
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ : ಪಟ್ಟಣದ ಮೀನು ಮತ್ತು ಮಾಂಸ ಮಾರುಕಟ್ಟೆಯ ಟೆಂಡರ್ ಅವಧಿ ಮುಗಿದು ಒಂದು ವರ್ಷವೇ ಆಗಿದ್ದರೂ ಈವರೆಗೂ ಟೆಂಡರ್ ಕರೆಯದಿರುವುದು ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಪಟ್ಟಣದ ಬಸ್‌ನಿಲ್ದಾಣದ ಸಮೀಪವಿರುವ ಮೀನು ಮತ್ತು ಮಾಂಸ ಮಾರುಕಟ್ಟೆಯು ಪಟ್ಟಣ ಪಂಚಾಯತ ಆಡಳಿತಕ್ಕೆ ಒಳಪಟ್ಟಿದ್ದು ಒಳಭಾಗದಲ್ಲಿರುವ ಕಟ್ಟೆಗಳನ್ನು ಈ ಹಿಂದೆ ಟೆಂಡರ್ ಕರೆಯುವ ಮೂಲಕ ಹಂಚಿಕೆ ಮಾಡಲಾಗಿತ್ತು. ಟೆಂಡರ್ ಅವಧಿ ಮುಗಿದು ವರ್ಷವೇ ಕಳೆದರೂ ಪುನಃ ಟೆಂಡರ್ ಕರೆದು ಹಂಚಿಕೆ ಮಾಡಿರುವುದಿಲ್ಲ. ಅಲ್ಲದೇ ಮಾ.23 ರಂದು ಕರೆದಿದ್ದ ಟೆಂಡರ್ ಅನ್ನೂ ಕೂಡಾ ಏಕಾಏಕಿ ರದ್ದುಪಡಿಸಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದ್ದು ಮಾರುಕಟ್ಟೆಯಲ್ಲಿ ಹಳೆಯ ವ್ಯಾಪಾರಿಗಳೇ ವ್ಯಾಪಾರ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಒಂದು ವರ್ಷದ ಅವಧಿಯಲ್ಲಿ ಐದು ಲಕ್ಷಕ್ಕೂ ಹೆಚ್ಚಿನ ಆದಾಯ ಆಗಬಹುದಾಗಿದ್ದು ಪಟ್ಟಣ ಪಂಚಾಯತದ ನಿಧಿಗೆ ಭರಣವಾಗಿರುವುದಿಲ್ಲದಿರುವುದನ್ನು ಗಮನಿಸಿದರೆ ಅಧಿಕಾರಿಗಳೇ ಅಕ್ರಮವೆಸಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಲು ಕಾರಣೀಕರ್ತರಾಗಿದ್ದಾರೆಂದು ಪಟ್ಟಣ ಪಂಚಾಯತ ರವೀಂದ್ರ ನಗರ ಸದಸ್ಯ ಸೋಮೇಶ್ವರ ನಾಯ್ಕ್ ಗಂಭೀರ ಆರೋಪ ಮಾಡಿದ್ದಾರೆ.

ಕೊಳಚೆ ನಿರ್ಮೂಲನಾ ಮಂಡಲಿಯಿಂದ ವಸತಿ ರಹಿತರಿಗೆ ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪಟ್ಟಣದ ಮಂಜುನಾಥ ನಗರದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಛಯದಲ್ಲಿ ಒಂದು ಮನೆಗೆ ರೂ.5೦,೦೦೦ದಂತೆ ಕೊಳಚೆ ನಿರ್ಮೂಲನಾ ಮಂಡಳಿಗೆ ಡಿಡಿ ಮೂಲಕ ಭರಣ ಮಾಡಿ ವರ್ಷಗಳೇ ಕಳೆದರೂ ಈವರೆಗೂ ಮನೆ ಹಂಚಿಕೆಯಾಗಿಲ್ಲ. ಸಾಲ ಸೂಲ ಮಾಡಿ ಹಣ ಭರಣ ಮಾಡಿರುವ ವಸತಿ ರಹಿತರು ಯಾವಾಗ ಮನೆ ತಮ್ಮ ಸುಪರ್ದಿಗೆ ಬರುವುದೋ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರೂ ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಮನೆ ಹಂಚಿಕೆಯಾಗುತ್ತಿಲ್ಲ.
ಇದಲ್ಲದೇ ಪಟ್ಟಣ ಪಂಚಾಯತ ವ್ಯಾಪ್ತಿಯ ಹಲವು ಅಭಿವೃದ್ಧಿ ಕಾರ್ಯಗಳನ್ನು ಟೆಂಡರ್ ಮೂಲಕ ಈಗಾಗಲೇ ಹಂಚಿಕೆ ಮಾಡಿ 4-5 ತಿಂಗಳುಗಳಾಗಿದ್ದರೂ ಯಾವುದೇ ಕಾಮಗಾರಿಯೂ ಪ್ರಾರಂಭವಾಗಿರುವುದಿಲ್ಲ.
ಮೇಲಿನ ಅಂಶಗಳೆಲ್ಲವನ್ನೂ ಗಮನಿಸಿದಾಗ ಸ್ಥಳೀಯ ಪಟ್ಟಣ ಪಂಚಾಯತದ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿಷ್ಕಾಳಜಿತನ ಎದ್ದು ಕಾಣುತ್ತಿದ್ದು ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಲು ಅಧಿಕಾರಿಗಳೇ ಕಾರಣೀಕರ್ತರಾಗಿದ್ದಾರೆಂದೂ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.





Prathidvani Yellapura