Breaking News

ಯಲ್ಲಾಪುರ ತಾಲೂಕಿನಲ್ಲೊಂದು ಕೊಡೈಕೆನಾಲ್ ! ಸೂರ್ಯಕಲ್ಯಾಣಿ ಗುಡ್ಡ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಬೆಟ್ಟ ಗುಡ್ಡಗಳು ಹಸಿರನುಟ್ಟು ಮಂಜು ಹೊದ್ದು ಮಲಗಿದಂತಹ ಭಾವ, ನೋಡಿದಷ್ಟೂ ದೂರ ಸೌಂದರ್ಯ ಶಿಖರ, ಗಿರಿಕಾನನ, ಕಂದರ. ತಂಪಾಗಿ ಬೀಸುವ ಗಾಳಿ, ಹಕ್ಕಿ-ಪಿಕ್ಕಿಗಳ ಕಲರವ , ನೋಡಲೆಷ್ಟು ಸುಂದರ “ಸೂರ್ಯಕಲ್ಯಾಣಿ ಗುಡ್ಡ”, ಯಲ್ಲಾಪುರದಲ್ಲೊಂದು ಕೊಡೈಕೆನಾಲ್ ಅನುಭವ.


ತಾಲೂಕಿನ ಅತ್ಯಂತ ದೂರದಲ್ಲಿರುವ ಮಾವಿನಮನೆ ಪಂಚಾಯತ ವ್ಯಾಪ್ತಿಯಲ್ಲಿರುವ ಮಲವಳ್ಳಿಯಿಂದ ಒಂದಷ್ಟು ದೂರ ಸಾಗಿದರೆ ಸೂರ್ಯಕಲ್ಯಾಣಿ ಗುಡ್ಡಕ್ಕೆ ಹೋಗುವ ದಾರಿ ಸಿಗುತ್ತದೆ.

ಪ್ರಕೃತಿ ಸೌಂದರ್ಯ ಸವಿಯಲು ವಾಹನಗಳನ್ನು ಗುಡ್ಡದ ತಪ್ಪಲಿನಲ್ಲಿಯೇ ಬಿಟ್ಟು ಕಾಲ್ನಡಿಗೆಯಲ್ಲಿ 1.5 ಕಿ.ಮೀ ದೂರ ಕ್ರಮಿಸಬೇಕಿದೆ.

ಗಿಡಮರಗಳ ಬುಡದಲ್ಲಿ ಪ್ರಕೃತಿ ನಿರ್ಮಿತ ಜನರು ನಡೆದಾಡಿದ ಕಾಲುದಾರಿಯಲ್ಲೇ ಸಾಗಿ ಬೆಟ್ಟದ ತುದಿ ಮುಟ್ಟುವಾಗ ಆಯಾಸದಿಂದ ಉಸ್ ಎಂದು ಉಸಿರು ಬಿಡುತ್ತಲೇ ಕಣ್ಣರಳಿಸಿ ನೋಡಿದರೆ ಹಸಿರು ಸೌಂದರ್ಯದ ಸಸ್ಯಕಾಶಿ ನಡೆದ ಆಯಾಸವನ್ನೆಲ್ಲಾ ಕ್ಷಣಮಾತ್ರದಲ್ಲಿ ಮಾಯವಾಗಿಸಿ ನವಚೈತನ್ಯ ತುಂಬಿದಂತಾಗುತ್ತದೆ.


ನೋಡಿದಷ್ಟೂ ದೂರ ಬೆಟ್ಟಗಳೇ ಮುಗಿಲು ಚುಂಬಿಸುವಂತಹ ನೋಟ, ಮಂಜು ಮಿಶ್ರಿತ ತಂಪಾದ ಗಾಳಿ ದೇಹವನ್ನು ಸೋಕಿದೊಡನೇ ಚುಮುಗುಟ್ಟುವ ಛಳಿ ಪ್ರಕೃತಿಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ಫೋಟೋಶೂಟ್‌ಗೂ ಬಲು ಚೆಂದದ ಪರಿಸರ. ವಾಹನಗಳ ಸದ್ದಿಲ್ಲ, ವಾತಾವರಣದಲ್ಲಿ ಕಲುಷಿತವಿಲ್ಲ, ಜನಜಂಗುಳಿಯಿಲ್ಲ, ನಿಶಬ್ಧ ವಾತಾವರಣದಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಯಾವುದೇ ಅಡೆತಡೆಯಿಲ್ಲ.
ರಜಾ ದಿನಗಳಲ್ಲಿ , ವಾರಾಂತ್ಯದಲ್ಲಿ ಮೋಜಿ ಮಸ್ತಿಗಾಗಿ ಪಬ್, ಕ್ಲಬ್, ಪಾರ್ಟಿ ಯಾಂತ್ರೀಕೃತ ಬದುಕಿನ ಹೊಯ್ದಾಟದಿಂದ ಹೊರಬರಲು ನಿಸರ್ಗ ಸೌಂದರ್ಯ ಸವಿಯಬೇಕೆಂದರೆ ಒಮ್ಮೆಯಾದರೂ ಸೂರ್ಯಕಲ್ಯಾಣಿ ಗುಡ್ಡ ಏರಲೇಬೇಕು.


ಪ್ರವಾಸೋದ್ಯಮ ಇನ್ನಷ್ಟು ವ್ಯಾಪಕವಾಗಿ ಆರ್ಥಿಕ ಚಟುವಟಿಕೆಗೆ ಒಗ್ಗಿಕೊಳ್ಳಲು ಸರ್ಕಾರ ಇಂತಹ ತಾಣಗಳ ಅಭಿವೃದ್ಧಿಗೆ ಮುಂದಾಗಬೇಕಿದೆ. ಈಗಾಗಲೇ ನಿಧಾನವಾಗಿ ರಾಜ್ಯದ ವಿವಿಧ ಭಾಗಗಳಿಂದ ನಿಸರ್ಗ ಸೌಂದರ್ಯ ಸವಿಯಲು ಪ್ರವಾಸಿಗರು ದಿನದಿಂದ ದಿನಕ್ಕೆ ಹೆಚ್ಚಾಗಿ ಬರುತ್ತಿದ್ದು ಮೂಲಭೂತ ಸೌಕರ್ಯಗಳ ಕಡೆ ಗಮನಹರಿಸಬೇಕಿದೆ.

ಗುಡ್ಡದ ತುದಿಯಲ್ಲಿ ವಾಚ್ ಟವರ್ ನಿರ್ಮಿಸಿ, ಘನತ್ಯಾಜ್ಯಗಳನ್ನು ಹಾಕಲು ಕಲ್ಲಿನ ಸಹಾಯದಿಂದ ತೊಟ್ಟಿಯನ್ನು ನಿರ್ಮಿಸಿ , ಅಲ್ಲಲ್ಲಿ ಕೆಲವು ಗಿಡಗಳನ್ನು ನೆಡುವುದರೊಂದಿಗೆ ಅರಣ್ಯ ಇಲಾಖೆ ಸಣ್ಣಪ್ರಯತ್ನವನ್ನಂತೂ ಮಾಡಿದೆ. ಕೆಲವು ಕಿಡಿಗೇಡಿಗಳು ತಂದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ಮಧ್ಯದ ಬಾಟಲ್ ಮತ್ತು ಸ್ಯಾಚೆಟ್‌ಗಳು, ಊಟ, ಜಂಕ್‌ಫುಡ್‌ಗಳ ಕವರುಗಳು ಅಲ್ಲಲ್ಲಿ ಎಸೆದಿರುವುದು ಕಂಡು ಬರುತ್ತಿದ್ದು ಅದನ್ನು ನಿಯಂತ್ರಿಸಿದರೆ ಸ್ವಚ್ಛಪರಿಸರ ಅಲ್ಲಿ ಕಾಣಬಹುದಾಗಿದೆ.


ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಇಂತಹ ವಿಶೆಷ ತಾಣಗಳ ಕಡೆ ಗಮನಹರಿಸಿ ವಿಶ್ವಕ್ಕೆ ಸುಂದರ ತಾಣದ ಪರಿಚಯಿಸುವ ಕಾರ್ಯವಾಗಬೇಕಿದೆ. ಸಂಚಾರಕ್ಕೆ ಉತ್ತಮ ರಸ್ತೆಯಿದ್ದು ಕೆಲವೊಂದು ಮೂಲಭೂತ ಸೌಕರ್ಯಗಳ ವ್ಯವಸ್ಥೆಯಾದರೆ ನಿತ್ಯವೂ ನೂರಾರು ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿ ಸೂರ್ಯಕಲ್ಯಾಣಿ ಗುಡ್ಡಕ್ಕಿದೆ. ಪರಿಸರಕ್ಕೆ ಧಕ್ಕೆಯಾಗದಂತೆ ಒಂದಷ್ಟು ವ್ಯವಸ್ಥೆಗಳನ್ನು ಕಲ್ಪಿಸಬೇಕೆಂಬುದು ಸಾರ್ವಜನಿಕರ, ಪ್ರವಾಸಿಗರ ಅನಿಸಿಕೆಯಾಗಿದೆ.

ಪ್ರಮುಖಾಂಶಗಳು ಗಮನಿಸಿ

‌• ಯಲ್ಲಾಪುರ ತಾಲೂಕು ಕೇಂದ್ರದಿಂದ 39 ಕಿ.ಮೀ ದೂರದಲ್ಲಿದೆ.
• ಬಳ್ಳಾರಿ-ಕಾರವಾರ ರಾಷ್ಟೀಯ ಹೆದ್ದಾರಿಯ ಇಡಗುಂದಿ ಸಮೀಪವಿರುವ ವಜ್ರಳ್ಳಿ ಮಾರ್ಗದಿಂದ ಸಾಗಬೇಕು.

• ಗುಡ್ಡ ಹತ್ತುವುದಕ್ಕು ಮುನ್ನ ಗುಡ್ಡದ ತಪ್ಪಲಿನಲ್ಲಿ ವಾಹನ ನಿಲುಗಡೆ ಮಾಡಬೇಕು

• ಗುಡ್ಡದ ತುದಿ ತಲುಪಲು ಕನಿಷ್ಟಪಕ್ಷ ಒಂದೂವರೆ ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಬೇಕು ಅಷ್ಟೇನು ಕಠಿಣ ಮಾರ್ಗವಲ್ಲ

• ಗುಡ್ಡದ ಸಮೀಪ ತಿನ್ನಲು ಯಾವುದೆ ಅಂಗಡಿ ಹೋಟೆಲ್ ಗಳಿಲ್ಲ ದಾರಿಮದ್ಯ ವಜ್ರಳ್ಳಿ, ಮಲವಳ್ಳಿ ಬಳಿ ಸಿಗುವ ಅಂಗಡಿಗಳಲ್ಲಿ ತಿಂಡಿ ತಿನಿಸು ಬಹಳ ಮುಖ್ಯವಾಗಿ ಕುಡಿಯುವ ನೀರನ್ನು ಮರೆಯದೆ ಕೊಂಡೊಯ್ಯಿರಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *