಾಗಿ ಸುಮ್ಮನಿದ್ದರೆ ಭಗವಂತ ಮೆಚ್ಚನು ಕೊರೊನ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಕಾರ್ಮಿಕರಿಗಾಗಿ ಮಿಡಿದ ದಿನಗಳನ್ನು ಮರೆಯುವಂತಿಲ್ಲ ಅಂತಹವರ ಶ್ರಮವೆ ಶ್ರಮಿಕ ವರ್ಗಕ್ಕೆ ಇಂದು ಸಿಗುತ್ತಿರುವ ಬೆಲೆ ಅಂತಹ ಶಾಸಕ ಶಿವರಾಮ ಹೆಬ್ಬಾರ್ ಅವರಿಗೊಂದು ಪ್ರತಿಧ್ವನಿ ಸಲಾಂ…
Prathidvani Yellapura