
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಪ್ರತಿ ರವಿವಾರದಂದು ವಾರದ ಸಂತೆ ನಡೆಯುತ್ತಿದ್ದು ಪ್ರತಿ ವಾರ ವ್ಯಾಪಾರಿಗಳಿಗೆ, ಕೊಳ್ಳುವ ಗ್ರಾಹಕರಿಗೆ , ಸಂಚರಿಸುವ ಸಾರ್ವಜನಿಕರಿಗೆ ಬೀಡಾಡಿ ದನಗಳ ಕಾಟ ಹೆಚ್ಚಾಗಿದ್ದು ಸಮಸ್ಯೆ ಬಗೆಹರಿಸಬೇಕಾದ ಪಟ್ಟಣ ಪಂಚಾಯತ ಕರವಸೂಲಿಗಷ್ಟೇ ಸೀಮಿತವಾಗಿರುವುದು ಗ್ರಾಹಕರ, ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಯಲ್ಲಾಪುರದಲ್ಲಿ ರವಿವಾರ ನಡೆಯುವ ಸಂತೆಗೆ ಜಿಲ್ಲೆಯ ವ್ಯಾಪಾರಿಗಳಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದ ರೈತರು, ವ್ಯಾಪಾರಿಗಳು, ಹಣ್ಣು-ತರಕಾರಿ, ದವಸ ಧಾನ್ಯಗಳನ್ನು ಮಾರಾಟಕ್ಕೆ ತಂದು ದಿನವಿಡೀ ಕುಳಿತು ವ್ಯಾಪಾರ ಮಾಡಿ ಒಂದಷ್ಟು ಲಾಭ ಗಳಿಸಿ ಹೊರಡುವ ಯೋಚನೆಯಲ್ಲಿರುತ್ತಾರೆ. ಆದರೆ ಇಲ್ಲಿ ನಡೆಯುವ ಸಂತೆಯಲ್ಲಿ ಕೇವಲ ಪಟ್ಟಣ ಪಂಚಾಯತಕ್ಕೆ ತೆರಿಗೆ ಕಟ್ಟುವುದಲ್ಲದೇ ಬೀಡಾಡಿ ದನಗಳಿಗೂ ವ್ಯಾಪಾರಕ್ಕೆಂದು ತಂದ ವಸ್ತುಗಳನ್ನು ಮೇವಾಗಿ ನೀಡಿ ನಷ್ಟ ಅನುಭವಿಸುವಂತಾಗಿದೆ. ವ್ಯಾಪಾರಿಗಳ ಕಥೆ ಒಂದಾದರೆ ಗ್ರಾಹಕರ ಕತೆಯೇ ಬೇರೆಯಾಗಿದೆ. ಯಾವುದೇ ಅಂಗಡಿಗಳ ಮುಂದೆ ನಿಂತು ಸಮಾಧಾನದಿಂದ ಒಳ್ಳೆಯ ಹಣ್ಣು ತರಕಾರಿಗಳನ್ನು ತೆಗೆದುಕೊಳ್ಳಲು ಸಾಧ್ಯವೇ ಇಲ್ಲ, ಕಾರಣ ಒಮ್ಮೆಲೆ ನುಗ್ಗುವ ಬೀಡಾಡಿ ದನಗಳ ಗುಂಪು ಮೈಮೇಲೆ ಬರುತ್ತವೆ. ಪ್ರತಿ ಅಂಗಡಿಯವರು ಬೆದರಿಸಿದೊಡನೆ ಗ್ರಾಹಕರ ಮೈಮೇಲೆ ಅಥವಾ ಸಾರ್ವಜನಿಕರ ಮೇಲೆರಗುವಂತಾಗುತ್ತಿದೆ. ವಾರಕ್ಕೊಮ್ಮೆ ಸಂತೆ ಮಾಡಲು ಬರುವುದೇ ದುಸ್ತರವಾಗಿದ ಎಂಬುದು ಗ್ರಾಹಕರ ಅಳಲಾಗಿದೆ.
ಇಷ್ಟೆಲ್ಲಾ ಸಮಸ್ಯೆಗಳಿಗೆ ಸಂತೆ ನಡೆಯುವ ಸ್ಥಳವೆ ಸರಿಯಿಲ್ಲದಿರುವುದು ಪ್ರಮುಖ ಕಾರಣವಾಗಿದೆ. ಬೆಲ್ ರಸ್ತೆಯಲ್ಲಿ ನಡೆಯುವ ಸಂತೆಯ ಅಕ್ಕಪಕ್ಕದ ಏರಿಯಾಗಳಿಗೆ ಸಾರ್ವಜನಿಕರು, ವಾಹನಗಳು ಇದೇ ರಸ್ತೆಯ ಮೂಲಕ ಸಾಗಬೇಕಿದ್ದು ಒಂದು ಕಡೆ ಬೀಡಾಡಿ ದನಗಳನ್ನು ತಡೆದರೆ ಮತ್ತೊಂದು ಕಡೆಯಿಂದ ಒಳ ಬರುತ್ತವೆ. ಸಮಸ್ಯೆ ಪರಿಹಾರಕ್ಕೆ ಸಂತೆಯ ಸ್ಥಳ ಬದಲಾಗಬೇಕಿದೆ ಎಂಬುದು ಗ್ರಾಹಕರ ಮತ್ತು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.
ವಾರದ ಸಂತೆಯ ಕರ ವಸೂಲಿ ಜವಾಬ್ದಾರಿ ಜೊತೆಯಲ್ಲಿ ಸಂತೆಯಲ್ಲಿ ಸಮಸ್ಯೆ ತಂದೊಡ್ಡುವ ಬೀಡಾಡಿ ದನಗಳನ್ನು ತಡೆಯುವುದೂ ಸಹ ನಮ್ಮ ಮತ್ತು ಪಟ್ಟಣ ಪಂಚಾಯತದ ಜವಾಬ್ದಾರಿಯಾಗಿರುತ್ತದೆ. ಅದಕ್ಕಾಗಿಯೇ ಒಬ್ಬ ವ್ಯಕ್ತಿಯ ನೇಮಕವನ್ನೂ ಮಾಡಲಾಗಿದೆ. ಆದರೆ ಎಷ್ಟೇ ತಡೆದರೂ ಒಂದಲ್ಲ ಒಂದು ರಸ್ತೆಯಿಂದ ದನಗಳು ಒಳನುಗ್ಗುತ್ತವೆ. ಸಂಪೂರ್ಣ ತಡೆಯಲು ಅಸಾಧ್ಯವಾಗಿದ್ದು ಸಮಸ್ಯೆ ಪರಿಹಾರಕ್ಕೆ ಪಟ್ಟಣ ಪಂಚಾಯತ ಅಧಿಕಾರಿಗಳು ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ. – ಅಶೋಕ ಕೊರವರ, ವಾರದ ಸಂತೆ ಕರವಸೂಲಿಗಾರ
ಸಾರ್ವಜನಿಕರ ಅಭಿಪ್ರಾಯದಂತೆ ಸಂತೆ ನಡೆಯಲು ಆ ಸ್ಥಳ ಸೂಕ್ತವಲ್ಲ. ಬದಲಿಗೆ ಪಟ್ಟಣದ ಮಹಿಳಾ ಮಂಡಲ ಸಮೀಪದ ಕೆ.ಎಚ್.ಬಿ ಕಾಲೋನಿ ಬಳಿಯಲ್ಲಿ ಸರ್ಕಾರಿ ಜಾಗವಿದ್ದು ಅದನ್ನು ಸಂತೆ ಮೈದಾನವಾಗಿ ಮಾರ್ಪಡಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಒಂದು ಹಂತದ ಪ್ರಕ್ತಿಯೆ ಮುಗಿದು ಯಲ್ಲಾಪುರ ಪಟ್ಟಣ ಪಂಚಾಯತದ ಕೈಸೇರುವ ಹಂತದಲ್ಲಿದೆ. ಹಾಗಾದಾಗ ಮಾತ್ರ ಸುವ್ಯವಸ್ಥಿತ ಸಂತೆ ಮಾರುಕಟ್ಟೆ ಮಾಡಲು ಸಾಧ್ಯವಿದೆ. ಈಗಿರುವ ಪರಿಸ್ಥಿತಿಯಲ್ಲಿ ಬೀಡಾಡಿ ದನಗಳ ಮಾಲೀಕರಿಗೆ ಮತ್ತೊಮ್ಮೆ ಎಚ್ಛರಿಕೆಯ ನೋಟೀಸು ನೀಡಿ ನಂತರದಲ್ಲಿ ಸಂತೆಯಲ್ಲಿ ಸಮಸ್ಯೆ ತಂದೊಡ್ಡುವ ದನಗಳನ್ನು ಗೋಶಾಲೆಗೆ ರವಾನಿಸಿ ಅದರ ಖರ್ಚು ವೆಚ್ಛವನ್ನೆಲ್ಲಾ ಮಾಲೀಕರ ಮೇಲೆ ದಂಡದ ರೂಪದಲ್ಲಿ ವಿಧಿಸುವ ಕುರಿತು ಚಿಂತಿಸಲಾಗಿದೆ. – ಸಂಗನಬಸಯ್ಯಾ, ಮುಖ್ಯಾಧಿಕಾರಿ, ಪ.ಪಂ, ಯಲ್ಲಾಪುರ
Prathidvani Yellapura