
ಪ್ರತಿಧ್ವನಿ,ಯಲ್ಲಾಪುರ : ಶತಮಾನಗಳ ಹಿಂದೆ ಅನೇಕ ಮಹನೀಯರ ಪ್ರಯತ್ನದ ಫಲವಾಗಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ ಅನೇಕ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತ್ಯ ಕ್ಷೇತ್ರದ ಕೃಷಿಯನ್ನು ಮುಂದುವರೆಸಿಕೊಂಡು ಬಂದಿದ್ದು ಅದರ ಅಡಿಯಲ್ಲಿ ಪ್ರಕಟಗೊಳ್ಳುತ್ತಿದ್ದ ಅಖಂಡ ಪತ್ರಿಕೆಯು ಕರ್ನಾಟಕದ ಕಲ್ಪನೆಯನ್ನು ನಾಡಿನಲ್ಲಿ ಬಿಂಬಿಸಿತು. ಇದೀಗ ಸಾಹಿತ್ಯ ಪರಿಷತ್ ಕನ್ನಡ ಬೆಳೆಸಿ ಉಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ರಾಜ್ಯದಲ್ಲಿ ಕನ್ನಡಕ್ಕೆ ಧಕ್ಕೆ ತರುವಂತಹ ಸವಾಲುಗಳಿದ್ದು ಪರಿಹರಿಸುವತ್ತ ಎಲ್ಲರ ಪ್ರಯತ್ನ ಸಾಗಬೇಕಿದೆ. ಇತ್ತೀಚಿಗೆ ಬಿಡುಗಡೆಗೊಳ್ಳುತ್ತಿರುವ ಕನ್ನಡ ಚಲನಚಿತ್ರಗಳು ಸರ್ಕಾರದ ಸವಲತ್ತುಗಳನ್ನು ಪಡೆದೂ ಭಾಷೆಯ ಮೇಲಿನ ನಿಯಂತ್ರಣ ತಪ್ಪುತ್ತಿರುವುದೂ ಸೇರಿದಂತೆ ವಿವಿದ ಬಗೆಯ ಅನ್ಯಾಯಗಳು ಕನ್ನಡದ ಅಸ್ಮಿತೆಗೆ ಧಕ್ಕೆ ತರುತ್ತಿರುವುದು ಬೇಸರದ ಸಂಗತಿ ಎಂದು ಪಟ್ಟಣದ ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಕೆ. ಗಾಂವ್ಕರ ಹೇಳಿದರು.
ಅವರು ಪಟ್ಟಣದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೯ ನೆಯ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ `ಕನ್ನಡದ ಅಸ್ಮಿತೆ-ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.
ಅತಿಥಿಗಳಾಗಿದ್ದ ಪತ್ರಕರ್ತ ನಾಗರಾಜ ಮದ್ಗುಣಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಾವಿರಾರು ವರ್ಷಗಳ ಪ್ರಾಚೀನ ಇತಿಹಾಸವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತಿತರ ಮಹಾನುಭಾವರ ದೂರದರ್ಶಿತ್ವದಿಂದ ಕನ್ನಡ ಸಾಹಿತ್ಯ ಪರಿಷತ್ತು ನಿರ್ಮಾಣಗೊಂಡಿತು. ಇಂದಿನ ಸಾಹಿತ್ಯದಲ್ಲಿ ಹಿಂದಿನ ಗುಣಮಟ್ಟದ, ಮೌಲ್ಯದ ಕೊರತೆ ಎದ್ದು ಕಾಣುತ್ತಿದ್ದು, ಇಂದಿನ ಚಲನಚಿತ್ರ ಗೀತೆಗಳಂತೂ ತೀರಾ ಬಾಲಿಶವಾಗಿರುವುದನ್ನು ಎಲ್ಲರೂ ಬಲ್ಲರು. ಅಲ್ಲದೇ, ಸಾಹಿತ್ಯ ಪರಿಷತ್ತಿನ ಸಮಿತಿಯಲ್ಲಿದ್ದವರೂ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೇ ಇರುವುದು ವಿಪರ್ಯಾಸ ಎಂದರು.
ಮತ್ತೊರ್ವ ಅತಿಥಿ ಪತ್ರಕರ್ತೆ ಪ್ರಭಾವತಿ ಗೋವಿ ಮಾತನಾಡಿ, ಕಸಾಪ ಕೇವಲ ಸಂಘಟನೆಯಾಗಿದ್ದು, ಭಾಷಣ ಮತ್ತು ಉಪನ್ಯಾಸಗಳಿಗೆ ಸೀಮಿತವಾಗಿರುವ ಬದಲಿಗೆ ಕನ್ನಡದ ಪರಿಪೂರ್ಣ ಒಳಿತಿಗೆ ಅಗತ್ಯ ಯೋಜನೆಗಳನ್ನು ರೂಪಿಸುವುದು ಒಳ್ಳೆಯದು ಎಂದರು. ಅನ್ಯ ಭಾಷೆಯ ಬಗ್ಗೆ ವಿರೋಧಿಸುವುದಕ್ಕಿಂತ ಕನ್ನಡದ ಕುರಿತು ಮಮಕಾರ ಹೊಂದಿರುವುದು ಅತ್ಯಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಸರ್ಕಾರದ ಅಂಗ ಸಂಸ್ಥೆಯಾದ ಕಸಾಪ ಕನ್ನಡಿಗರ ಸಂಸ್ಥೆಯಾಗಿದ್ದು, ಇದರ ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಕಳೆದ ವರ್ಷದಂತೆ ಈ ವರ್ಷವೂ ವಿವಿದ ಕಾರ್ಯಕ್ರಮಗಳನ್ನು ನಡೆಸಲು ಪರಿಷತ್ತು ನಿರ್ಧರಿಸಿದೆ. ಈ ಬಾರಿ ೨೦ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.
ಪತ್ರಕರ್ತರಾದ ಸುಬ್ರಾಯ ಬಿದ್ರೆಮನೆ ಸ್ವಾಗತಿಸಿದರು, ಕೇಬಲ್ ನಾಗೇಶ ನಿರ್ವಹಿಸಿ, ವಂದಿಸಿದರು.
Prathidvani Yellapura