Breaking News

ಸ್ವಾತಂತ್ರ್ಯ ಭಾರತದಲ್ಲಿ ಇಂದಿಗು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣ್ಣ ಪಾನಿಗುಂಡಿ ಗ್ರಾಮ.


ಕೇಬಲ್ ನಾಗೇಶ್..🖋 ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣ್ಣ ಪಾನಿಗುಂಡಿ ಎಂಬ ಗ್ರಾಮ ಮಕ್ಕಳು ಸೇರಿದಂತೆ 125 ಮಂದಿ ಜನಸಂಖ್ಯೆ ಹೊಂದಿರುವ 70 ವರ್ಷಕ್ಕು ಹಿಂದಿನ ಗ್ರಾಮವಾಗಿದೆ. ವಿಪರ್ಯಾಸವೆಂದರೆ  ಸ್ವಾತಂತ್ರ್ಯ ಬಂದು ಇಂದಿಗು ಸರ್ಕಾರದಿಂದ ವಿದ್ಯುತ್ ಹೊರತುಪಡಿಸಿ ಬೇರಾವ ಮೂಲಭೂತ ಸೌಕರ್ಯಗಳು ಸಿಗದೆ ವಂಚಿತವಾದ ಗ್ರಾಮವಾಗಿದೆ.


ಈ ಪುಟ್ಟ ಕುಗ್ರಾಮಕ್ಕೆ‌ ತೆರಳಲು ಸಮರ್ಪಕ ರಸ್ತೆ ಇಲ್ಲ, ಕುಡಿಯುವ ನೀರಿಲ್ಲ,ಶಾಲೆ ಇಲ್ಲ,ಅಂಗನವಾಡಿ ಇಲ್ಲ ಒಟ್ಟಿನಲ್ಲಿ ಕರೆಂಟ್ ಹೊರತುಪಡಿಸಿ ಮತ್ತೇನನ್ನು ಸರ್ಕಾರ ಇಲ್ಲಿಗೆ ಒದಗಿಸದಿರುವುದು ದುರಂತವಾಗಿದೆ.


ಈ ಗ್ರಾಮದ ಬಹುತೇಕ ಮಂದಿ ಕೃಷಿ ಮತ್ತು ಹೈನುಗಾರಿಕೆ ಮಾಡುತ್ತ ಜೀವನಸಾಗಿಸುವ ಧನಗರ ಗೌಳಿ ಸಮಾಜದ ಬಡ ಕುಟುಂಬಗಳಾಗಿವೆ. ಹಸು ಕರುಗಳನ್ನು ಕಟ್ಟಿಕೊಂಡು ಹಾಲು ಮಾರುವುದು ಮತ್ತು ಜೋಳ ಹಾಗು ಕಬ್ಬು ಬೆಳೆ ಬೆಳೆಯುವ ಕೃಷಿಕಾಯಕ ಮಾಡುತ್ತಾರೆ. ಪೂರ್ವಜರ ಕಾಲದಿಂದಲೂ ವಿದ್ಯೆಯಿಂದ ವಂಚಿತರಾಗಿ ಬದುಕು ನಡೆಸುತ್ತಿದ್ದು ಭವಿಷ್ಯದ ಪೀಳಿಗೆ ಇದರಿಂದ ಹೊರ ಬಂದು ಜಗತ್ತನ್ನು ಓದಬೇಕಿದೆ ಎಂಬುದು ಇಲ್ಲಿನ ಗ್ರಾಮಸ್ಥರ ಕನಸಾಗಿದೆ.

ಆದರೆ ಶಿಕ್ಷಣ ವ್ಯವಸ್ಥೆಯ ಮೊದಲ ಹಂತ ಅಂಗನಾವಾಡಿಯು ಸಹ ಈ ಗ್ರಾಮದಲ್ಲಿ ಇಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಗ್ರಾಮದ 19 ಮಕ್ಕಳು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ದಟ್ಟಡವಿಯ ಮದ್ಯೆ ಮೃಗ ಜಂತುಗಳ ಭಯದಲ್ಲೆ 1 ಕಿಲೋಮೀಟರ್ ಕ್ರಮಿಸಿ ದೊಡ್ಡ ಪಾನಿಗುಂಡಿ ಅಂಗನವಾಡಿಗೆ ತೆರಳುತ್ತಾರೆ.


ಪುಟ್ಟ ಮಕ್ಕಳ ಕಥೆ ಹೀಗಾದರೆ ಇನ್ನು ಪ್ರತಿ ತಿಂಗಳ ಪಡಿತರ ಪಡೆಯಲು ಈ ಗ್ರಾಮದ ಕುಟುಂಬಗಳು 8 ಕಿಲೋಮೀಟರ್ ದೂರದ ಕಿರವತ್ತಿ ರೇಶನ್ ಅಂಗಡಿಗೆ ಹೋಗಲೆಬೇಕಿದೆ.ಆರೋಗ್ಯವೇನಾದರು ಗಂಭೀರವಾಗಿ ಕೈ ಕೊಟ್ಟರೆ ಆಸ್ಪತ್ರೆಗೆ ಸಹ ಕಿರವತ್ತಿ ಹೋಗಲೆಬೇಕು ಹಾಗು ಅನಿವಾರ್ಯವಾಗಿ ಆ್ಯಂಬುಲೆನ್ಸ್ ಹೋಗಬೆಕೆಂದರೆ ರಸ್ತೆ ಸರಿ ಇರದಿರುವುದು ಅನಾರೋಗ್ಯ ಪೀಡಿತರಿಗೆ ಶಾಪವಾಗಿದೆ.
ಗ್ರಾಮದಲ್ಲಿ ಅಂದಾಜು 80 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದು ಅವರು ಸಹ ದೊಡ್ಡಯಲವಳ್ಳಿಗೆ ಮತಚಲಾಯಿಸಲು ಹೋಗಬೇಕಿದೆ.


ಸಣ್ಣ ಪಾನಿಗುಂಡಿ ಗ್ರಾಮದಲ್ಲಿ ಯಾವುದೆ ನೀರಿನ ವ್ಯವಸ್ಥೆ ಇಲ್ಲದಿದ್ದು ಪಕ್ಕದ ದೊಡ್ಡ ಪಾನಿಗುಂಡಿ ಇಂದ ಪೈಪ್ ಮೂಲಕ ನೀರು ಯರುವ ಪ್ರಯತ್ನವಾಗಿದೆ ಯಾದರು ಮಳೆಗಾಲದಲ್ಲಿ ಹಳ್ಳ ತುಂಬಿ ಹರಿದರೆ ಹಳ್ಳದ ಮೇಲಿಂದ ಸಾಗಿರುವ ನೀರಿನ ಪೈಪ್ ಗಳು ಒಡೆದು ನೀರಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ.


ಸ್ವಾತಂತ್ರ್ಯ ನಂತರದಲ್ಲಿ ಇಂದಿಗು ಒಂದು ಗ್ರಾಮ ಇಷ್ಟೆಲ್ಲಾ ಮೂಭೂತ ಸೌಕರ್ಯಗಳದ ವಂಚಿವಾಗಿದೆ ಎಂದರೆ ಸರ್ಕಾರದ ಎಲ್ಲಾ ಇಲಾಖೆಗಳು ತಲೆ ತಗ್ಗಿಸಬೇಕಿದೆ ಎಂಬುದು ಗ್ರಾಮದ ಪ್ರಮುಖರಾದ ಬಾಗು ಕೊಕ್ಕರೆ, ಗಂಗಾರಾಮ್ ವಿ ಮೀಸಳ, ಜಾನು ಕೊಕ್ಕರೆ, ತುಕಾರಾಮ್ ಲಕ್ಕು ಮಿಸಳ, ಡೊಂಡು ಲಕ್ಕು ಮಿಸಳ, ಹಾಗೂ ಇನ್ನಿತರರ ಅಭಿಪ್ರಾಯವಾಗಿದೆ.

ಈ ಹಿಂದೆ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿ ಗ್ರಾಮದ ಸಮಸ್ಯೆಗಳನ್ನು ವಿವರಿಸಿದ್ದೆ ಆದರೆ ಯಾವ ಪ್ರಯೋಜನವಿಲ್ಲದಾಗಿದೆ.ಕನಿಷ್ಟ ಪಕ್ಷ ಕುಡಿಯುವ ನೀರಿಗಾಗಿ ಏನಾದರು ವ್ಯವಸ್ಥೆ ಕಲ್ಪಿಸಿ ಎಂದರೆ ಪಂಚಾಯತದಲ್ಲಿ‌ ಸದ್ಯಕ್ಕೆ ಯಾವುದೇ ಅನುದಾನವಿಲ್ಲ ನಿಮ್ಮ ಕೈಯಿಂದ ಹಣ ಹಾಕಿ ಬೋರ್ ಕೊರೆಸಿಕೊಳ್ಳಿ ಅನುದಾನ ಬಂದಾಗ ಹಣ ನೀಡುತ್ತೇನೆ ಎನ್ನುತ್ತಾರೆ ಅಧಿಕಾರಿಯೋರ್ವರು. ಕೂಲಿನಾಲಿ ಮಾಡುತ್ತ ಹಾಲು ಮಾರಿ ಜೀವನ ಸಾಗಿಸುವ ಕುಟುಂಬಗಳಿಗೆ ನಿತ್ಯವೂ ನರಕವಾಗಿದೆ. ಒಂದೆಡೆ ಭಾರತ ವಿಶ್ವಗುರು ಆಗಿದೆ ಎನ್ನುತ್ತಿರುವಾಗಲೆ ಗ್ರಾಮಕ್ಕೆ ಅಂಗನವಾಡಿ,ನೀರು,ರಸ್ತೆ,ಆರೋಗ್ಯ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಸಮಸ್ಯೆ ಗಂಭೀರತೆ ಅರಿತು ಮೂಲಭೂತ ವ್ಯವಸ್ಥೆ ಕಲ್ಪಿಸದ ಹೊರತು ಸಣ್ಣ ಪಾನಿಗುಂಡಿ ಕುಟುಂಬಗಳ ಸದಸ್ಯರು ಬರಲಿರುವ ಯಾವುದೆ ಚುನಾವಣೆಯಲ್ಲಿ ಮತಚಲಾಯಿಸದೆ ಚುನಾವಣೆ ಬಹಿಷ್ಕಾರಕ್ಕೆ ಯೋಚಿಸಲಾಗುತ್ತಿದೆ. ಇದಕ್ಕೆಲ್ಲಾ ಆಸ್ಪದ ಕೊಡದೆ ತಕ್ಷಣಕ್ಕೆ ವ್ಯವಸ್ಥೆ ಸರಿಪಡಿಸಿ.
ವಿಟ್ಟು ದೊಂಡು ಪಟಕಾರೆ ಸಾಮಾಜಿಕ ಹೋರಾಟಗಾರ

ಇತ್ತೀಚೆಗೆ ಸಣ್ಣ ಪಾನಿಗುಂಡಿ ಕುಟುಂಬಗಳ ನೀರಿನ ಸಮಸ್ಯೆ ನನ್ನ ಗಮನಕ್ಕೆ ತಂದರು. ಯಾವುದೆ ಅನುದಾನ ಪಂಚಾಯತಕ್ಕೆ ಬಂದರೆ ಗ್ರಾಮದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂದು ತಿಳಿಸಲಾಗಿದೆ. ಏಪ್ರಿಲ್ ಅಥವಾ ಏಪ್ರಿಲ್ ನಂತರ ನಡೆಯುವ ಗ್ರಾಮ ಸಭೆಯಲ್ಲಿ ಗ್ರಾಮದಲ್ಲಿರುವ ಮೂಲಭೂತ ಸಮಸ್ಯೆ ಕುರಿತು ಬೆಳಕು ಚೆಲ್ಲ ಬಹುದಾಗಿದೆ.
ಶಿವಕುಮಾರ್ ವಿರಕ್ತಮಠ, ಪಿ.ಡಿ.ಒ ಕಿರವತ್ತಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..

ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ …

Leave a Reply

Your email address will not be published. Required fields are marked *