
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನ ಶೀಗೆಪಾಲ ಗ್ರಾಮದ ರೈತ ಗುಡೇಪಾಲ ರಾಮಚಂದ್ರ ಭಟ್ಟರಿಗೆ ಸೇರಿದ ಸುಮಾರು ಅರ್ಧ ಎಕರೆ ಅಡಕೆ ತೋಟವನ್ನು ಸ್ಥಳೀಯ ಅರಣ್ಯ ಇಲಾಖೆ ಫಾರೆಸ್ಟರ್ ಮತ್ತು ಗಾರ್ಡ್ ಗಿಡಗಳನ್ನು ಕಡಿದು,ಕಿತ್ತು ಧ್ವಂಸ ಮಾಡಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಅಪ್ಪಟ ಅರಣ್ಯ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಮತ್ತು ಇದು ಜಿಪಿಎಸ್ ಆಗದ ಜಾಗ ಹಾಗು ಯಾವುದೆ ರೀತಿಯಲ್ಲಿ ಗಿಡಗಳನ್ನು ಕಿತ್ತು ಧ್ವಂಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಮ್ ಭಟ್ಟರ ಜಮೀನಿಗೆ ಜಿಪಿಎಸ್ ಮ್ಯಾಪ್ ಆಗಿರುವ ಸ್ಥಳವೆ ಬೇರೆ ಅಪ್ಪಟ್ಟ ಅರಣ್ಯವೆಂದು ಇಲಾಖೆಯ ಅಧೀನಕ್ಕೆ ಪಡೆದ ಜಾಗವೆ ಬೇರೆಯಾಗಿದೆ. ಈ ಸಂಬಂಧ ಸಂಬಂಧಿಸಿದ ಪ್ರಮುಖರಿಗೆ ಇಲಾಖೆಯಿಂದ ಸ್ಪಷ್ಟವಾದ ಮಾಹಿತಿ ರವಾನಿಸಲಾಗಿದೆ.

ಸ್ಥಳದಲ್ಲಿ ಯಾವುದೆ ರೀತಿಯ ಗಿಡಗಳ ಹಾನಿಯಾಗಿಲ್ಲ ಹೊಸದಾಗಿ ನೆಟ್ಟ ಅಡಕೆ ಗಿಡಗಳನ್ನು ತೆಗೆಯಲಾಗಿದ್ದು ಅದನ್ನು ಸಹ ಈಗಾಗಲೆ ಅವರು ಬೇರೆಡೆಗೆ ನೆಟ್ಟುಕೊಂಡಿದ್ದಾರೆ.
ಅರಣ್ಯ ಇಲಾಖೆಗೆ ಸಂಬಂಧಿಸಿದ ಮತ್ತು ಜಿಪಿಎಸ್ ಆಗದಿರುವ ಸ್ಥಳವನ್ನು ಇಲಾಖೆ ತನ್ನ ಅಧೀನಕ್ಕೆ ಪಡೆದುಕೊಂಡಾಗ ಇಲಾಖೆ ಮೇಲೆ ಗಂಭೀರ ಸ್ವರೂಪದ ಆರೋಪ ಹೊರಿಸಿ ಅಧಿಕಾರಿಗಳು ಜನ ವಿರೋಧಿಗಳು ಎಂಬಂತೆ ಬಿಂಬಿಸಲಾಗುತ್ತದೆ ಆದರೆ ನಿಜವಾದ ವಸ್ತು ಸ್ಥಿತಿ ಹಾಗಿರುವುದಿಲ್ಲ. ಹಾಗೊಂದು ವೇಳೆ ಅನಧಿಕೃತವಾದ ಅತಿಕ್ರಮಣ ಇಲಾಖೆ ತಡೆಯದೆ ಕುಳಿತರೆ ಭವಿಷ್ಯದ ಪೀಳಿಗೆಗೆ ಅರಣ್ಯವನ್ನು ಚಿತ್ರಪಟದಲ್ಲಿ ತೋರಿಸಬೇಕಾಗುತ್ತದೆ.
ಯಾವುದೆ ಅರಣ್ಯ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿ ಆ ಜಾಗದಲ್ಲಿ ತಮ್ಮ ಸ್ವಂತಕ್ಕಾಗಿ ತೋಟ,ಗದ್ದೆ,ಮನೆ ಮಾಡುವುದಿಲ್ಲ ಅದು ಸರ್ಕಾರದ ಸ್ವತ್ತು ಅಂದರೆ ಸಮಸ್ತ ಸಾರ್ವಜನಿಕ ಸ್ವತ್ತು ಅದನ್ನು ಉಳಿಸಲೆಂದೆ ಇಲಾಖೆಯು ಅಸ್ತಿತ್ವದಲ್ಲಿರುವುದು. ಯಾವುದೆ ಅಧಿಕಾರಿ,ಸಿಬ್ಬಂದಿಗಳಿಗೆ ವೈಯಕ್ತಿಕ ಕಾರಣಗಳೇನು ಇರುವುದಿಲ್ಲ. ಅವರೆಲ್ಲರು ಸರ್ಕಾರದ ಆದೇಶ ಪಾಲಿಸುತ್ತ ನಮ್ಮದೆ ಪರಿಸರ ಕಾಪಾಡುವಲ್ಲಿ ಶ್ರಮಿಸುತ್ತಿರುತ್ತಾರೆ ಹೊರತು ಯಾವುದೆ ವೈಯಕ್ತಿಕ ಇಚ್ಛೆ ಇರುವುದಿಲ್ಲ ಎಂಬುದು ಪರಿಸರ ಪ್ರೇಮಿ ಒಬ್ಬರ ಮಾತಾಗಿದೆ.
ಶಿಗೇಪಾಲ ಗ್ರಾಮದ ರಾಮಚಂದ್ರ ಭಟ್ಟರಿಗೆ ಸೇರಿದ ಜಿಪಿಎಸ್ ಆಗಿರುವ ಜಾಗವನ್ನು ನಮ್ಮ ಅಧಿಕಾರಿಗಳು ವಶಪಡಿಸಿಕೊಂಡಿಲ್ಲ ಬದಲಾಗಿ ಜಿಪಿಎಸ್ ಆಗದಿರುವ ಅರ್ಧ ಎಕರೆಯಷ್ಟು ಅಪ್ಪಟ ಅರಣ್ಯ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ. ಅದನ್ನು ಸಹ ಎರಡು ದಿನಗಳ ಮುಂಚಿತವಾಗಿಯೆ ಮಾಹಿತಿ ನೀಡಿದ್ದಾಗಿತ್ತು. ಹೊಸದಾಗಿ ಅತಿಕ್ರಮಣ ಮಾಡಲು ಇಲಾಖೆ ಬಿಡುವುದಿಲ್ಲ ಹಾಗು ಸರ್ಕಾರದ ಆದೇಶ ಚಾಚುತಪ್ಪದೆ ಪಾಲಿಸುವುದು ನಮ್ಮ ಇಲಾಖೆಯ ಜವಾಬ್ದಾರಿ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳದ ನಕ್ಷೆ ಸಹಿತವಾದ ಮಾಹಿತಿಯನ್ನು ಪ್ರಮುಖರಿಗೆ ನೀಡಲಾಗಿದೆ. ಹಿಮವತಿ ಭಟ್, ಎಸಿಎಫ್, ಯಲ್ಲಾಪುರ










Prathidvani Yellapura