


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ2022-23ನೇ ಸಾಲಿನ ಆಯವ್ಯಯ ಮಂಡಿಸುವ ಮುಖ್ಯಮಂತ್ರಿಗಳ ಭಾಷಣದಲ್ಲಿ ಪೌರಕಾರ್ಮಿಕರಿಗೆ ಮೊಟ್ಟ ಮೊದಲ ಬಾರಿಗೆ ತಿಂಗಳಿಗೆ 2000 ರು ಸಂಕಷ್ಟ ಭತ್ಯೆ ನೀಡುವ ಕುರಿತು ಘೋಷಿಸಿದ್ದರು ಆದರೆ ಯಲ್ಲಾಪುರದ ಪಟ್ಟಣ ಪಂಚಾಯತ ಪೌರಕಾರ್ಮಿಕರಿಗೆ ಈ ಭಾಗ್ಯ ಇನ್ನೂ ನೀಡದಿರುವುದು ವಿಪರ್ಯಾಸವಾಗಿದೆ.

ಸಮಾಜದ ಆರೋಗ್ಯಕ್ಕಾಗಿ ನಿತ್ಯ ಅಪಾಯಕಾರಿ ಮತ್ತು ಆರೋಗ್ಯಕ್ಕೆ ಮಾರಕವಾದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರ ಸೇವೆ ಅತ್ಯಂತ ಶ್ಲಾಘನೀಯವಾದುದು.

ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ಗಮನದಲ್ಲಿಟ್ಟುಕೊಂಡು ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಆಯವ್ಯಯ ಸಂದರ್ಭದ ಭಾಷಣದಲ್ಲಿ ಮೊಟ್ಟ ಮೊದಲ ಬಾರಿಗೆ ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ಘೋಷಿಸಿದ್ದರು. ಈ ಯೋಜನೆಗೆ ಆರ್ಥಿಕ ಇಲಾಖೆಯೂ ಒಪ್ಪಿಗೆ ನೀಡಿತ್ತು.



ಹಾಗೂ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಹೊರತುಪಡಿಸಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು.ಆದರೆ ಇದುವರೆಗೆ ಸಂಕಷ್ಟ ಭತ್ಯೆ ಪೌರಕಾರ್ಮಿಕರ ಕೈ ಸೇರದಿರುವುದು ಗೊಂದಲಕ್ಕೆ ಕಾರಣವಾಗಿದೆ.

ಈಗಾಗಲೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಈ ಯೋಜನೆ ಅನುಷ್ಠಾನಗೊಂಡು ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು 2000 ಸಂಕಷ್ಟ ಭತ್ಯೆ ನೀಡಲಾಗುತ್ತಿರುವ ಮಾಹಿತಿ ಲಭಿಸಿದೆ.
ಘೋಷಣೆಯಾದ ಮತ್ತು ಆರ್ಥಿಕ ಇಲಾಖೆ ಅನುಮತಿಸಿದ ಸಂಕಷ್ಟಕ್ಕೆ ಅನುಕೂಲವಾಗುವ ಹಣವನ್ನು ಪೌರಕಾರ್ಮಿಕರಿಗೆ ನೀಡುವಂತಾಗಬೇಕಿದೆ.

ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ 12 ಮಂದಿ ಖಾಯಂ ಹಾಗು ಹೊರಗುತ್ತಿಗೆ ಆಧಾರದಲ್ಲಿ 5 ಮಂದಿ ಸೇರಿದಂತೆ ಒಟ್ಟು 17 ಮಂದಿ ಪೌರ ಕಾರ್ಮಿಕರಿಗೆ ಈ ಭಾಗ್ಯ ಸಲ್ಲಬೇಕಿದೆ ಸರ್ಕಾರದ ಆದೇಶವಾಗಿ ವರ್ಷ ಕಳೆದರೂ ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ದಕ್ಕದಿರುವುದು ದುರದೃಷ್ಟವಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪೌರಕಾರ್ಮಿಕರಿಗೆ ಸಲ್ಲಬೇಕಾದ ಸಂಕಷ್ಟ ಭತ್ಯೆ ದೊರಕಿಸಿಕೊಡಬೇಕಿದೆ.
ಸರ್ಕಾರದಿಂದ ಘೋಷಣೆಯಾದ ನಂತರ ಸಂಕಷ್ಟ ಭತ್ಯೆ ನೀಡಬೇಕಿತ್ತು ಆದರೆ ನಮಗೆ ಬರಲಿಲ್ಲ ಕೆಲವು ಕಡೆಗಳಲ್ಲಿ ಈ ಹಣ ನೀಡುತ್ತಿದ್ದು ನಮಗು ದೊರೆಯಬೇಕಿದೆ. ಇದರಿಂದ ನಮ್ಮ ಜೀವನ ನಿರ್ವಹಣೆಗೆ ಅನುಕೂಲವಾಗಲಿದೆ.
ಹೆಸರು ಹೇಳಲಿಚ್ಚಿಸಿಸದ ಪ.ಪಂ ಪೌರಕಾರ್ಮಿಕ.
ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದ ಮಾಹಿತಿ ಸಂಬಂಧಿಸಿದ ಇಲಾಖೆಗೆ ಶೀಘ್ರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಸಂಗನ ಬಸಯ್ಯ , ಮುಖ್ಯಾಧಿಕಾರಿ , ಯಲ್ಲಾಪುರ ಪಟ್ಟಣ ಪಂಚಾಯತ
Prathidvani Yellapura