
ಪ್ರತಿಧ್ವನಿ ಯಲ್ಲಾಪುರ : ಅಡಿಕೆ ಹಾಳೆಯ ತ್ಯಾಜ್ಯವನ್ನು ವ್ಯರ್ಥ ಮಾಡದೆ ಅದರಿಂದ ಪೆಟ್ರೋಲ್ ಮಿಶ್ರಣಕ್ಕೆ ಬಳಸುವ ‘ಎಥೆನಾಲ್’ ಹಾಗೂ ಪೌಷ್ಟಿಕಾಂಶಯುಕ್ತ ‘ಜಾನುವಾರುಗಳ ಮೇವು’ (ಹಿಂಡಿ) ತಯಾರಿಸುವ ಮಹತ್ವದ ಸಂಶೋಧನೆಯು ಮೈಸೂರಿನ ಜೆಎಸ್‌ಎಸ್ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಪ್ರಯೋಗಾಲಯ ಹಂತದಲ್ಲಿದೆ.
ಅಡಿಕೆ ಹಾಳೆಗಳಿಂದ ಎಥೆನಾಲ್ ಮತ್ತು ದನಗಳಿಗೆ ಮೇವು ಸಂಶೋಧನೆಯಿಂದ ಸಾಬೀತು
ಅಡಿಕೆ ಹಾಳೆಯಿಂದ ‘ಎಥೆನಾಲ್’ ಮತ್ತು ‘ದನಗಳ ಮೇವು’: ಪ್ರಯೋಗ ಹಂತದಲ್ಲಿ ಸಂಶೋಧನೆ: ಅಡಿಕೆ ಹಾಳೆಯನ್ನು ಕೈಗಾರಿಕಾ ಮಟ್ಟದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಜೆಎಸ್‌ಎಸ್ ವಿಶ್ವವಿದ್ಯಾಲಯದ ಜೈವಿಕ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಶಿವ ಅವರ ಸಂಶೋಧನಾ ತಂಡ ಕಾರ್ಯಪ್ರವೃತ್ತವಾಗಿದೆ.
ಕಬ್ಬಿಗೆ ಪರ್ಯಾಯವಾಗಿ ಎಥೆನಾಲ್ ಪ್ರಯೋಗ: ಪ್ರಸ್ತುತ ಪೆಟ್ರೋಲ್ ಮಿಶ್ರಣಕ್ಕೆ ಹಾಗೂ ಔಷಧ ಉದ್ದೇಶಕ್ಕೆ ಬಳಸಲಾಗುವ ಎಥೆನಾಲ್ ಅನ್ನು ಕಬ್ಬಿನಿಂದ ಉತ್ಪಾದಿಸಲಾಗುತ್ತಿದೆ. ಆದರೆ ಅಡಿಕೆ ಹಾಳೆಯ ತ್ಯಾಜ್ಯದಿಂದಲೂ ಎಥೆನಾಲ್ ಉತ್ಪಾದಿಸಲು ಸಾಧ್ಯವಿದೆ ಎಂಬುದು ಪ್ರಯೋಗಾಲಯ ಮಟ್ಟದಲ್ಲಿ ಪ್ರಾಥಮಿಕವಾಗಿ ಪತ್ತೆಯಾಗಿದೆ.
ಜಾನುವಾರುಗಳ ಮೇವು (ಹಿಂಡಿ): ಅಡಿಕೆ ಹಾಳೆಯನ್ನು ಪುಡಿಮಾಡಿ ಪ್ರಾಣಿಗಳಿಗೆ ಪೌಷ್ಟಿಕ ಮೇವಾಗಿ ಪರಿವರ್ತಿಸುವ ನಿಟ್ಟಿನಲ್ಲೂ ಪ್ರಾಯೋಗಿಕ ಚಿಂತನೆಗಳು ನಡೆದಿವೆ.
ಕೈಗಾರಿಕಾ ವಿಸ್ತರಣೆ ಸವಾಲು: ಈ ಪ್ರಕ್ರಿಯೆ ಸದ್ಯಕ್ಕೆ ಲ್ಯಾಬ್ ಹಂತದಲ್ಲಿದ್ದು, ಇದನ್ನು ಬೃಹತ್ ಕೈಗಾರಿಕಾ ಮಟ್ಟಕ್ಕೆ ಹೇಗೆ ತರಬೇಕು, ಯಾವ ಎಂಜೈಮ್‌ಗಳನ್ನು ಬಳಸಿ ಉತ್ಪಾದನೆ ಹೆಚ್ಚಿಸಬೇಕು ಎಂಬ ಬಗ್ಗೆ ಇನ್ನೂ ಸಂಶೋಧನೆ ಮತ್ತು ಪರೀಕ್ಷೆಗಳು ಮುಂದುವರಿಯಬೇಕಿದೆ.
ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಗೋಪಾಲ್ ಮರಾಠೆ ಅವರು ಮಾತನಾಡಿ ಎಥೆನಾಲ್ ಕಬ್ಬಿನಿಂದಲೇ ಬರಲಿ ಅಥವಾ ಅಡಿಕೆ ಹಾಳೆಯಿಂದಲೇ ಬರಲಿ ಅದರ ಸಂಯೋಜನೆ ಒಂದೇ. ಜೆಎಸ್‌ಎಸ್ ವಿವಿಯ ಡಾ. ಶಿವ ನೇತೃತ್ವದ ತಂಡ ಅಡಿಕೆ ಹಾಳೆಯಿಂದ ಎಥೆನಾಲ್ ಉತ್ಪಾದಿಸುವ ಸಾಧ್ಯತೆಯನ್ನು ಲ್ಯಾಬ್ ಮಟ್ಟದಲ್ಲಿ ತೋರಿಸಿಕೊಟ್ಟಿದೆ. ಜೊತೆಗೆ ಜಾನುವಾರುಗಳಿಗೆ ಹಿಂಡಿ ರೂಪದ ಮೇವು ಮಾಡುವ ಆಲೋಚನೆಯೂ ಇದೆ. ಇದು ಸದ್ಯಕ್ಕೆ ಪ್ರಯೋಗದ ಹಂತದಲ್ಲಿದ್ದು, ಕೈಗಾರಿಕಾ ಮಟ್ಟಕ್ಕೆ ತರಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ” ಎಂದು ಹೇಳಿದರು.

ಒಟ್ಟಿನಲ್ಲಿ ಅಡಿಕೆ ವಿಚಾರದಲ್ಲಿ ಸದಾ ಗೊಂದಲದ ಮಾತುಗಳೆ ಕೇಳಿ ಬರುತ್ತಿರುವುದರ ಮದ್ಯೆ ಇದೊಂದು ಸಂತಸದ ಸುದ್ದಿಯಾಗಿದೆ. ಈಗಾಗಲೇ ಪರಿಸರ ಸ್ನೇಹಿ ತಟ್ಟೆಗಳಾಗಿ ಜಗತ್ತಿಗೆ ಪರಿಚಯವಾಗಿರುವ ಅಡಿಕೆ ಹಾಳೆ ಇದೀಗ ಎಥೆನಾಲ್ ಹಾಗು ಜಾನುವಾರುಗಳ ಮೇವಿಗೆ ಬಳಕೆಯಾಗುವುದಾದರೆ ರೈತರಿಗೆ ಮತ್ತಷ್ಟು ಆದಾಯ ಹೆಚ್ಚಲಿದೆ.












Prathidvani Yellapura