
ಪ್ರತಿಧ್ವನಿ ಯಲ್ಲಾಪುರ:: ಕಾರವಾರ ಜಿಲ್ಲಾ ಕೇಂದ್ರದಲ್ಲಿ ಪ್ರಕೃತಿ ವಿಕೋಪದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಆಯೋಜಿಸಲಾದ ಸಭೆಯಲ್ಲಿ ಭಾಗವಹಿಸಲು ಕಾರವಾರಕ್ಕೆ ಆಗಮಿಸಿದ ಆರೋಗ್ಯ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಆತ್ಮೀಯವಾಗಿ ಸನ್ಮಾನಿಸಿ, ಜಿಲ್ಲೆಗೆ ಸ್ವಾಗತ ಕೋರಿದರು.

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬೆನ್ನಲ್ಲೆ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿದ್ದು ಇದಣಿಗ ಉತ್ತರ ಕನ್ನಡ ಉಸ್ತುವಾರಿ ಮಂತ್ರಿಯಾಗಿ ಜವಾಬ್ದಾರಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರಾದ ನಂತರ ಮೊಟ್ಟ ಮೊದಲ ಬಾರಿಗೆ ಜಿಲ್ಲೆಗಾಗಮಿಸಿದ್ದು ಮಳೆಗಾಲದಲ್ಲಿ ಜಿಲ್ಲಾಡಳಿತ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಗೂ ಮುನ್ನ ಮಾದ್ಯಮಗಳೊಂದಿಗೆ ಮಾತನಾಡಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಸಮರೋಪಾದಿಯಲ್ಲಿ ಸಂತ್ರಸ್ತರ ಸಹಾಯಕ್ಕೆ ದಾವಿಸಲಿದೆ. ನೊಂದವರಿಗೆ ನೈತಿಕ ಸ್ಥೈರ್ಯ ಹಾಗೂ ಅಗತ್ಯ ಪರಿಹಾರ ನೀಡಿ ನೆಮ್ಮದಿಯ ಜೀವನ ಸಾಗಿಸಲು ನೆರವಾಗಲಿದೆ ಎಂದು ಆಶ್ವಾಸನೆ ನೀಡಿದರು. ಜನರಿಗೆ ತೊಂದರೆಯಾಗುತ್ತಿರುವ ಕೆಲವು ಸ್ವಯಂಕೃತ ಸಮಸ್ಯೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಈ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದರು.
ಶಾಸಕರಲ್ಲಿ ಸಚಿವ ಸ್ಥಾನದ ಬಗ್ಗೆ ಯಾವುದೇ ಅಸಮಾಧಾನಗಳಿಲ್ಲ; ಎಲ್ಲರೂ ಒಗ್ಗಟ್ಟಾಗಿದ್ದಾರೆ. ಎಲ್ಲರನ್ನೂ ಒಮ್ಮೆಲೇ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲದ ಕಾರಣ ಸಾಮಾಜಿಕ ನ್ಯಾಯ, ಜಾತಿ ಹಾಗೂ ಪ್ರದೇಶವಾರು ಪ್ರಾತಿನಿಧ್ಯವನ್ನು ಆಧರಿಸಿ ಮುಂದಿನ ದಿನಗಳಲ್ಲಿ ಸಚಿವರ ಆಯ್ಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಮುಂಗಾರು ಪರಿಸ್ಥಿತಿ, ಪ್ರಕೃತಿ ವಿಕೋಪ ನಿರ್ವಹಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ್ದು ಕೆಲವು ಪ್ರಮುಖ ಸಲಹೆ ಸೂಚನೆಗಳನ್ನು ನೀಡಿದರು.



ಸಭೆಯಲ್ಲಿ ಜಿಲ್ಲೆಯ ಶಾಸಕರಾದ ಶಿವರಾಮ ಹೆಬ್ಬಾರ್, ಸತೀಶ್ ಸೈಲ್, ದಿನಕರ ಶೆಟ್ಟಿ,ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಸೇರಿದಂತೆ ಜಿಲ್ಲೆಯ ಮತ್ತು ತಾಲ್ಲೂಕು ಪ್ರಮುಖ ಅಧಿಕಾರಿಗಳು, ಪಕ್ಷದ ಪ್ರಮುಖರು ಇನ್ನಿತರರು ಉಪಸ್ಥಿತರಿದ್ದರು.










Prathidvani Yellapura