
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಭಾರತೀಯ ನೆಲದ ಸನಾತನ ಹಿಂದೂ ಸಂಸ್ಕೃತಿಯ ಆಚಾರ-ವಿಚಾರ ಪದ್ದತಿ ಪರಂಪರೆಗಳನ್ನು ಕರಾರುವಕ್ಕಾಗಿ ಅಭ್ಯಸಿಸಿ ಜೀವನಕ್ಕೆ ಅಳವಡಿಸಿಕೊಳ್ಳುವ ದೃಷ್ಠಿಕೋನದಲ್ಲಿ ವಿದೇಶೀ ಪ್ರಜೆಗಳಿಗೆ ಯಲ್ಲಾಪುರದಲ್ಲಿ ಮಾರ್ಗದರ್ಶನ ನೀಡುವ ಕಾರ್ಯ ಸದ್ದಿಲ್ಲದೇ ಪ್ರಾರಂಭವಾಗಿದೆ.

ಪಟ್ಟಣದ ಹೌಸಿಂಗ್‌ಬೋರ್ಡ್ ಕಾಲೋನಿ ಆವಾರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿದ್ವಾನ್ ವಿಘ್ನೇಶ್ವರ ಭಟ್ಟ ಎಂಬುವರಿಗೆ ಸೇರಿದ ಮನೆಯಲ್ಲಿ ಭಾರತೀಯ ಸನಾತನ ಸಂಸ್ಕೃತಿಯ ಅಧ್ಯಯನ ಅಭ್ಯಾಸವರ್ಗ ನಡೆಯುತ್ತಿದೆ.

ವಿದ್ವಾನ್ ವಿಘ್ನೇಶ್ವರ ಭಟ್ಟ ಇವರು ತಾಲೂಕಿನ ಬಾಗಿನಕಟ್ಟಾ ಮೂಲದವರಾಗಿದ್ದು ಪ್ರಸ್ತುತ ಮೈಸೂರಿನಲ್ಲಿ ಸಂಸ್ಕೃತ ವಿದ್ವಾಂಸರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ವೇದ, ಉಪನಿಷತ್ತು, ಜಪ, ತಪ, ಹೋಮ ಹವನ ಹಾಗೂ ಪದ್ಧತಿ ಪರಂಪರೆಯೊಂದಿಗೆ ಯೋಗ ವಿಶೇಷಗಳನ್ನು ವಿದೇಶದ ಪ್ರಜೆಗಳಿಗೆ ಭೋದಿಸುತ್ತಾ ಬಂದಿದ್ದಾರೆ.

ಈಗಾಗಲೇ 4೦೦೦ಕ್ಕೂ ಅಧಿಕ ವಿದೇಶೀ ಪ್ರಜೆಗಳಿಗೆ ಈ ರೀತಿಯ ಸಾಂಸ್ಕೃತಿಕ ಪರಂಪರೆಯನ್ನು ತಿಳಿಸಿಕೊಟ್ಟಿದ್ದಾರೆ. ಸದ್ಯ ಯಲ್ಲಾಪುರಕ್ಕೆ ನಾರ್ವೆ ದೇಶದ 23 ಪ್ರಜೆಗಳು ಸಂಸ್ಕೃತಿ ಅಧ್ಯಯನಕ್ಕಾಗಿ ಆಗಮಿಸಿದ್ದಾರೆ. ಅವರಲ್ಲಿ 9 ಮಹಿಳೆಯರು 14 ಪುರುಷರು ವಸತಿ ಮಾಡಿದ್ದು ಆದ್ಯಾತ್ಮಿಕ ಕಾರ್ಯಗಳನ್ನು ಅಭ್ಯಸಿಸುತ್ತಿದ್ದಾರೆ.

ಮುಂಜಾನೆ 4 ರಿಂದ ಪ್ರಾರಂಭವಾಗುವ ದಿನಚರಿಯಲ್ಲಿ ಯೋಗ, ಧ್ಯಾನ, ಕರ್ಮಯೋಗ, ವೇದ ಸಂಖ್ಯಾ ದರ್ಶನ, ಮಂತ್ರ ಪಠಣ, ಜಪ, ಗುಂಪು ವಿಮರ್ಶೆ, ದರ್ಶನ ಅಧ್ಯಯನ, ಭಾರತೀಯ ಕ್ರೀಡೆಗಳು, ತತ್ವಶಾಸ್ತç, ಅನುಷ್ಠಾನ, ಸತ್ಸಂಗ, ಭಜನೆ ಇನ್ನಿತರೆ ಸನಾತನ ಸಾಂಸ್ಕೃತಿಕ ಪದ್ಧತಿಗಳನ್ನು ಕರಾರುವಕ್ಕಾಗಿ ಹೇಳಿಕೊಡಲಾಗುತ್ತದೆ.

ನಾರ್ವೆ ದೇಶದಲ್ಲಿ ಹಿಂದೂ ಧಾರ್ಮಿಕ ಭಾವನೆಗಳು ಮತ್ತು ಯೋಗ, ಸಂಸ್ಕೃತ ಅಧ್ಯಯನಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು ಹಿಂದೂ ಧಾರ್ಮಿಕ ಪರಂಪರೆಗೆ ಮನಸೋತಿದ್ದಾರೆ. ಕಲಿಯುವ ಹಂಬಲವಿರುವ ವ್ಯಕ್ತಿಗಳ ಗುಂಪು ರಚಿಸಿ ಅಂತಹವರನ್ನು ಭಾರತಕ್ಕೆ ಕರೆತಂದು ಪರಿಚಯಿಸುವ ಕಾರ್ಯವನ್ನು ಅಲೆಕ್ಸಾಂಡರ್ ಮ್ಯಾಡ್ರಿನ್ ಎಂಬುವರು 2014 ರಿಂದಲೂ ನಡೆಸಿಕೊಂಡು ಬರುತ್ತಿದ್ದು ಹಲವು ಜನರಿಗೆ ಭಾರತೀಯ ಹಿಂದೂ ಪರಂಪರೆಯನ್ನು ಪರಿಚಯಿಸಿದ್ದಾರೆ.

ನಾರ್ವೆಯಲ್ಲೂ ತಮ್ಮದೇ ಯೋಗ ಸೆಂಟರ್ ಹೊಂದಿದ್ದು ವಿಶ್ವ ಯೋಗ ದಿನದಂದು ಯೋಗ ಕಾರ್ಯಕ್ರಮಗಳನ್ನೂ ನಡೆಸುತ್ತಾ ಬಂದಿದ್ದಾರೆ.

ಅಮೃತ ವಿಶ್ವ ವಿದ್ಯಾ ಪೀಠಂ ಅಡಿಯಲ್ಲಿ ಡಿಪಾರ್ಟ್ಮೆಂಟ್ ಆಫ್ ಸೆಂಟರ್ ಸ್ಟಡೀಸ್ ಆಫ್ ಸ್ಪಿರಿಚ್ಯುವಲ್ ಸ್ಟಡೀಸ್‌ನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಕೃತ ವಿದ್ವಾನ್ ವಿಘ್ನೇಶ್ವರ ಭಟ್ಟ ಅವರು ಈಗಾಗಲೇ ಹಿಂದೂ ಧಾರ್ಮಿಕ ಪರಂಪರೆ ಕುರಿತು 163 ಸಂಶೋಧನೆಗಳನ್ನು ಮಾಡಿದ್ದು ಗೂಗಲ್‌ನಲ್ಲಿ ಅಡಕವಾಗಿದೆ.

ಸನಾತನ ಹಿಂದೂ ಧರ್ಮದ ಬಗ್ಗೆ ನನ್ನಲ್ಲಿ ಕುತೂಹಲ ಹೆಚ್ಚಿತ್ತು. 1998 ರಿಂದ ಭಾರತದೊಂದಿಗೆ ಸಂಪರ್ಕವಿರಿಸಿಕೊಂಡು ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ತಿಳಿದುಕೊಂಡು ಬಂದಿದ್ದೇನೆ. ಜಪ, ಯಜ್ಞ, ಹೋಮಗಳನ್ನು ಕಲಿತಿದ್ದೇನೆ. ಒತ್ತಡದ ಬದುಕಿನಿಂದ ಹೊರಬಂದು ಯೋಗ, ಧ್ಯಾನದಿಂದ ನಮ್ಮ ಜೀವನ ಮೌಲ್ಯ ಹೆಚ್ಚಿಸಿಕೊಂಡಿದ್ದೇನೆ. ಸಂಸ್ಕೃತಿಯ ಶ್ರೀಮಂತಿಕೆಯ ದರ್ಶನ ಮಾಡಿದ್ದೇನೆ. ಹಣದ ಗಳಿಕೆ ಕ್ಷಣಿಕ, ಜೀವನ ಮೌಲ್ಯ ಅಧಿಕ ಎಂಬುದು ನನ್ನ ತಿಳುವಳಿಕೆಯಾಗಿದೆ.
ಅಲೆಕ್ಸಾಂಡರ್ ಮ್ಯಾಡ್ರಿನ್, ನಾರ್ವೆ ಪ್ರಜೆ

ಆನ್‌ಲೈನ್ ಮೂಲಕ ಮತ್ತು ನೇರವಾಗಿಯೂ ಆಧ್ಯಾತ್ಮಕ್ಕೆ ಸಂಬಂಧಿಸಿದ ದೇಶ ಮತ್ತು ಸಂಸ್ಕೃತಿಯ ವಿಚಾರಧಾರೆ ಒಳಗೊಂಡಂತೆ ಹೊರದೇಶದ ಪ್ರಜೆಗಳಿಗೆ ಹಿಂದೂ ಧಾರ್ಮಿಕ ಸನಾತನ ಪರಂಪರೆಯನ್ನು ಹೇಳಿಕೊಡುತ್ತಾ ಬಂದಿದ್ದೇನೆ. ಅದರಲ್ಲಿ ಈ ನೆಲಕ್ಕೆ ಸಂಬಂಧಿಸಿದ ಸಾತ್ವಿಕ ಕಾರ್ಯಗಳೆಲ್ಲವೂ ಅಡಕವಾಗಿದ್ದು ನಮ್ಮ ಸನಾತನ ಧರ್ಮದ ಶ್ರೇಷ್ಠತೆಯನ್ನು ಸಾರುತ್ತಾ ಜಗತ್ತಿಗೆ ಪಸರಿಸುವ ಕಾರ್ಯ ಮಾಡಲು ಹೆಮ್ಮೆ ಎನಿಸುತ್ತದೆ. ಈಗಾಗಲೆ ಹಲವು ವರ್ಷಗಳಿಂದ ಈ ಕಾರ್ಯ ನಡೆಸುತ್ತಾ ಬಂದಿದ್ದು ಇನ್ನಷ್ಟು ಹೆಚ್ಚು ವಿದೇಶದ ಪ್ರಜೆಗಳಿಗೆ ನಮ್ಮ ಧರ್ಮದ ಶ್ರೇಷ್ಟತೆಯನ್ನು ಪರಿಚಯಿಸಲು ಬಯಸುತ್ತೇನೆ. ವಿದ್ವಾನ್ ವಿಘ್ನೇಶ್ವರ ಭಟ್ಟ್ , ಪ್ರಾಧ್ಯಾಪಕರು
Prathidvani Yellapura