


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಜನರ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ನಾನೇ ಉತ್ತರಿಸಬೇಕಾಗುತ್ತದೆ. ವರ್ಗಾವಣೆಯ ಕಾರ್ಯದಲ್ಲಿ ಅನೇಕರು ತೊಡಗಿಕೊಂಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಮಳೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತದೆ. ಆಗ ಇಲಾಖೆಯೊಂದಿಗೆ ಗುತ್ತಿಗೆದಾರರು ಸಹಕರಿಸಿ, ವಿದ್ಯುತ್ ಸಂಪರ್ಕ ಸರಿಪಡಿಸುವ ಕಾರ್ಯ ಮಾಡುತ್ತಿರುವುದು ತೃಪ್ತಿಕರವಾಗಿದೆ. ಯಾವುದೇ ರೀತಿಯಲ್ಲಿ ಜನರಿಗೆ ತೊಂದರೆಯಾಗದಂತೆ ಹೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತ್ವರಿತವಾಗಿ ಕಾರ್ಯನಿರ್ವಹಿಸಿ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಅನೇಕ ಅಧಿಕಾರಿಗಳ ಕೊರತೆಯಿದ್ದು, ಸರ್ಕಾರದಿಂದ ತುಂಬುವ ಕಾರ್ಯವಾಗಬೇಕಿದೆ. ನಾನು ಶಾಸಕನಾಗಿ ಕ್ಷೇತ್ರಕ್ಕೆ ಅಗತ್ಯವಿರುವ ಯಾವುದೇ ಕಾರ್ಯ ಮಾಡಿಸಲು ನನಗೆ ಯಾವ ಅಡ್ಡಿ ಆತಂಕಗಳೂ ಇಲ್ಲ. ಜನರ ಬೇಡಿಕೆಗಳಿಗೆ ಸದಾ ಸ್ಪಂದಿಸುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವರು ಪಟ್ಟಣದ ಮದ್ಗುಣಿ ಸಂಕಿರ್ಣದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.

ಅಧ್ಯಕ್ಷತೆವಹಿಸಿದ್ದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕಾಧ್ಯಕ್ಷ ವೇಣುಗೋಪಾಲ ಮದ್ಗುಣಿ ಮಾತನಾಡಿ, ನಮ್ಮ ಮನೆ ಜನರಂತಿರುವ ಶಾಸಕರನ್ನು ಅಭಿನಂದಿಸದಿರುವುದು ಸಮಂಜಸವಾಗದು. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹಲವು ಕಾರಣಗಳಿಂದ ವಿಳಂಬವಾಗಿದೆ. ನಮ್ಮ ಹೆಬ್ಬಾರರು ಹೆಸ್ಕಾಂ ಅಧಿಕಾರಿಗಳ ಅಗತ್ಯಕ್ಕನುಗುಣವಾಗಿ, ಗುತ್ತಿಗೆದಾರರ ಬೇಡಿಕೆಯನ್ನು ಸದಾ ಒದಗಿಸುತ್ತ ಬಂದಿದ್ದಾರೆ ಎಂದರು.

ಸಂಘವು ಶತಮಾನೋತ್ಸವ ಆಚರಿಸಿದ ಹಿನ್ನೆಲೆಯಲ್ಲಿ ಸದಸ್ಯರಿಗೆ ಪದಾಧಿಕಾರಿಗಳಿಗೆ ಸಂಘದ ವತಿಯಿಂದ ಸಿದ್ದಪಡಿಸಲಾದ ನೆನಪಿನ ಕಾಣಿಕೆಯನ್ನು ಶಾಸಕ ಶಿವರಾಮ ಹೆಬ್ಬಾರ್ ನೀಡಿದರು.

ಈ ಸಂದರ್ಭದಲ್ಲಿ ಹೆಸ್ಕಾಂ ಸ.ಕಾ.ನಿ ಅಭಿಯಂತರ ವಿನಾಯಕ ಪೇಟ್ಕರ್ ಉಪಸ್ಥಿತರಿದ್ದರು. ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರತಿನಿಧಿ ಶಾಂತಾರಾಮ ಹೆಗಡೆ ಸ್ವಾಗತಿಸಿ, ಪ್ರಾಸ್ಥಾವಿಕ ಮಾತನಾಡಿದರು. ಪತ್ರಕರ್ತ ಕೇಬಲ್ ನಾಗೇಶ ನಿರ್ವಹಿಸಿ, ವಂದಿಸಿದರು. ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.






Prathidvani Yellapura