Breaking News

ಅರಣ್ಯ ಭೂಮಿಗೆ ಬೋಗಸ್ ಹಕ್ಕುಪತ್ರ ವಿತರಣೆ – ಆರ್ ಟಿ ಐ ಕಾರ್ಯಕರ್ತ ಧೀರಜ್ ತಿನೇಕರ್ ಆರೋಪ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಸರ್ಕಾರದ ಸರಳ ಕಾನೂನನ್ನು ಪಾಲಿಸದೆ ಯಾವುದೆ ನಿಯಮಗಳನ್ನು ಅಳವಡಿಸಿಕೊಳ್ಳದೆ ತಮಗಿಷ್ಡಬಂದಂತೆ ಅಧಿಕಾರ ದುರುಪಯೋಗಪಡಿಸಿಕೊಂಡು ಸ್ಲಮ್ ಬೋರ್ಡ್ ಹೆಸರಿನಲ್ಲಿ ಬೋಗಸ್ ಹಕ್ಕುಪತ್ರ ವಿತರಿಸಿ ಜನರ ಕಣ್ಣಿಗೆ ಮಣ್ಣೆರಚಿ ಅನ್ಯಾಯ ಮಾಡಿದ್ದಾರೆ. ಈ ಕುರಿತು ಸರ್ಕಾರದ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕಿದೆ ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಆರ್.ಟಿ.ಐ ಕಾರ್ಯಕರ್ತ ಧೀರಜ್ ತಿನೇಕರ್ ಹೇಳಿದರು.


ಅವರು ಪಟ್ಟಣದ ತಮ್ಮ ಸಾರ್ವಜನಿಕ ಸೇವಾ ಕೇಂದ್ರ ದ ಕಚೇರಿಯಲ್ಲಿ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಕೊಳಚೆ ನಿರ್ಮೂಲನ ಮಂಡಳಿ ಹೆಸರಿನಲ್ಲಿ ನೀಡಲಾದ ಹಕ್ಕುಪತ್ರ ಬೋಗಸ್ ಎಂದು ಮಾಹಿತಿ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಕೊಳಚೆ ನಿರ್ಮೂಲನ ಮಂಡಳಿ ಒಂದು ಸ್ವಾಯತ್ತ ಸಂಸ್ಥೆ ಯಾಗಿದ್ದು ಅದರದ್ದೆ ಆದ ಕೆಲವು ಇತಿಮಿತಿಗಳು ಹೊಂದಿದ್ದು ಇಷ್ಟೊಂದು ನಿಯಮಗಳ ಉಲ್ಲಂಘನೆಯ ನಂತರವು ಮೌಲ್ಯವಿಲ್ಲದ ಕಾಗದದ ತುಂಡನ್ನು ಅಧಿಕೃತ ಹಕ್ಕು ಪತ್ರವೆಂದು ಹಂಚಿಕೆ ಮಾಡಿರುವುದು ಅಕ್ಷಮ್ಯ ಅಪರಾದವಾಗಿದೆ

. ಪಟ್ಟಣ ಪಂಚಾಯತ್ ನಿಯಮಪಾಲನೆ ಮಾಡದೆ ಅರಣ್ಯ ಭೂಮಿಯನ್ನು ತಮ್ಮದು ಎಂಬಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಸ್ಲಮ್ ಬೋರ್ಡ್ ನವರಿಗೆ ತಪ್ಪು ಮಾಹಿತಿ ನೀಡಿದೆ. ನಂತರ ಹಕ್ಕು ಪತ್ರ ವಿತರಿಸುವಾಗಲು ಸ್ಲಮ್ ಬೋರ್ಡ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು , ಮನೆಮೇಲೆ ಮನೆ ಕಟ್ಟಿ ಬಾಡಿಗೆ ನೀಡಿ ಆರ್ಥಿಕವಾಗಿ ಸದೃಡರಾದವರಿಗು ಹಕ್ಕು ಪತ್ರ ನೀಡಿ ಅಕ್ರಮವೆಸಗಿದ್ದಾರೆ. ಜನರಿಂದ 80 ಲಕ್ಷಕ್ಕು ಅಧಿಕ ಹಣ ವಸೂಲಿಮಾಡಿದ್ದಾರೆ. ಇದೆಲ್ಲವು ಕೂಲಂಕುಷವಾಗಿ ತನಿಖೆಗೆ ಒಳಪಡಬೇಕಿದೆ ಹಾಗು ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರು ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರಂತೆ ವರ್ತಿಸುತ್ತಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದರು.


ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಣೆಗೆ ದಂಡದ ರೂಪದಲ್ಲಿ ಪ್ರತಿಯೊಬ್ಬ ಬಡವರಿಂದ ೧೦೦೦ ದಂಡ ವಸೂಲಿ ಮಾಡುವುದನ್ನು ಹಗಲು ದರೋಡೆ ಎನ್ನಬಹುದಾಗಿದೆ. ಇವೆರಡು ಕಾರ್ಡ್ಗಳ ಅವಶ್ಯಕತೆ ಬಡವರಾರಿಗು ಇರಲಿಲ್ಲ ಅವಶ್ಯಕತೆ ಇದ್ದ ಶ್ರಿಮಂತರು ತಮ್ಮ ವ್ಯವಹಾರದ ಸಲುವಾಗಿ ಅದಾಗಲೆ ಲಿಂಕ್ ಮಾಡಿಸಿದ್ದಾರೆ. ಈಗ ಬಲಿಪಶುಗಳಾದವರು ಬಡಜನರಾಗಿದ್ದಾರೆ ಇದನ್ನು ಖಂಡಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಎಮ್.ಜಿ.ಭಟ್ ಹೇಳಿದರು.


ಚುನಾವಣೆಗಾಗಿ ಮಾಡಿರುವ ದೊಡ್ಡ ಗಿಮಿಕ್ ಎಂದರೆ ಅದು ಬೋಗಸ್ ಹಕ್ಕು ಪತ್ರ ವಿತರಣೆ . ಜನರು ಅಷ್ಟೇನು ಮುಗ್ದರಲ್ಲ ಎಲ್ಲವನ್ನು ಬಲ್ಲವರಾಗಿದ್ದಾರೆ ಯೋಚಿಸಿ ತುಲನೆ ಮಾಡಿ ಸಕಾಲಕ್ಕೆ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ ನಿಯಮಗಳನ್ನು ಉಲ್ಲಂಘಿಸಿ ಹಕ್ಕು ಪತ್ರ ವಿತರಣೆ ಮಾಡಿರುವ ಅಧಿಕಾರಿಗಳ ವಿರುದ್ದ ಕಠಿಣ ಕಾನೂನುಕ್ರಮ ಜರುಗಿಸಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಕಟ್ಟಿಮನಿ ಹೇಳಿದರು. ಈ ಸಂದರ್ಭದಲ್ಲಿ ನ್ಯಾಯವಾಧಿ ಕೆ.ಎನ್. ಭಟ್ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *