Breaking News

ಮಿರಾಶಿ ಕುಟುಂಬದ ಆಯೋಜನೆಯಲ್ಲಿ ” ಯುವ ಸಂವಾದ”  ಹೆಬ್ಬಾರರೊಂದಿಗೆ
      

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಅಭಿವೃದ್ಧಿಗೆ ಪೂರಕವಾದ ಅಂಶಗಳ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಆರ್ಥಿಕ ವಹಿವಾಟಿನ ಉನ್ನತೀಕರಣಕ್ಕಾಗಿ ಉದ್ಯಮಗಳ ಸ್ಥಾಪನೆ ಅನಿವಾರ್ಯವಾಗಿದೆ. ಆದರೆ ಪರಿಸರಕ್ಕೆ ಪೂರಕವಾದ ಅರಣ್ಯ ಪ್ರದೇಶ ಉದ್ಯಮಗಳ ಸ್ಥಾಪನೆಗೆ ಮಾರಕವಾಗಿದೆ. ಇದರಿಂದ ತಾಲೂಕಿನ ವಿದ್ಯಾವಂತ ಯುವಕರು ನಗರಪ್ರದೇಶಗಳಿಗೆ ವಲಸೆ ಹೋಗಿ ಅಲ್ಪ ಸ್ವಲ್ಪ ವರಮಾನಕ್ಕೆ ದುಡಿಮೆ ಮಾಡುವಂತಹ ಸ್ಥಿತಿ ಬಂದೊದಗಿದೆ. ಇಂತಹ ವ್ಯವಸ್ಥೆಯ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದ್ದು ಸಮಾಜದ ಹಿರಿಯರು , ಬುದ್ಧಿಜೀವಿಗಳು, ಪ್ರಜ್ಞಾವಂತರು ಇನ್ನೂ ಹೆಚ್ಚಿನ ಚಿಂತನೆ ಮಾಡಿ ಕೊಡುವ ಸಲಹೆಗಳನ್ನು ಸ್ವೀಕರಿಸಿ ಭವಿಷ್ಯದ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಶಿವರಾಮ ಹೆಬ್ಬಾರ್ ಹೇಳಿದರು.


ಅವರು ಪಟ್ಟಣದ ಕಲ್ಮಠದಲ್ಲಿ ವಿಜಯ್ ಮಿರಾಶಿ ಕುಟುಂಬದವರು ಹಾಗೂ ಸ್ನೇಹಿತರು ಆಯೋಜಿಸಿದ್ದ “ಯುವ ಸಂವಾದ ; ಹೆಬ್ಬಾರರೊಂದಿಗೆ” ಎಂಬ ವಿನೂತನ ಕಾರ್ಯಕ್ರಮದಲ್ಲಿ ಯುವ ಸಮೂಹದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು.


ತಾಲೂಕಿನ ಪ್ರಗತಿಗೆ ಶೈಕ್ಷಣಿಕ ಕ್ಷೇತ್ರದ ಉನ್ನತೀಕರಣ, ಉದ್ಯಮ ಸ್ಥಾಪನೆ, ಉತ್ತಮ ಸಾರಿಗೆ ವ್ಯವಸ್ಥೆ ಇನ್ನಿತರ ಹಲವು ಅವಶ್ಯಕತೆಗಳ ಕುರಿತು ನೆರೆದಿದ್ದ 500 ಕ್ಕೂ ಅಧಿಕ ಯುವ ಸಮೂಹ ಹೆಬ್ಬಾರರೊಂದಿಗೆ ನೇರವಾಗಿ ಸಂವಾದ ನಡೆಸಿದರು.


ಪ್ರತ್ಯೇಕ ಮಹಿಳಾ ಕಾಲೇಜಿನ ಸ್ಥಾಪನೆಯ ಕುರಿತು ಓರ್ವ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾರ್ ಈಗಾಗಲೇ ರಾಜ್ಯದಲ್ಲಿ ಇಂತಹ ನೂತನ ಪ್ರಯೋಗ ಮಾಡಲಾಗಿದೆ ಯಾದರೂ ವಿದ್ಯಾರ್ಥಿನಿಯರ ಸಂಖ್ಯೆಯೂ ಹೆಚ್ಚಿರಬೇಕಾಗುತ್ತದೆ. ಹಾಗೆಂದು ಬೇಕೆಂಬುದರಲ್ಲಿ ತಪ್ಪಿಲ್ಲ, ಮುಂದಿನ ದಿನಗಳಲ್ಲಿ ಸಂಖ್ಯೆಯನ್ನಾಧರಿಸಿ ಪ್ರಯತ್ನಿಸಬೇಕಿದೆ.

ಈ ಸುದ್ದಿಯ ವಿಡಿಯೋ ದೃಶ್ಯಾವಳಿ ವೀಕ್ಷಿಸಿ

ಗಂಡುಮಕ್ಕಳಿಗಿಂತ ಹೆಚ್ಚಾಗಿ ವಿದ್ಯೆ ಹೆಣ್ಣುಮಕ್ಕಳಿಗೇ ಅನಿವಾರ್ಯವಿದೆ. ಕಾರಣ ಭವಿಷ್ಯದ ಬದುಕಿನಲ್ಲಿ ದುರಂತಗಳು ಸಂಭವಿಸಿದಾಗ ಹೆಣ್ಣು ತನ್ನ ಕಾಲ ಮೇಲೆ ತಾನು ನಿಂತು ಬದುಕುವ ಛಾತಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.

ವಿದ್ಯಾವಂತ ಯುವಕರಿಗೆ ಸರ್ಕಾರಿ ಕೆಲಸವೇ ಬೇಕೆಂದೇನೂ ಇಲ್ಲ, ದುಡಿಯುವ ಕೈಗಳಿಗೆ ಖಾಸಗಿಯಾದರೂ ಕೆಲಸ ಬೇಕಿದೆ. ಈ ಬಗ್ಗೆ ಊರಿನ ಪ್ರಮುಖರಾದ ತಮ್ಮ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾರ್ ನಗರಪ್ರದೇಶಗಳು ಉದ್ಯಮದ ಒತ್ತಡದಿಂದ ಸಂಕಷ್ಟಕ್ಕೆ ಸಿಲುಕಿವೆ. ದೂರದಿಂದ ನೋಡಲು ನಗರವೆನಿಸಿದರೂ ಒಳಹೊಕ್ಕಾಗ ತಿಳಿಯುವುದು ಸಮಸ್ಯೆಗಳ ಆಗರ. ಹಾಗಾಗಿ ಮಾನವ ಸಂಪನ್ಮೂಲಗಳನ್ನರಸಿ ನಗರದಿಂದ ಹೊರಪ್ರದೇಶಗಳಲ್ಲಿ ಉದ್ಯಮ ಸ್ಥಾಪಿಸುವವರಿಗೆ ಹೆಚ್ಚಿನ ಪ್ರೋತ್ಸಾಹ, ಬೆಂಬಲ, ನೀಡಿ ಬಹುಸಂಖ್ಯೆಯಲ್ಲಿ ಉದ್ಯೋಗ ಲಭಿಸಬಲ್ಲ ಗಾಮೆಂಟ್ಸ್ ಉದ್ಯಮ ತರುವ ಪ್ರಯತ್ನ ಆಗಬೇಕಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಕೇವಲ ಅಂಕಗಳಿಕೆಯಲ್ಲಿ ಮಾತ್ರ ಪ್ರತಿಶತ ನೂರರ ಪ್ರಯತ್ನ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಬದುಕಿನ ಪಾಠದಲ್ಲಿ 20% ಪ್ರಗತಿಯನ್ನು ಸಾಧಿಸದಿರುವುದು ದುರಂತವಾಗಿದೆ. ಹಲವು ಸಂದರ್ಶನಗಳಲ್ಲಿ ಪಠ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನಷ್ಟೇ ಹೇಳಬಲ್ಲ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ , ಜೀವನ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದರೆ ಉತ್ತರಿಸಲು ತಡವರಿಸುವುದನ್ನು ಕಣ್ಣಾರೆ ಕಂಡಿದ್ದೇನೆ. ಯುವಸಮೂಹದ ಮನಸ್ಥಿತಿ ಬದಲಾಗಬೇಕಿದೆ. ದಿನಪತ್ರಿಕೆ ಓದುವುದು, ವಾರ್ತಾ ವಿಶೇಷಗಳನ್ನು ವೀಕ್ಷಿಸುವ ಹವ್ಯಾಸದಿಂದ ದೂರ ಉಳಿದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಪ್ರತಿಯೊಬ್ಬ ಪ್ರಜೆಯು ದೇಶದ ಮತ್ತು ರಾಜ್ಯದ ವಿದ್ಯಮಾನಗಳನ್ನು ಅರಿತುಕೊಳ್ಳಬೇಕು ಮತ್ತು ಈ ದೇಶದ ಪ್ರತಿ ನಾಗರಿಕರ ಜವಾಬ್ದಾರಿ ಮತ್ತು ಕರ್ತವ್ಯ ಎಂದರು.

ಇನ್ನೂ ಹಲವಾರು ಪ್ರಶ್ನೆಗಳನ್ನು ಕೇಳಿದ ಯುವ ಸಮೂಹಕ್ಕೆ ಸಮಾಧಾನಚಿತ್ತದಿಂದಲೇ ಉತ್ತರಿಸಿ ಭವಿಷ್ಯದ ದಿನಗಳಲ್ಲಿ ತಾಲೂಕಿನ ಏಳಿಗೆಗೆ ಎಲ್ಲರೂ ಶ್ರಮಿಸೋಣ ಎಂಬ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ಯುವಸಮೂಹದ ವತಿಯಿಂದ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಾಮಾಜಿ ಕಾರ್ಯಕರ್ತ ವಿಜಯ್ ಮಿರಾಶಿ, ಪ್ರಮುಖರಾದ ಗೋಪಾಲಕೃಷ್ಣ ಎನ್ ಗಾಂವ್ಕರ್, ವಿವೇಕ ಹೆಬ್ಬಾರ್, ಮುರಳೀ ಹೆಗಡೆ ಉಪಸ್ಥಿತರಿದ್ದರು. ಯುವಮುಖಂಡ ಅನಿಕೇತ್ ಮಿರಾಶಿ ಆಯೋಜಿಸಿದ್ದ ಯುವ ಸಂವಾದ ಕಾರ್ಯಕ್ರಮ ಯಶಸ್ವಿಯಾಯಿತು.

ಕಾರ್ಯಕ್ರಮಕ್ಕು ಪ್ರಾರಂಭದಲ್ಲಿ ಯುವ ಸಮೂಹದ ಯುವತಿಯರು ಹೆಬ್ಬಾರ್ ಅವರಿಗೆ ಹೂ ಮಳೆಗರೆದು ವೇದಿಕೆಗೆ ಆಹ್ವಾನಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *