
ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ಸರ್ಕಾರಿ ನೌಕರರ ಸಂಘದ ಇತಿಹಾಸದಲ್ಲಿ ನೌಕರರ ಕ್ಷೇವiಕ್ಕಾಗಿ ಅಭೂತಪೂರ್ವ ಯೋಜನೆಗಳನ್ನು, ಸರ್ಕಾರದಿಂದ ಪ್ರಯೋಜನಗಳನ್ನು ಕಟಿಬದ್ಧವಾಗಿ ಮತ್ತು ಉತ್ತಮ ಸಂಬಂಧದೊಂದಿಗೆ ಸರ್ಕಾರದೊಂದಿಗೆ ಸಂವಹನ ನಡೆಸಿ ವಿವಿಧ ಅನುಕೂಲಗಳನ್ನು ಸಂಘದ ಮುಖೇನ ಸರ್ಕಾರಿ ನೌಕರರಿಗೆ ತರುವಲ್ಲಿ ಪ್ರಸ್ತುತ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿಯವರು ಅವಿರತವಾಗಿ ಶ್ರಮಿಸಿದ್ದು ಅವರ ಹೆಸರಿಗೆ ಮತ್ತು ಸಂಘದ ಗೌರವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ತಪ್ಪು ಮಾಹಿತಿ ಹರಡುತ್ತಿರುವ ತಂಡಕ್ಕೆ ಕಾನೂನುಕ್ರಮ ಜರಿಗಿಸಬೇಕಿದೆ ಎಂದು ರಾ.ಸ.ನೌ.ಸಂಘದ ತಾಲೂಕಾಧ್ಯಕ್ಷ ಪ್ರಕಾಶ ನಾಯ್ಕ ಹೇಳಿದರು.

ಅವರು ಪಟ್ಟಣದ ಆಡಳಿತ ಸೌಧದಲ್ಲಿ ಯಲ್ಲಾಪುರ ತಾಲೂಕು ರಾ.ಸ.ನೌ.ಸಂಘದ ವತಿಯಿಂದ ಸಂಘದ ಹೆಸರಿಗೆ ಮಸಿ ಬಳಿಯುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯಪಾಲರಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸುವ ವೇಳೆ ಮಾತನಾಡಿದರು.

ರಾಜ್ಯ ಸರ್ಕಾರದ ಕೆಲವು ಹಿತಾಸಕ್ತ ನೌಕರರು ನಕಲಿ ದಾಖಲೆ ಸೃಷ್ಟಿಮಾಡಿ ಸಂಘಕ್ಕೆ ಈಗಿನ ಪದಾಧಿಕಾರಿಗಳು ಹಾನಿಯುಂಟುಮಾಡಿದ್ದಾರೆ ಎಂದು ಸರ್ಕಾರಕ್ಕೆ ವ್ಯವಸ್ಥಿತವಾಗಿ ಸುಳ್ಳು ದೂರು ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ಮತ್ತು ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಲಿಖಿತ ದೂರನ್ನು ನೀಡಿರುವುದರಿಂದ ಅಂತವರ ಮೇಲೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹ ಪಡಿಸುತ್ತಿದೆ.
ನಕಲಿ ದಾಖಲೆ ಸೃಷ್ಟಿಸಿ ಅಪಪ್ರಚಾರ ಮಾಡುತ್ತಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವಾಲಯದ (ಸಕ್ಕರೆ) ಅಧೀನ ಕಾರ್ಯದರ್ಶಿ ಶಾಂತಾರಾಮ ಮತ್ತು ಶಾಖಾಧಿಕಾರಿ ಗುರುಸ್ವಾಮಿ, ರಾಯಚುರಿನ ಜಾನುವಾರು ಅಭಿವೃದ್ಧಿ ಅಧಿಕಾರಿ ಮೆಹಬುಬ್ ಭಾಷಾ ಎಂ., ಬೆಂಗಳೂರಿನ ಭೂ ಮಾಪನಾ ಇಲಾಖೆಯ ಸೂಪರ್‌ವೈಸರ್ ಶಿವರುದ್ರಯ್ಯ ವಿ.ವಿ., ರಾಮನಗರದ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ನಿಂಗೇಗೌಡ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ತಹಶೀಲ್ದಾರ ಮೂಲಕ ಸಲ್ಲಿಸುವ ಮನವಿಯಲ್ಲಿ ಉಲ್ಲೇಖಿಸಿದ್ದು ಮನವಿಯನ್ನು ಸರ್ಕಾರಿ ನೌಕರರ ಸಂಘದ ರಾಜ್ಯ ನೌಕರ ಪರಿಷತ್ ಸದಸ್ಯ ಸಂಜೀವಕುಮಾರ ಹೊಸ್ಕೇರಿ ವಾಚಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶರಣಪ್ಪ, ಗೌರವಾಧ್ಯಕ್ಷ ಜಿ.ಎಂ.ಭಟ್ಟ, ಖಜಾಂಚಿ ಸುಭಾಷ ನಾಯಕ, ಸಹಕಾರ್ಯದರ್ಶಿಗಳಾದ ಅರವಿಂದ ನಾಯ್ಕ, ಜ್ಯೋತಿ ನಾಯ್ಕ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜೀತ ನಾಯಕ, ಶಿಕ್ಷಕರ ಪ್ರತಿನಿಧಿಗಳಾದ ಗಂಗಾಧರ ಪಟಗಾರ, ಮಾರುತಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್ ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ತಲುಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ ಸಿ.ಜಿ.ನಾಯ್ಕ ಉಪಸ್ಥಿತರಿದ್ದರು.
Prathidvani Yellapura