
ಪ್ರತಿಧ್ವನಿ ಯಲ್ಲಾಪುರ : ಕೇಂದ್ರ ಸರ್ಕಾರ ಮತ್ತು ಆರ್.ಬಿ.ಐ ಬ್ಯಾಂಕುಗಳ ನಿಯಂತ್ರಣಕ್ಕಾಗಿ ಹಲವಾರು ಬದಲಾವಣೆಗಳನ್ನು ತಂದಿದೆ. ಆದರೆ ಸೌಹಾರ್ದ ಸಹಕಾರಕ್ಕೆ ಯಾವ ನಿಬಂಧನೆಯೂ ಇಲ್ಲ. ನಾಡಿನಾದ್ಯಂತ ಹಲವು ಸೌಹಾರ್ದ ಸಂಘಗಳು ಠೇವುದಾರರಿಗೆ ಬಾರೀ ಮೋಸ ಮಾಡಿವೆ. ಇದು ಸರಿಯಾದ ಕ್ರಮ ಅಲ್ಲ. ಯಾವುದೇ ಕಾರಣಕ್ಕೂ ಯಾವುದೇ ಬ್ಯಾಂಕ್ ವ್ಯವಹಾರ ನಡೆಸುವವರಿಂದ ಠೇವುದಾರರಿಗೆ ಮೋಸ ಆಗದಂತೆ ಆರ್.ಬಿ.ಐ ನೋಡಿಕೊಳ್ಳಬೇಕು ಎಂದು ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷರೂ, ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವರು, ಮಂಗಳವಾರ ಪಟ್ಟಣದ ಕರ್ನಾಟಕ ಬ್ಯಾಂಕಿನ 15 ನೇ ವಾರ್ಷಿಕೋತ್ಸವ ಉದ್ಘಾಟಿಸಿ, ಮಾತನಾಡಿದರು. ಸೌಹಾರ್ದ ವ್ಯವಸ್ಥೆ ಬಗ್ಗೆ ನನಗೆ ಗೌರವವಿದೆ. ಆದರೆ ಗ್ರಾಹಕರಿಗೆ ಮೋಸ ಆಗದಂತೆ ಆರ್.ಬಿ.ಐ ನಿಯಂತ್ರಣ ಮಾಡದಿದ್ದರೆ ಮುಂದೊಂದು ದಿನ ಬ್ಯಾಂಕ್ ವ್ಯವಸ್ಥೆ ಬಗ್ಗೆ ಜನರಿಗೆ ಅಪನಂಬಿಕೆ ಉಂಟಾದೀತು. ನಮ್ಮ ಜಿಲ್ಲೆ, ಬೆಂಗಳೂರು ಸೇರಿದಂತೆ ಹಲವಾರು ಕಡೆ ಸೌಹಾರ್ದದಿಂದ ಸಾವಿರಾರು ಕೋಟಿ ಠೇವುದಾರರಿಗೆ ಟೋಪಿ ಹಾಕಲಾಗಿದೆ. ಇದಕ್ಕೆ ಕಠಿಣ ಕ್ರಮದ ಅಗತ್ಯತೆ ಇದೆ ಎಂದ ಅವರು, ಕೆ.ಡಿ.ಸಿ.ಸಿ. ಬ್ಯಾಂಕಿನಿಂದ ರೈತರಿಗೆ 1800 ಕೋಟಿ ಸಾಲ ನೀಡಲಾಗಿದೆ. ಇಂದು ನಮ್ಮ ಬ್ಯಾಂಕು 107 ನೇ ವರ್ಷದ ಸಾಧನೆಯಲ್ಲಿದೆ. ಬ್ಯಾಂಕುಗಳಿಗೆ ಠೇವುದಾರರ ಕೊರತೆಯಿಲ್ಲ. ಉತ್ತಮ ಸಾಲಗಾರರ ಕೊರತೆಯಿದೆ. ಆ ದೃಷ್ಟಿಯಿಂದ ಕರ್ನಾಟಕ ಬ್ಯಾಂಕ್ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡು ಮುನ್ನಡೆದಿದೆ ಎಂದರು.
ಕರ್ನಾಟಕ ಬ್ಯಾಂಕಿನ ಉ.ಕ ವಿಭಾಗದ ಮುಖ್ಯಸ್ಥರಾದ ರಣಜಿತ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಾತನಾಡಿ, ಇಲ್ಲಿನ ಗ್ರಾಹಕರ ಪ್ರೀತಿ, ವಿಶ್ವಾಸದಿಂದ ನಮ್ಮ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸುತ್ತ ಬಂದಿದೆ. 107 ವರ್ಷದಲ್ಲಿ ನಮ್ಮ ಬ್ಯಾಂಕು ದೇಶಾದ್ಯಂತ 960 ಶಾಖೆಗಳನ್ನು ಹೊಂದಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ತೀವೃ ಪೈಪೋಟಿಯ ಕಾಲಘಟ್ಟದಲ್ಲಿ ನಾವು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜೊತೆ ಬ್ಯಾಂಕಿನ ಹಿತ ಕಾಪಾಡಿಕೊಳ್ಳಬೇಕಾಗುತ್ತದೆ. ಕೆಲವು ಬ್ಯಾಂಕುಗಳು ಗ್ರಾಹಕರಿಗೆ ಮೋಸ ಮಾಡಿದ ಪರಿಣಾಮ ಉಳಿದ ಬ್ಯಾಂಕುಗಳ ಮೇಲೂ ಅಪನಂಬಿಕೆಗೆ ಕಾರಣವಾಗುತ್ತದೆ ಎಂದರು.
ಯಲ್ಲಾಪುರ ಶಾಖಾ ವ್ಯವಸ್ಥಾಪಕ ಪೃಥ್ವಿ ಎ.ಎನ್. ಮಾತನಾಡಿ, ನಮ್ಮ ಬ್ಯಾಂಕಿನಲ್ಲಿ 1.36₹ ಕೋಟಿ ಗ್ರಾಹಕರಿದ್ದಾರೆ. 4.11 ಲಕ್ಷ ಶೇರುದಾರರಿದ್ದಾರೆ. 1.800 ಕೋಟಿ ಠೇವನ್ನು ಹೊಂದಿದ್ದೇವೆ. 84.340 ಕೋಟಿ ಸಾಲ ನೀಡಿದ್ದೇವೆ. ಅಲ್ಲದೇ ಈ ವರ್ಷ 1.310 ಕೋಟಿ ನಿವ್ವಳ ಲಾಭ ಗಳಿಸಿ, ಬ್ಯಾಂಕು ಪ್ರಗತಿ ಸಾಧಿಸಿದೆ. ನಮ್ಮ ಬ್ಯಾಂಕ್ ಎನ್.ಪಿ.ಎ. ತೀರಾ ಕಡಿಮೆಯಾಗುವಲ್ಲಿ ನೋಡಿಕೊಂಡಿದೆ. ಇಲ್ಲಿನ ಗ್ರಾಹಕರ ಪ್ರೀತಿ, ವಿಶ್ವಾಸದಿಂದ ನಾವು 15 ವರ್ಷ ಪೂರ್ತಿಗೊಳಿಸಿದ್ದೇವೆ ಎಂದರು.
ಖಾಸಗಿ ವಿಮಾ ಕಂಪನಿಗಳ ಜಗದೀಶ ಮತ್ತು ಪ್ರದೀಪ ಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿದರು. ಬ್ಯಾಂಕಿನ ಸಹಾಯಕ ಅಧಿಕಾರಿ ಕಾಂತಿ ಭಟ್ಟ ಪ್ರಾರ್ಥಿಸಿದರು. ಉಪವ್ಯವಸ್ಥಾಪಕ ಕಿರಣ ಭಟ್ಟ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.





Prathidvani Yellapura