
ಪ್ರತಿಧ್ವನಿ ಯಲ್ಲಾಪುರ : ಕಾಂಗ್ರೆಸ್ಸಿಗರ ಗ್ಯಾರಂಟಿ ಭಾಗ್ಯ ಯೋಜನೆಗಳು ಈಗಷ್ಟೇ ಅಲ್ಲ, 50 ವರ್ಷಗಳ ಹಿಂದೆ, ಶ್ರೀಮತಿ ಇಂದಿರಾ ಗಾಂಧಿಯವರ ಕಾಲದಲ್ಲಿಯೇ ಇವು ಜಾರಿಯಲ್ಲಿದ್ದವು.
1975 ಜೂನ 26, ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ, ಅದನ್ನು ಪ್ರತಿಭಟಿಸುವವರ ಸಲುವಾಗಿಯೇ ಮೊಟ್ಟ ಮೊದಲ ಬಾರಿ, ಉಚಿತ ಜೈಲು ಗ್ಯಾರಂಟಿ ಯೋಜನೆಯನ್ನೂ ಜಾರಿಗೆ ತಂದಿದ್ದರು. ಅಂದು ದೇಶದಲ್ಲಿ ಪ್ರಜಾಪ್ರಭುತ್ವ ಗಂಡಾಂತರದಲ್ಲಿತ್ತು. ಸಂವಿಧಾನ ಹತ್ತಿಕ್ಕಲಾಗಿತ್ತು. ಸಂಘದ ಮೇಲೆ ನಿಷೇಧವಿತ್ತು. ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿತ್ತು. ಇಂದಿರಾಗಾಂಧಿ ಅಥವಾ ಅವರ ಸರಕಾರವನ್ನು ಯಾರಾದರೂ ಟೀಕಿಸುವುದು ಕಂಡುಬಂದರೆ. ಪೋಲಿಸರಿಂದ ಉಚಿತ ಲಾಟಿ ಭಾಗ್ಯ, ರಸ್ತೆಯ ಮೇಲೆ ಇಳಿದು ಪ್ರತಿಭಟಿಸುವರಿಗೆ ನೇರವಾಗಿ ಜೈಲು ಭಾಗ್ಯ ಸಿಗುತ್ತಿತ್ತು. ಜೈಲಿನಲ್ಲಿ ಇರುವಾಗ, ಪ್ರತಿ ವ್ಯಕ್ತಿಗೆ ತಕ್ಕಡಿಯಲ್ಲಿ ತೂಕಮಾಡಿ ಉಚಿತ ಅನ್ನಭಾಗ್ಯ , ಸಿಗುತ್ತಿತ್ತು. ಪೋಲಿಸರ ಬೂಟು, ಬೆಲ್ಟುಗಳ ರುಚಿ ನೋಡಿ ಅಜೀರ್ಣರಾದವರಿಗೆ ಅಥವಾ ಜೈಲಿನಲ್ಲಿ ಹುಳ ತುಂಬಿದ ಹಳೇ ಅಕ್ಕಿಯ ಅನ್ನ ತಿಂದು ದೈಹಿಕವಾಗಿ ಅಶಕ್ತರಾದವರಿಗೆ ವಾರಕ್ಕೊಮ್ಮೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷದಿ ಭಾಗ್ಯ, ಅಕಸ್ಮಾತ ಅಲ್ಲಿಯೇ ಸತ್ತರೆ ಮನೆಯವರಿಗೂ ಗೊತ್ತಾಗದಂತೆ ಉಚಿತ ದಫನ್ ಭಾಗ್ಯ ಇವೆಲ್ಲವನ್ನೂ ಆಗ ಇಂದಿರಾಗಾಂಧಿಯವರು ಜಾರಿ ಮಾಡಿದ್ದರು.

ರಾಷ್ಟ್ರಾಧ್ಯಂತ ಲಕ್ಷಗಟ್ಟಲೆ ಜನ, ನಮ್ಮ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜೈಲೊಂದರಲ್ಲಿಯೇ ನಾವು ಸಾವಿರಾರು ಹೋರಾಟಗಾರರು, ಇಂದಿರಾ ಕ್ರಪೆಯಿಂದ ಈ ಉಚಿತ ಗ್ಯಾರಂಟಿಗಳ ಫಲ ಅನುಭವಿಸುತ್ತಿದ್ದೆವು. ಐವತ್ತು ವರ್ಷಗಳ ಹಿಂದೆಯೇ ಇಪ್ಪತ್ತು, ಮೂವತ್ತು, ನಾಲ್ವತ್ತರ ಹರೆಯದಲ್ಲಿದ್ದ ಈ ಹೋರಾಟಗಾರರಲ್ಲಿ ಎಷ್ಟು ಜನ ಈಗ ಬದುಕಿದ್ದಾರೋ, ಎಲ್ಲಿದ್ದಾರೋ, ಅನೇಕರ ಮುಖಗಳೂ ನೆನಪಿಗೆ ಬರುತ್ತಿಲ್ಲ. ಆದರೆ, ಜೂನ್ 26 ಎಂದ ತಕ್ಷಣ, ತುರ್ತು ಪರಿಸ್ಥಿತಿಯ ಆ ಕರಾಳ ದಿನಗಳು ಮತ್ತು ಜೈಲುವಾಸ ಮಾತ್ರ ತಪ್ಪದೇ ನೆನಪಿನಲ್ಲಿ ಸುಳಿಯುತ್ತವೆ.
ರಾಮು ನಾಯ್ಕ,ಯಲ್ಲಾಪುರ
1975 ತುರ್ತು ಪರಿಸ್ಥಿತಿಯ ಓರ್ವ ಬಂಧಿ.





Prathidvani Yellapura