

ಪ್ರತಿಧ್ವನಿ ಯಲ್ಲಾಪುರ : “ಟೈಲರಿಂಗ್ ಕೇವಲ ಒಂದು ಕೌಶಲವಲ್ಲ, ಅದು ಮಹಿಳೆಯರ ಜೀವನಕ್ಕೆ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಉತ್ತಮ ಸ್ವಯಂ ಉದ್ಯೋಗವಾಗಿದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಈ ಉದ್ಯಮವು ಮನೆಯಲ್ಲಿಯೇ ಆದಾಯ ಗಳಿಸಲು ಅವಕಾಶ ಕಲ್ಪಿಸುತ್ತದೆ. ಇಂದಿನ ದಿನಗಳಲ್ಲಿ ಶಾಲಾ ಸಮವಸ್ತ್ರ, ಮಹಿಳೆಯರ ಉಡುಪು, ಬ್ಲೌಸ್ ಹೊಲಿಗೆ, ಫ್ಯಾಷನ್ ಡಿಸೈನಿಂಗ್ ಹಾಗೂ ಬಟ್ಟೆಗಳ ಅಲ್ಟರೇಷನ್‌ಗೆ ನಿರಂತರ ಬೇಡಿಕೆ ಇರುವುದರಿಂದ ಟೈಲರಿಂಗ್ ಕ್ಷೇತ್ರವು ಶಾಶ್ವತ ಆದಾಯದ ಮೂಲವಾಗಿದೆ. ತರಬೇತಿಯೊಂದಿಗೆ ಗುಣಮಟ್ಟದ ಕೆಲಸ ಮಾಡಿದರೆ ಸ್ವಂತ ಉದ್ಯಮ ಆರಂಭಿಸಿ ಇತರರಿಗೂ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬಹುದು” ಎಂದು ತಾಲ್ಲೂಕು ಯೋಜನಾಧಿಕಾರಿ ಎ.ಎಸ್.ಸಂತೋಷ್ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಬಿ.ಸಿ. ಟ್ರಸ್ಟ್‌ನ ಪ್ರಿಯದರ್ಶಿನಿ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 3 ತಿಂಗಳ ಉಚಿತ ಟೈಲರಿಂಗ್ (ಹೊಲಿಗೆ) ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮವನ್ನು ಹಿರಿಯರಾದ ಶ್ರೀ ಸಂತೋಷ್ ಬಿಕ್ಕು ಗುಡಿಗಾರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ತರಬೇತಿ ಕಾರ್ಯಕ್ಕೆ ಶುಭ ಕೋರಿದರು.

ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಪೂಜ್ಯ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಮಹಿಳಾ ಸಬಲೀಕರಣ, ಸ್ವಯಂ ಉದ್ಯೋಗ, ಶಿಕ್ಷಣ, ಕಾನೂನು ಅರಿವು, ಆರೋಗ್ಯ ಜಾಗೃತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿ, ಮಹಿಳೆಯರು ಈ ಉಚಿತ ತರಬೇತಿಯ ಸದುಪಯೋಗವನ್ನು ಪಡೆದು ತಮ್ಮ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸುವಂತೆ ಕರೆ ನೀಡಿದರು.

ತರಬೇತಿಯ ಅವಧಿ, ಕಲಿಕಾ ವಿಧಾನ, ಅಗತ್ಯ ಪರಿಕರಗಳು ಹಾಗೂ ಟೈಲರಿಂಗ್ ಕಲಿಕೆಯ ಮಹತ್ವ ಹಾಗು ತರಬೇತಿಯ ನಂತರ ಸ್ವಯಂ ಉದ್ಯೋಗ ಆರಂಭಿಸುವ ಅವಕಾಶಗಳು, ಗ್ರಾಹಕರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ವಿಧಾನ ಹಾಗೂ ಗುಣಮಟ್ಟದ ಹೊಲಿಗೆಯ ಮೂಲಕ ಉತ್ತಮ ಆದಾಯ ಗಳಿಸುವ ಮಾರ್ಗಗಳ ಕುರಿತು ಹೊಲಿಗೆ ತರಬೇತಿಯ ಶಿಕ್ಷಕಿಯಾದ ಶ್ಯಾಮಲೀ ಪಿ. ಪಾಟಣಕರ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 30 ಮಂದಿ ಮಹಿಳಾ ತರಬೇತಿ ಅಭ್ಯರ್ಥಿಗಳು. ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಿರ್ಮಲಾ ಉಪಸ್ಥಿತರಿದ್ದರು. ರಾಧಿಕಾ ಸ್ವಾಗತಿಸಿದರು. ಅನಿತಾ ನಿರೂಪಿಸಿದರು. ಕೊನೆಯಲ್ಲಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.









Prathidvani Yellapura