Breaking News

ಗಾಜಿನ ಮನೆಯಲ್ಲಿ ಕುಳಿತು ಕಲ್ಲುಹೊಡೆವ ಹರಿಪ್ರಕಾಶ್ ಕೋಣೆಮನೆಗೆ  ಶಾಸಕರನ್ನು ಪ್ರಶ್ನಿಸುವ ನೈತಿಕತೆ ನಿಮಗೆಲ್ಲಿದೆ – ವಿ.ಎಸ್.ಭಟ್


ಪ್ರತಿಧ್ವನಿ ಯಲ್ಲಾಪುರ – ಬಡವರು, ಮಧ್ಯಮವರ್ಗದವರು, ರೈತಾಪಿ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ದಿವಂಗತ ಶಾಸಕ ಉಮೇಶ್ ಭಟ್ ಅವರು ಸ್ಥಾಪಿಸಿದ “ವಿಶ್ವದರ್ಶನ” ಶಿಕ್ಷಣ ಸಂಸ್ಥೆ ಇಂದು ದುಬಾರಿ ಸಂಸ್ಥೆ ಆಗಿರುವುದು ಹರಿಪ್ರಕಾಶ್ ಕೋಣೆಮನೆ ಅವರಿಂದಲೆ, ಸಂಸ್ಥೆ ಕೊಂಡುಕೊಳ್ಳುವಾಗ ಇದ್ದ ಅವರ ಆಪ್ತರು ಈಗ ಅವರೊಂದಿಗೆ ಇಲ್ಲ ಕಾರಣ ಹೇಳಲಿ, ಬಿಜೆಪಿ ಅಧಿಕಾರವಿಲ್ಲದೆ ವದ್ದಾಡುತ್ತಿದ್ದಾಗ ಇದೇ ಶಾಸಕರ ರಾಜಿನಾಮೆಯಿಂದ ರಾಜ್ಯದಲ್ಲಿ ಅಧಿಕಾರಕ್ಕೇರಿ ಫಲ ಅನುಭವಿಸಿ ಇದೀಗ ಶಾಸಕ ಹೆಬ್ಬಾರ್ ವಿರುದ್ದ ಸುಖಾ ಸುಮ್ಮನೆ ಸುದ್ದಿಗೋಷ್ಟಿ ನಡೆಸಿ ಸುಳ್ಳು ಆರೋಪ ಮಾಡುವ ಹರಿಪ್ರಕಾಶ್ ಕೋಣೆಮನೆ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದನ್ನು ಬಿಡಬೇಕು ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ ಹೇಳಿದರು.


ಅವರು ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕರೆಯಲಾದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು.


ಜನರ ದಿಕ್ಕು ತಪ್ಪಿಸುವ ಬಿಜೆಪಿ ತಮ್ಮ ನಡೆ ಏನೆಂಬುದನ್ನು ಮೊದಲು ಸ್ಪಷ್ಟಪಡಿಸಲಿ. ರಾಜ್ಯ ಹೆದ್ದಾರಿ ಗುಂಡಿ ಹುಡುಕುವ ಬಿಜೆಪಿ ಮಂದಿ ರಾಷ್ಟ್ರೀಯ ಹೆದ್ದಾರಿ ಹಳ್ಳ ಹಿಡಿದಿರುವುದನ್ನು ಪ್ರಶ್ನಿಸಲಿ, ಬರಗಾಲ ಎದುರಾಗಿರುವುದರಿಂದ ರೈತರಿಗೆ ಪರಿಹಾರವಾಗಿ ಎಕರೆಗೆ 50 ಸಾವಿರ ಕೊಡಿ ಎನ್ನುವ ಬಿಜೆಪಿ ಮಂದಿ ಎಂಪಿ ಸಹಿತರಾಗಿ ಕೇಂದ್ರ ಸರ್ಕಾರದ ಬಳಿ ರಾಜ್ಯದ ರೈತರಿಗೆ ಪರಿಹಾರ ಕೊಡಿಸಲಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆ ವಿರುದ್ದ ಮಾತನಾಡುವ ಬಿಜೆಪಿ ಮಂದಿ ಕಸ್ತೂರಿ ರಂಗನ್ ವರದಿ, ಅರಣ್ಯ ಅತಿಕ್ರಮಣದಾರರ ಪರ ಕೇಂದ್ರ ಸರ್ಕಾರ ಏನುಮಾಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲಿ.
ಯಾರೋ ಕಟ್ಟಿ ಬೆಳೆಸಿದ ಪಕ್ಷದಲ್ಲಿ ಬಂದು ಅಸಂಬದ್ದ ಮಾತುಗಳನ್ನಾಡುತ್ತಿರುವ ಹರಿಪ್ರಕಾಶ್ ಕೋಣೆಮನೆ ತಮ್ಮ ವರಸೆ ಬದಲಿಸಿಕೊಳ್ಳಲಿ ಎಂದರು.


ಯಲ್ಲಾಪುರ ಜಿ+2 ಮನೆಗಳ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವ ಬಿಜೆಪಿ ಮಂದಿ  ಕಾಗೇರಿ ಪ್ರತಿನಿದಿಸುತ್ತಿದ್ದ ಶಿರಸಿ ಕ್ಷೇತ್ರದ ಜಿ+2 ವ್ಯವಸ್ಥೆ ಬಗ್ಗೆ ಮಾತನಾಡಲಿ, ದೇಹಳ್ಳಿ ಮೆಣಸುಮನೆ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮಸ್ಯೆ ಬಹುಕಾಲದಿಂದ ಕಾಡುತ್ತಿದ್ದು ಅಂತಹ ಅವ್ಯವಸ್ಥೆ ಸರಿಪಡಿಸಲಿ, ಗ್ರಾಮ ಪಂಚಾಯತ್ ಮುಂದೆ ಚೊಂಬು ಹಿಡಿದು ಪ್ರತಿಭಟಿಸುವ ಸಂಸದ ಕಾಗೇರಿ  ಕ್ಷೇತ್ರದ ರೈತರಪರ ನರೇಂದ್ರ ಮೊದಿ ಎದುರು ಧ್ವನಿ  ಎತ್ತಿ ಪರಿಹಾರ ಒದಗಿಸಲಿ.


ಗ್ರಾಮೀಣಾಭಿವೃದ್ಧಿ ಇಲಾಖೆಯ ಸುತ್ತೋಲೆಯ ದೋಷಗಳ ಬಗ್ಗೆ ಶಾಸಕ ಶಿವರಾಮ ಹೆಬ್ಬಾರ್ ಸರ್ಕಾರದೊಂದಿಗೆ ಮಾತನಾಡಿದ್ದು ಸದ್ಯದಲ್ಲೆ ಸರಿಪಡಿಸಿದ ಆದೇಶ ಹೊರಬೀಳಲಿದೆ, ನೂರಾರು ಹೆಕ್ಟೇರ್ ಒಣ ಭೂಮಿಗೆ ಕೆರೆ ತುಂಬಿಸುವ ಯೋಜನೆ ಮೂಲಕ ರೈತರ ಕಣ್ಣೀರು ಒರೆಸಿದ ನಾಯಕ ಹೆಬ್ಬಾರ್, ಕ್ಷೇತ್ರದಲ್ಲಿ ಶಾಶ್ವತ ಮತ್ತು ಸುಸಜ್ಜಿತ ಸರ್ಕಾರಿ ಕಟ್ಟಡಗಳ ನಿರ್ಮಾಣ,ಸಿಸಿ ರಸ್ತೆಗಳ ಅನುಷ್ಟಾನ, ಬಡವರಿಗೆ ಸೂರು, ರೈತರಿಗೆ ನೀರು, ಕಾರ್ಮಿಕ ಭವನ, ಶಾಲಾ ಕಾಲೇಜುಗಳಿಗೆ ಅನುದಾನ, ದೇವಸ್ಥಾನಗಳಿಗೆ ಧನಸಹಾಯ ಒಟ್ಟಿನಲ್ಲಿ ನೊಂದವರ ಕಣ್ಣೀರು ಒರೆಸುವ ಮಾನವೀಯ ಗುಣದ ಶಾಸಕ ಶಿವರಾಮ ಹೆಬ್ಬಾರ್ ಅವರ ಪಕ್ಷಾತೀತ ಸೇವೆಯೆ ಅವರಿಗೆ ಆನೆ ಬಲವಾಗಿದೆ.


ಎನ್.ಕೆ.ಭಟ್ ಹಿರಿಯ ಕಾಂಗ್ರೆಸ್ ಪ್ರಮುಖ


ದೇಶದಾದ್ಯಂತ ಬಿಜೆಪಿ ಬಂಡವಾಳ ಬಯಲಾಗಿದೆ ಪ್ರಶ್ನೆ ಪತ್ರಿಕೆ ಸೋರಿಕೆ, ಕಾಣಿಕೆ ಹಣ ಕಳುವು, ಮತಗಳ ಕಳುವು, ಗಡಿ ವಿಚಾರದಲ್ಲಿ ಅಭಧ್ರತೆ, ಅದಾನಿ,ಅಂಬಾನಿ ಮತ್ತು ಇನ್ನಿತರ ಕಾರ್ಪೋರೆಟ್ ಕಳ್ಳರ ರಕ್ಷಣೆ, ಬಡ ರೈತ ಸಮುದಾಯದ ಭಕ್ಷಣೆ ಬಿಟ್ಟರೆ ಬೇರೇನು ಸಾಧನೆ ಇಲ್ಲ. ದೇಶದಲ್ಲಿ ಸಾಂವಿಧಾನಿಕ ಸಂಸ್ಥೆ ಚುನಾವಣೆ ಆಯೋಗದ ಘನತೆಯನ್ನು ಮಣ್ಣುಪಾಲು ಮಾಡಿದ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ, ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಮತದಾರಮತಗಳನ್ನು ಕಳುವು ಮಾಡಿದ ಕೇಂದ್ರ ಬಿಜೆಪಿ ವಿರುದ್ಧ ಧ್ವನಿ ಎತ್ತದ ರಾಜ್ಯದ ಸಂಸದರು ಮೊದಿ ಎದುರು ಮಂಡಿಯೂರಿ ಕುಳಿತು ಕೊಳ್ಳುತ್ತಾರೆ. ಇವರೆಲ್ಲ ನಮ್ಮ ಶಾಸಕ ಶಿವರಾಮ ಹೆಬ್ಬಾರ್ ವಿರುದ್ದ ಮಾತನಾಡುವುದೆ ಹಾಸ್ಯಾಸ್ಪದ ಮೊದಲು ತಮ್ಮ ಪಕ್ಷದ ಧ್ವಂದ್ವ ನಿಲುವುಗಳನ್ನು ಸರಿಪಡಿಸಿಕೊಳ್ಳಿ ಅದನ್ನು ಬಿಟ್ಟು ಆಧಾರಗಳಿಲ್ಲ ಗಾಳಿಮಾತುಗಳನ್ನು ಸತ್ಯವೆಂದು ಜನತೆಗೆ ತಿಳಿಸುವ ನಿಮ್ಮ ಪ್ರಯತ್ನ ವ್ಯರ್ಥ ಜನ ಎಲ್ಲಾ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.


ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಬಾಗ್


ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೀಡಿದ ಆಶ್ವಾಸನೆಯಂತೆ ಜನತೆಗೆ ಪಂಚ ಗ್ಯಾರಂಟಿ ನೀಡುತ್ತಾ ಬಂದಿದ್ದು 3 ವರ್ಷ ಗತಿಸಿವೆ, ಉಚಿತಗಳನ್ನು ಪಡೆಯುತ್ತಿರುವ ಜನತೆ ಸರ್ಕಾರದ ಸೇವೆಗೆ ಆಭಾರಿಯಾಗಿದ್ದಾರೆ. ಇದು ಕೇವಲ ಕಾಂಗ್ರೆಸ್ ಮತದಾರರಿಗೆ ಅಥವಾ ಕಾಂಗ್ರೆಸ್ ಕಾರ್ಯಕರ್ತರಿಗೆ ಅಥವ ಕಾಂಗ್ರೆಸ್ ಶಾಸಕರು ಗೆದ್ದ ಕ್ಷೇತ್ರದಲ್ಲಿ ಮಾತ್ರ ನೀಡುತ್ತಿರುವ ಗ್ಯಾರಂಟಿ ಯೋಜನೆಯಲ್ಲ ರಾಜ್ಯದ ಸರ್ವರಿಗು ತಲುಪುತ್ತಿರುವ ಸರ್ಕಾರದ ಬದ್ದತೆಯ ಗ್ಯಾರಂಟಿ ಯೋಜನೆಯಾಗಿದೆ. ಇದರಲ್ಲಿ ಕೆಲವನ್ನು ಮರು ಪರಿಷ್ಕರಿಸಲು ಕೋರಲಾಗಿದೆ. ಇಷ್ಟೆಲ್ಲಾ ಬೃಹತ್ ಜನಪರ ಯೋಜನೆಗಳ ಸಮರ್ಪಕ ಅನುಷ್ಟಾನದಿಂದ ಕಂಗೆಟ್ಟ ಬಿಜೆಪಿ ಮಂದಿ ಇಲ್ಲ ಸಲ್ಲದ ಆರೋಪಗಳನ್ನು ಪತ್ರಿಕೆಗಳ ಮೂಲಕ ಬಿತ್ತರಿಸಿ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಆದರೆ ಈಗಾಗಲೆ ಜನತೆಗೆ ಅರ್ಥವಾಗಿದೆ ಯಾರು ಬಡವರಪರ, ಯಾರು ಶ್ರೀಮಂತರ ಪರ ಎಂದು. ಯೋಜನೆಯ ಫಲಾನುಭವಿಗಳು ಉಚಿತ ಪಡೆಯುತ್ತ ಸಾರ್ಥಕ ಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಘಟಕಾಧ್ಯಕ್ಷೆ ಪೂಜಾ ನೇತ್ರೇಕರ್, ಹಿರಿಯ ಕಾಂಗ್ರೆಸ್ಸಿಗ ಜಗನ್ನಾಥ ರೇವಣಕರ್, ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಣೇಶ್ ಪಾಟಣಕರ್, ಮಾಜಿ ಸದಸ್ಯ ಕಾಂಗ್ರೆಸ್ ನಗರ ಘಟಕಾಧ್ಯಕ್ಷ ಸತೀಶ್ ಶಿವಾನಂದ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅನಿಲ್ ಮರಾಠಿ, ಯುವ ಕಾಂಗ್ರೆಸ್ ಪ್ರಮುಖರಾದ ಮನೋಜ್ ನಾಯ್ಕ, ಅಕ್ಷಯ್ ರೇವಣಕರ್ ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *