Breaking News

ಸಾರ್ವಜನಿಕರು ಮತ್ತು ಪೊಲೀಸರ ಸಾಂಗತ್ಯದಲ್ಲಿ ಮಂಚಿಕೇರಿ ನವೀಕೃತ ಠಾಣೆ ಉದ್ಘಾಟನೆ…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

ಪ್ರತಿಧ್ವನಿ,ಯಲ್ಲಾಪುರ : ಸಾಮಾನ್ಯವಾಗಿ ಪೋಲೀಸ್ ಠಾಣೆ ಎಂದರೆ ಎಲ್ಲೆಡೆ ಸಾರ್ವಜನಿಕರಿಗೆ ಭಯ ಪಡುವ ಪರಿಸ್ಥಿತಿ ಇರುವ ನಡುವೆಯೆ, ಇಲ್ಲಿನ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮ ರೀತಿಯ ಸೌಹಾರ್ದ ಸಂಬಂಧವನ್ನು ಬೆಳೆಸಿರುವುದು ಉಳಿದವರಿಗೆ ಖಂಡಿತ ಆದರ್ಶದ ವಿದ್ಯಮಾನವೆನ್ನಬಹುದು. ಇಂತಹ ವ್ಯಕ್ತಿಗಳು ನಮ್ಮ ಪ್ರದೇಶಕ್ಕೆ ಅತ್ಯಂತ ಅಗತ್ಯವಾಗಿದ್ದು, ಇವರ ಒಳ್ಳೆಯ ಕಾರ್ಯಕ್ರಮಗಳಿಗೆ ನಮ್ಮೆಲ್ಲರ ಸಹಕಾರ ಅಧಿಕವಾಗಿರಲಿ ಎಂಬ ಸದಾಶಯ ಪ್ರತಿಯೊಬ್ಬರಲ್ಲೂ ಮೂಡುವಂತಾಗಬೇಕು ಎಂದು ವೇ.ಮೂ ಲಕ್ಷೀನಾರಾಯಣ ಭಟ್ಟ ಕುಂಬಾರಕುಳಿ ಹೇಳಿದರು


ಅವರು ತಾಲೂಕಿನ ಮಂಚೀಕೇರಿಯಲ್ಲಿ ವಿವಿಧ ಪ್ರಾಯೋಜಕರ ಮತ್ತು ದಾನಿಗಳ ನೆರವಿನಿಂದ ನಿರ್ಮಿಸಲಾದ ನವೀಕೃತ ಠಾಣೆಯ ಕಟ್ಟಡ,ಆವರಣ ಗೋಡೆ, ಉದ್ಯಾನವನ ಹಾಗೂ ಸುರಕ್ಷತೆಗಾಗಿ ಅಳವಡಿಸಲಾದ ಸಿ.ಸಿ ಕ್ಯಾಮೆರಾದ ಉಧ್ಘಾಟನೆ ನೆರವೇರಿಸಿ: ಎಲ್ಲಾ ಕಾರ್ಯಗಳಿಗೆ ನೆರವು ನೀಡಿದವರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು


ಅತಿಥಿಗಳಾಗಿದ್ದ ಹಿರಿಯ ನಾಗರಿಕ ಜಿ.ಎನ್.ಶಾಸ್ತ್ರಿ ಜೋಗಭಟ್ರಕೇರಿ ಮಾತನಾಡಿ, ಕೇವಲ 5 ತಿಂಗಳ ಪರಿಶ್ರಮದಿಂದ ಸ್ಥಳೀಯ ಆರಕ್ಷಕ ಠಾಣೆಯ ಶಿಥಿಲಗೊಂಡ ಕಟ್ಟಡ ಇದೀಗ ಸಾರ್ವಜನಿಕರ ಮತ್ತು ಸಂಘ-ಸಂಸ್ಥೆಗಳ ನೆರವಿನಿಂದ ನವೀಕರಣಗೊಂಡು ಕಂಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಹವಾಲ್ದಾರ ದೀಪಕ ನಾಯ್ಕ ಮೂಲ ಪ್ರೇರಣೆಯಾಗಿದ್ದು, ಇಂದು ಅಧಿಕಾರದಲ್ಲಿರುವ ಇಲ್ಲಿಯ ಆರಕ್ಷಕ ಸಿಬ್ಬಂದಿಗಳ ಬಳಗವು ಬೇರೆಡೆ ವರ್ಗಾವಣೆಗೊಳ್ಳದೇ ಇಲ್ಲಯೇ ಕಾರ್ಯ ನಿರ್ವಹಿಸುವಂತಾಗಲಿ ಎಂದು ಸಾರ್ವಜನಿಕರ ಪರವಾದ ವಿನಂತಿ ನನ್ನದಾಗಿದೆ ಎಂದರು.

ಕಾರ್ಯಕ್ರಮವನ್ನು ಯಲ್ಲಾಪುರ ಪಿ.ಎಸ್.ಐ ರವಿ ಗುಡ್ಡಿ ಉದ್ಘಾಟಿಸಿದರು.


ಕಂಪ್ಲಿ ಪಿ.ಡಿ.ಓ ರುದ್ರಯ್ಯ ಹಿರೇಮಠ, ಕುಂದರಗಿ ಪಿ.ಡಿ.ಓ ರವಿ ಪಟಗಾರ, ಯಲ್ಲಾಪುರ ಠಾಣೆಯ ಶ್ಯಾಮ್ ಪಾವಸ್ಕರ್, ಆನಂದ ಪಾವಸ್ಕರ್ ವೇದಿಕೆಯಲ್ಲಿದ್ದರು.


ಠಾಣೆಯ ಆವರಣದಲ್ಲಿರುವ ನಾಗಚೌಡೇಶ್ವರಿ ದೇವರ ಪುನರ್‌ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಲಕ್ಷ್ಮೀನಾರಾಯಣ ಭಟ್ಟ ಕುಂಬಾರಕುಳಿ ಮತ್ತಿತರ ವೈದಿಕರು ವಿದ್ಯುಕ್ತವಾಗಿ ನೆರವೇರಿಸಿದರು.


ಇದೇ ಸಂದರ್ಭದಲ್ಲಿ ಕಂಪ್ಲಿ, ಹಾಸಣಗಿ, ಕುಂದರಗಿ, ಹಿತ್ಲಳ್ಳಿ ಮತ್ತು ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ತಲಾ 2 ಕಡುಬಡವ ಕುಟುಂಬದ ಫಲಾನುಭವಿಗಳಿಗೆ ಠಾಣೆಯ ವತಿಯಿಂದ ನೀಡಲಾದ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.


ಕಟ್ಟಡ ಮತ್ತು ಆವಾರ ಗೋಡೆ ಸೇರಿದಂತೆ ಎಲ್ಲ ಕಾರ್ಯಗಳಿಗೂ ಸಹಕರಿಸಿದ ಸುಮಾರು 150 ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಇಂತಹ ಮಾದರಿಯ ಕಾರ್ಯಕ್ರಮ ಅನುಷ್ಠಾನಗೊಳ್ಳಲು ಮೂಲ ಕಾರಣರಾದ ಹವಾಲ್ದಾರ ದೀಪಕ ನಾಯ್ಕ ಮತ್ತು ಆರಕ್ಷಕ ಪರಶುರಾಮ ದೊಡ್ಮನಿಯವರನ್ನು ಮಂಚೀಕೇರಿಯ ಸೇವಾ ತತ್ಪರ ಬಳಗದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.


ಯಲ್ಲಾಪುರ ಠಾಣೆಯ ಸಿಬ್ಬಂದಿ ಮಹಾಂತೇಶ ಹಾಡಿದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು.

ಹವಾಲ್ದಾರ ದೀಪಕ ನಾಯ್ಕ ಸ್ವಾಗತಿಸಿದರು.

ಶಿಕ್ಷಕರಾದ ನಾರಾಯಣ ಶೇರೂಗಾರ ಮತ್ತು ಸದ್ಗುರು ಭಟ್ಟ ನಿರ್ವಹಿಸಿದರು. ಆರಕ್ಷಕ ಪರಶುರಾಮ ವಂದಿಸಿದರು.


ನಾಗಚೌಡೇಶ್ವರಿ ದೇವರ ಪುನರ್‌ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ತ ಸಭಾ ಕಾರ್ಯಕ್ರಮದ ನಂತರ ಆಯೋಜಿಸಲಾಗಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *