

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಸಾಧನೆಗೆ ಧರ್ಮವಾಗಲೀ, ಜಾತಿಯಾಗಲೀ, ಅಂತಸ್ತುಗಳಾಗಲೀ ಯಾವುದೂ ಪೂರಕವಲ್ಲ. ಸಾಧಿಸುವ ಛಲ, ಕಲಿಸುವ ಗುರುಗಳ ಮೇಲಿನ ಗೌರವ, ಹುಟ್ಟಿದ ನೆಲದ ಮೇಲಿನ ಪ್ರೀತಿ ಮತ್ತು ಆತ್ಮಬಲ ಇದ್ದಾಗ ಸರಳ ಸಾಮಾನ್ಯನೂ ಜಗತ್ತಿನ ಸಾಧಕನಾಗಿ ಹೊರಹೊಮ್ಮಬಲ್ಲ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿದ್ದಾರೆ ಜಗತ್ತಿನ ಪ್ರಖ್ಯಾತ ರೊಬೊಟಿಕ್ ತಜ್ಞರಲ್ಲಿ ಒಬ್ಬರಾದ ಡಾ.ಇರ್ಷಾದ್ ಎ ಶೇಖ್.

ತಾಲೂಕಿನ ಮಂಚೀಕೇರಿಯ ಅರಣ್ಯ ಗುತ್ತಿಗೆದಾರರಾದ ಅಬ್ದುಲ್ ಖಾದರ್ ಶೇಖ & ಚಾಂದ್‌ಬಿ ಶೇಖ್ ಅವರ ಮಗನಾಗಿ ಜನಿಸಿ ಶೈಕ್ಷಣಿಕ ಜೀವನವನ್ನು ಯಲ್ಲಾಪುರದಲ್ಲಿ ಪ್ರಾರಂಭಿಸಿ ಪ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣವನ್ನು

ವೈ.ಟಿ.ಎಸ್.ಎಸ್‌ನಲ್ಲಿ ಪೂರೈಸಿದ್ದಾರೆ. 1993ರಿಂದ 1998 ರವರೆಗೆ ಕೆ.ಎಂ.ಸಿ ಹುಬ್ಬಳ್ಳಿಯಲ್ಲಿ ಎಂ.ಬಿ.ಬಿ.ಎಸ್,199-2002 ರವರೆಗೆ ಕೆ.ಎಂ.ಸಿ ಹುಬ್ಬಳ್ಳಿಯಲ್ಲಿ ಎಂ.ಎಸ್, 2002-2004 ರವರೆಗೆ ಕೇರಳದಲ್ಲಿ ಪೋಸ್ಟ್ ಎಂ.ಎಸ್ ಫೆಲೋಶಿಪ್ ಪಡೆದು 2004 ರಲ್ಲಿ ಸಂಶೋಧನೆಗಾಗಿ ಇಂಗ್ಲೆಂಡ್‌ಗೆ ತೆರಳುತ್ತಾರೆ.
ಇಂಗ್ಲೆಂಡ್‌ನಲ್ಲಿ ಅವರ ಪ್ರಾರಂಭಿಕ ದಿನಗಳು ತೀರಾ ಸಂಕಷ್ಟ ಹಾಗೂ ಸವಾಲಿನ ದಿನಗಳಾಗಿತ್ತು. ಭಾರತೀಯರನ್ನು ಇಂಗ್ಲೆಂಡ್‌ನಲ್ಲಿ ಕೆಳಮಟ್ಟದ ಕೆಲಸಗಳಿಗೆ ಮಾತ್ರ ಬಳಸಿಕೊಳ್ಳುತ್ತಿದ್ದರು. ಆಗ ತಮ್ಮ ಸಂಶೋಧನೆಗೆ ಅವಕಾಶ ಕೋರಿ ನೂರಾರು ಸಂಸ್ಥೆಗಳಿಗೆ ಅರ್ಜಿ ಹಾಕಿದರೂ ಅವಕಾಶ ದೊರೆಯದೇ ಕೆಲವು ತಿಂಗಳು ಹಾಗೆಯೇ ಕಳೆಯಬೇಕಾಯಿತು. ಕೈಯ್ಯಲ್ಲಿದ್ದ ಹಣ ಖಾಲಿಯಾಗಿ ವಸತಿ ಮತ್ತು ಊಟಕ್ಕಾಗಿ ಇಂಗ್ಲೆಡ್‌ನ ಲಕ್ಷ್ಮೀ ದೇವಾಲಯ ಹಾಗೂ ಗುರುದ್ವಾರದಲ್ಲಿ ಆಶ್ರಯ ಪಡೆದ ಸಹಾಯವನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಇಂತಹ ಸನ್ನಿವೇಶದಲ್ಲಿ ಇನ್ನೇನೂ ವೀಸಾ ಅವಧಿ ಮುಗಿದು ಭಾರತಕ್ಕೆ ಹಿಂದಿರುಗುವುದು ಅನಿವಾರ್ಯ ಎಂಬ ಸಂದರ್ಭದಲ್ಲಿ ಯಲ್ಲಾಪುರದ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿಪೂರ್ವ ಶಿಕ್ಷಣದ ಸಮಯದ ಮಿತ್ರರಾದ ಡಾ.ಪ್ರಶಾಂತ ನಾಯಕ ಅವರ ಶಾಲಾ ದಿನಗಳ ಸ್ನೇಹ ಮತ್ತು ಒಂದೇ ಊರಿನ ಬಾಂಧವ್ಯ ಸಹಕಾರಿಯಾಯಿತು. ಸ್ನೇಹಿತ ಪ್ರಶಾಂತ್ ಸಹಾಯದಿಂದ ಸಾಧನೆಯ ಮೊದಲ ಹೆಜ್ಜೆಗೆ ಬಲ ಬಂದಂತಾಯಿತು.
ಅಧ್ಯಯನವನ್ನು ಮುಂದುವರೆಸುತ್ತಿರುವ ಸಮಯದಲ್ಲಿ ಜೀವನದ ಬಹುಮುಖ್ಯ ತಿರುವನ್ನು ಪಡೆದುಕೊಂಡರು. ಅದೇನೆಂದರೆ ಹಿರಿಯ ಪ್ರಖ್ಯಾತ ವೈಧ್ಯರಾದ ಡಾ. ರಾಬರ್ಟ್ ಜೆಫರಿ ಅವರು ಹೃದಯ ಶಸ್ತಚಿಕಿತ್ಸೆಯ ಸಂದರ್ಭದಲ್ಲಿ ಶಸ್ತಚಿಕಿತ್ಸೆಗೆ ಅವಶ್ಯವಿರುವ ಕಾಲಿನ ರಕ್ತನಾಳವನ್ನು ಡಾ. ಇರ್ಷಾದ್ ಕತ್ತರಿಸಿಕೊಟ್ಟ ಸೂಕ್ಷ್ಮತೆ ಮತ್ತು ಕಾರ್ಯಕೌಶಲ್ಯತೆಯನ್ನು ಗಮನಿಸಿದ ರಾಬರ್ಟ್ ಅವರು ಇರ್ಷಾದ್ ಅವರನ್ನು ಪ್ರಶಂಸಿಸಿ ಹೆಚ್ಚಿನ ಅವಕಾಶವನ್ನು ನೀಡಲು ಪ್ರಾರಂಭಿಸಿದರು. ಅಲ್ಲಿಂದ ಡಾ. ಇರ್ಷಾದ್ ಅವರ ವೃತ್ತಿ ಜೀವನ ಸಾಧನೆಯ ಕಡೆಗೆ ಸಾಗಿತ್ತು.

ಇದರಿಂದ 2006ರಲ್ಲಿ ಜಗತ್ತಿನ ನಾಲ್ಕು ರೊಬೋಟಿಕ್ ಸರ್ಜನ್‌ಗಳಲ್ಲಿ ಭಾರತದ ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಓರ್ವ ಯುವಕ ಒಬ್ಬರಾಗಿರುವುದು ಯಲ್ಲಾಪುರ ಮಾತ್ರವಲ್ಲದೇ ಇಡೀ ದೇಶವೇ ಹೆಮ್ಮೆ ಪಡುವ ಸಂಗತಿಯಾಯಿತು.
ಡಾ.ಇರ್ಷಾದ್ ಎ ಶೇಖ ಈಗ ಎಷ್ಟು ಅತ್ಯುನ್ನತ ಹಂತವನ್ನು ತಲುಪಿದ್ದಾರೆಂದರೆ ಹಿಂದೆ ಯಾರ ಕೈಕೆಳಗೆ ವೃತ್ತಿಯನ್ನು ನಿರ್ವಹಿಸಿದ್ದರೋ ಹಾಗೂ ಅಮೇರಿಕಾ, ಫ್ರಾನ್ಸ್, ಸ್ಕಾಟ್ಲೆಂಡ್, ಜರ್ಮನಿ ಮುಂತಾದ ದೆಶದ ಪ್ರಖ್ಯಾತ ವೈದ್ಯರು ಇವರ ಅಡಿಯಲ್ಲಿ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದಾರೆ. ಇವರ ಕಾರ್ಯಭಾರದ ಒತ್ತಡ ಹೇಗಿದೆ ಎಂದರೆ ಇವರ ಮಾರ್ಗದರ್ಶನ ಪಡೆಯಲು 3 ತಿಂಗಳ ಮೊದಲು ಸಮಯ ಪಡೆಯಬೇಕಿದೆ ಎಂದರೆ ಅವರ ಸಾಧನೆಯನ್ನು ಕೇಳಿ ಮೈ ರೋಮಾಂಚನವಾಗುತ್ತದೆ.

ಡಾ.ಇರ್ಷಾದ್ ಅವರು ಪಡೆದ ಪ್ರಖ್ಯಾತಿ ಎಷ್ಟಿದೆ ಎಂದರೆ ಇಂಗ್ಲೆಂಡಿನ ಯುವರಾಜ/ಯುವರಾಣಿಯರಾದ ಪ್ರಿನ್ಸ್ ವಿಲಿಯಮ್ಸ್ ಹಾಗೂ ಕೇಟ್ ಮಿಡ್ಲಟನ್ ರವರು ಇರ್ಷಾದ್ ಅವರ ರೊಬೊಟಿಕ್ ಸರ್ಜರಿಯನ್ನು ವೀಕ್ಷಿಸಲು ಇಚ್ಛಿಸಿ ಡಾ.ಇರ್ಷಾದ್ ಅವರನ್ನು ತಮ್ಮ ಅರಮನೆಗೆ ಖುದ್ದಾಗಿ ಆಹ್ವಾನಿಸಿ ಅವಕಾಶ ಕೋರಿರುತ್ತಾರೆ. ಇದು ಭಾರತೀಯ ವೈದ್ಯರೊಬ್ಬರಿಗೆ ದೊರೆತ ಅತ್ಯುನ್ನತ ಗೌರವವಾದಂತಾಗಿದೆ. ಈ ವಿಚಾರವಾಗಿ ಡಾ. ಇರ್ಷಾದ್ ಅವರು ಭಾರತದಿಂದ ಲಂಡನ್ನಿಗೆ ತೆರಳಿದ ನಂತರ ಸರ್ಜರಿಯನ್ನು ವೀಕ್ಷಿಸಲು ಅವಕಾಶ ನೀಡುವುದಾಗಿ ಇಂಗ್ಲೆಂಡ್ ರಾಜಮನೆತನಕ್ಕೆ ತಿಳಿಸಿದ್ದಾರೆ.
ಇಂತಹ ಶ್ರೇಷ್ಠ ವೈದ್ಯರಾದ ಡಾ. ಇರ್ಷಾದ್ ಶೇಖ್‌ರವರು ನಮ್ಮ ಯಲ್ಲಾಪುರದವರು ಅಲ್ಲದೇ ಆಗಿನ ಶಾಲಾ ಮಿತ್ರರೊಡಗಿನ ಒಡನಾಟ, ಕಲಿಸಿದ ಗುರುಗಳ ಮೇಲಿನ ಗೌರವ ಎಳ್ಳಷ್ಟೂ ಕಡಿಮೆಯಾಗದಂತೆ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಸದಾ ತನ್ನೂರಿನ ಮೇಲಿನ ಪ್ರೇಮ, ತನ್ನ ರಾಷ್ಟ್ರದ ಮೇಲಿನ ಭಕ್ತಿ ಮತ್ತು ದೇಶದ ಸಂಸ್ಕಾರವನ್ನು ಸದಾ ಗೌರವಿಸುತ್ತಾ ಹೋದ ಕಡೆಯೆಲ್ಲಾ “ ಹೂ ಆರ್ ಯು” ಎಂದು ಕೇಳಿದ ಪ್ರಶ್ನೆಗೆ ಸರಳವಾಗಿ “ ಐ ಆಮ್ ಫ್ರಂ ಯಲ್ಲಾಪುರ” ಎಂದು ಜಗತ್ತಿನಾದ್ಯಂತ ಹೇಳುತ್ತಿರುವುದು ಈ ನೆಲದ ಮೇಲಿನ ಪ್ರೀತಿಯನ್ನು ಒತ್ತಿ ಹೇಳುತ್ತದೆ. ಅವರ ಸಾಧನೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂಬುದು ಯಲ್ಲಾಪುರ ತಾಲೂಕಿನವರ ಆಶಯವಾಗಿದೆ.






Prathidvani Yellapura