
ಪ್ರತಿಧ್ವನಿ ಯಲ್ಲಾಪುರ : ಪ್ರತಿಧ್ವನಿ ಯಲ್ಲಾಪುರ : ಪ್ರವಾಸೋದ್ಯಮಕ್ಕೆ ಬಂದ್ ಭಾಗ್ಯ ತಾಲೂಕಿನ ಎಲ್ಲಾ ಪ್ರವಾಸೀ ತಾಣಗಳಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಿಸಬೇಕು. ಅಪಾಯದ ನೆಪವೊಡ್ಡಿ ಜಲಪಾತಗಳ ವೀಕ್ಷಣೆಗೆ ನಿರ್ಭಂದ ಹೇರಿರುವ ಆಡಳಿತ ವ್ಯವಸ್ಥೆ ಅಕ್ಷಮ್ಯ, ಪ್ರವಾಸೋದ್ಯಮ ಅಭಿವೃದ್ಧಿ ಬದಲು ಕತ್ತು ಹಿಸುಕುವ ಕೆಲಸವಾಗುತ್ತಿದೆ, ಒಂದು ವಾರದೊಳಗೆ ಈ ಬಗ್ಗೆ ಕ್ರಮವಹಿಸಿ ಎಲ್ಲಾ ಪ್ರೇಕ್ಷಣೀಯ, ಪ್ರವಾಸಿತಾಣಗಳನ್ನು ಪ್ರವಾಸಿಗರಿಗೆ ಮುಕ್ತವಾಗಿಸಬೇಕು.ಇಲ್ಲದಿದ್ದರೆ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಎಂದು ಬಿಜೆಪಿ ಮಂಡಲ ಉಪಾಧ್ಯಕ್ಷ ಗಣೇಶ ಹೆಗಡೆ ಎಚ್ಚರಿಸಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದರೂ, ಪ್ರವಾಸೀ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ತಾಲೂಕಿನ ಪ್ರವಾಸೋದ್ಯಮ ವ್ಯವಸ್ಥೆಯೇ ಹಾಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನಲ್ಲಿರುವ ಅನೇಕ ಜಲಪಾತಗಳು, ದೇವಸ್ಥಾನಗಳು, ಪ್ರವಾಸೀ ತಾಣಗಳು ಪ್ರವಾಸಿಗರ ಆಕರ್ಷಣೆಯ ತಾಣಗಳಾಗಿವೆ. ಪ್ರವಾಸೀ ತಾಣಗಳ ವೀಕ್ಷಣೆಗೆ ಸೂಕ್ತ ಸಮಯ ಮಳೆಗಾಲ. ಆದರೆ ಮಳೆಗಾಲದ ಸಂದರ್ಭದಲ್ಲೇ ಅಪಾಯದ ನೆಪವೊಡ್ಡಿ 3-4 ತಿಂಗಳುಗಳ ಕಾಲ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಹೇರುತ್ತಿರುವುದು ದುರಂತವಾಗಿದೆ.

ತಾಲೂಕಿನಲ್ಲಿ ಕೃಷಿ ಉತ್ಪನ್ನಗಳನ್ನು ಬಿಟ್ಟರೆ ಹೆಚ್ಚಿನ ಆದಾಯ ಮೂಲವಾಗಿ, ಹಲವರ ಬದುಕಿಗೆ ಆಸರೆಯಾಗಿರುವುದು ಪ್ರವಾಸೋದ್ಯಮ. ಆದರೆ ಪ್ರವಾಸಿ ತಾಣಗಳ ನಿರ್ಬಂಧದಿಂದ ತಾಲೂಕಿನ ಆರ್ಥಿಕ ವ್ಯವಹಾರದಲ್ಲಿ ಶೇ.40 ರಷ್ಟು ನಷ್ಟ ಅನುಭವಿಸುವಂತಾಗಿದೆ ಎಂದು ವಿವರಿಸಿದರು.

ಬಿಜೆಪಿ ಮುಖಂಡ ಬಾಲಕೃಷ್ಣ ನಾಯಕ ಮಾತನಾಡಿ, ತಾಲೂಕಿನಲ್ಲಿ ಅನೇಕ ಹೋಟೆಲ್, ಲಾಡ್ಜ್ ಗಳು, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣಪುಟ್ಟ ಅಂಗಡಿಗಳು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಕಾರ್ಯನಿರ್ವಹಿಸುತ್ತಿವೆ. ಮಳೆಯಿಂದ ಪ್ರವಾಸಿಗರಿಗೆ ಅಪಾಯ ಆಗದಂತೆ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆ ವಿನಃ ಪ್ರವಾಸಿಗರ ಪ್ರವೇಶಕ್ಕೇ ನಿರ್ಬಂಧ ಮಾಡುವ ನಡೆ ಸರಿಯಲ್ಲ. ಆದರೆ ಶಿಕ್ಷಣವಂತ ಅಧಿಕಾರಿಗಳು ಅನಕ್ಷರಸ್ಥರಂತೆ ಪ್ರವಾಸೀ ತಾಣಗಳ ಪ್ರವೇಶ ನಿರ್ಬಂಧಿಸಿರುವ ನಡೆಯಿಂದ ಎಲ್ಲರೂ ನಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ ಮಾತನಾಡಿ ಜಿಲ್ಲೆಯ ಜನರ ಸಹನೆ ಯನ್ನು ದೌರ್ಬಲ್ಯ ವೆಂದು ಕಾಂಗ್ರೆಸ್ ಸರಕಾರ ಭಾವಿಸಿದೆ,ಪದೇ ಪದೇ ಜನಸಾಮನ್ಯರಿಗೆ ತೊಂದರೆ ನೀಡಿ ಜನರ ಜೀವನವನ್ನು ದುರ್ಬಲ ಗೊಳಿಸಿದೆ ಸರಕಾರದ ಈಗಿನಕೆಲ ಆದೇಶ ಗಳು ಜನರ ಜೀವನವನ್ನು ದುಸ್ತರಗೊಳಿಸಿದೆ,ನಮ್ಮ ಮನೆ ನಮ್ಮ ಹಕ್ಕು ಜನಾಗ್ರಹ ಆಂದೋಲನ ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು

ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಪ್ರಮುಖರಾದ ಶ್ರೀನಿವಾಸ ಗಾಂವ್ಕರ, ಮಾಲತೇಶ ಜಲಧಿ ಉಪಸ್ಥಿತರಿದ್ದರು.










Prathidvani Yellapura