Breaking News

ರಾಮಾಪುರ ಶಾಲೆಗೆ ಬೇಕಿದೆ ಕಾಯಕಲ್ಪ ಕಾಂಪೌಂಡ್ ಕುಸಿದಿದೆ ಅಡಿಪಾಯಕ್ಕೆ ನೀರು ನುಗ್ಗುತ್ತಿದೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿದ್ವನಿ,ಯಲ್ಲಾಪುರ : ಪಟ್ಟಣದ ಮಾರ್ಕೋಜಿ ದೇವಸ್ಥಾನದ ಸಮೀಪದಲ್ಲಿರುವ ರಾಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಮಕ್ಕಳು ಇದರಲ್ಲೇ ಕುಳಿತು ಪಾಠಪ್ರವಚನ ಆಲಿಸುತ್ತಿದ್ದು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
6೦ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆಯಲ್ಲಿದ್ದು ಪಟ್ಟಣದಲ್ಲೇ ಇರುವ ಶಾಲೆಯಾಗಿದೆ.

ಶಾಲಾ ಕಟ್ಟಡದ ಪಕ್ಕದಲ್ಲೇ ದೊಡ್ಡದಾದ ಗಟಾರವಿದ್ದು ಮಳೆಗಾಲದಲ್ಲಿ ಹಳ್ಳದ ರೂಪದಲ್ಲಿ ನೀರು ಹರಿದು ಮುಂದೆ ಸಾಗುತ್ತದೆ. ಗಟಾರಕ್ಕೆ ತಾಗಿಕೊಂಡಂತೆ ಶಾಲಾ ಕಟ್ಟಡದ ಅಡಿಪಾಯವಿದ್ದು ಪಕ್ಕದಲ್ಲಿ ಗಟಾರದ ಮೇಲೆ ಕಾಂಪೌಂಡ್ ಗೋಡೆಯನ್ನು ಕಟ್ಟಲಾಗಿದೆ.

ಮಳೆಯ ರಭಸಕ್ಕೆ ಈಗಾಗಲೇ ಕಾಂಪೌಂಡ್ ಗೋಡೆ ಕುಸಿದಿದ್ದು ಯಾವುದೇ ತಡೆಬೇಲಿಯೂ ಇಲ್ಲದಂತಾಗಿದೆ. ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಗಟಾರದಲ್ಲಿ ಹರಿಯುವ ನೀರು ನಿಧಾನವಾಗಿ ಶಾಲಾ ಕಟ್ಟಡದ ಅಡಿಪಾಯಕ್ಕೆ ಸೇರುತ್ತಿದೆ.

ಈ ಕಾರಣದಿಂದ ಅಡಿಪಾಯದ ಕಲ್ಲುಗಳು ಸಡಿಲವಾಗಿ ಮೇಲ್ಭಾಗದಲ್ಲಿ ಒಂದಷ್ಟು ಕಲ್ಲುಗಳು ಕಿತ್ತಿವೆ.


ಇದೇ ಶಾಲೆಯ ಮತ್ತೆ ಕೆಲ ಕೊಠಡಿಗಳ ಒಳಗೆ ಆರ್.ಸಿ.ಸಿ ಸ್ಲಾಬ್‌ನ ಸಿಮೆಂಟ್ ಚಕ್ಕೆಯ ರೂಪದಲ್ಲಿ ಉದುರುತ್ತಿದ್ದು ಅಲ್ಲಲ್ಲಿ ಈಗಾಗಲೇ ಕಿತ್ತು ಹೋಗಿದೆ. ಮೇಲ್ನೋಟಕ್ಕೆ ಏನೂ ಆಗುವುದಿಲ್ಲ ಎನಿಸಿದರೂ ಆಕಸ್ಮಿಕವಾಗಿ ಬಿದ್ದು ಹೋಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಹೊಸಕಟ್ಟಡ ಕಟ್ಟಲು ಸದ್ಯಕ್ಕೆ ಸಾಧ್ಯವಿಲ್ಲದಿದ್ದರೂ ಕಟ್ಟಡದ ಗಟ್ಟಿತನವನ್ನು ತಜ್ಞರಿಂದ ಪರೀಕ್ಷೆಗೊಳಪಡಿಸಿ ಉದುರುತ್ತಿರುವ ಸಿಮೆಂಟ್ ಚಕ್ಕೆಯನ್ನು ನಿಯಂತ್ರಿಸಲು ಹೊಸದಾಗಿ ಪ್ಲಾಸ್ಟಿಂಗ್ ಕೆಲಸ ಆಗಬೇಕಿದೆ.


ಒಟ್ಟಿನಲ್ಲಿ ಬಡ ಮಧ್ಯಮವರ್ಗದವರ ಶೈಕ್ಷಣಿಕ ಆಶಾಕಿರಣವಾದ ಸರ್ಕಾರಿ ಶಾಲೆಗಳ ದುರಸ್ಥಿ ಕಾರ್ಯಕ್ಕೆ ಎಲ್ಲಕ್ಕಿಂತ ಪ್ರಾಮುಖ್ಯತೆ ನೀಡಬೇಕಿದೆ. ಇಲ್ಲವಾದಲ್ಲಿ ಖಾಸಗಿ ಶಿಕ್ಷಣ ವ್ಯವಸ್ಥೆಗೆ ಹೋಲಿಕೆ ಮಾಡುತ್ತಿರುವ ಕೆಲ ಪೋಷಕರು ಹಾಗೂ ಸಾರ್ವಜನಿಕರಿಗೆ ಮತ್ತೊಂದು ಅಸ್ತç ಸಿಕ್ಕಂತಾಗಿ ಮಕ್ಕಳಿಗೆ ಸುರಕ್ಷತೆ ಇಲ್ಲ ಎಂಬ ಮಾತು ಕೇಳಿಬರಬಹುದಾಗಿದೆ. ಸಂಬಂಧಿಸಿದ ಇಲಾಖೆ ಸರ್ಕಾರಿ ಶಾಲೆಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಬಗೆಹರಿಸಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ಕಾಂಪೌಂಡ್ ಗೋಡೆ ಬಿದ್ದ ನಂತರ ತಕ್ಷಣದಲ್ಲಿ ಶಾಲಾ ಕಟ್ಟಡಕ್ಕೆ ಧಕ್ಕೆಯಾಗಬಹುದೆಂಬ ಅನುಮಾನದಿಂದ ಶಾಲಾಭಿವೃದ್ಧಿ ಸಮಿತಿ ಹಾಗೂ ಬಿಇಒರವರ ಗಮನಕ್ಕೆ ತರಲಾಗಿದ್ದು ಶೀಘ್ರ ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ. ಮಕ್ಕಳ ಸುರಕ್ಷತೆಗೆ ಕುಂದುಂಟಾಗದಂತೆ ಪಾಠಪ್ರವಚನ ನಡೆಯುತ್ತಿದ್ದು ಸಮಸ್ಯೆ ಬಗೆಹರಿದರೆ ಒಳ್ಳೆಯದು. – ವಂದನಾ ನಾಯ್ಕ, ಮುಖ್ಯೋಪಾಧ್ಯಾಯರು


ಶಾಲಾಭಿವೃದ್ಧಿ ಸಮಿತಿಯ ಸಭೆಯಲ್ಲೂ ಈ ವಿಚಾರ ಚರ್ಚೆಯಾಗಿದ್ದು ಕಟ್ಟಡದ ಪರಿಸ್ಥಿತಿಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಕಟ್ಟಡದ ದುರಸ್ಥಿ ಕಾರ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. – ಚಂದ್ರು ಭೋವಿವಡ್ಡರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ]


ತಾಲೂಕಿನಲ್ಲಿ ಬಹಳಷ್ಟು ಶಾಲೆಗಳು ಶಿಥಿಲಾವಸ್ಥೆಯಲ್ಲಿದ್ದು ದುರಸ್ಥಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದು ದುರಸ್ಥಿ ಕಾರ್ಯಕ್ಕೆ ಸರ್ಕಾರದಿಂದ ಅನುದಾನ ಮಂಜೂರಿಯಾಗುವ ಆಶಾಭಾವನೆಯಿದೆ. – ಎನ್.ಆರ್ ಹೆಗಡೆ, ಬಿಇಒ


ಶಾಲಾ ಕಟ್ಟಡದ ಶಿಥಿಲಾವಸ್ಥೆಯ ಕುರಿತು ನನಗೆ ತಿಳಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕಟ್ಟಡದ ಅಡಿಪಾಯಕ್ಕೆ ಧಕ್ಕೆಯಾಗಿರುವುದು ಕಂಡಿದ್ದು ಕ್ಷೇತ್ರಶಿಕ್ಷಣಾಧಿಕಾರಿಗಳ ಬಳಿ ಈ ವಿಚಾರವಾಗಿ ಮಾತನಾಡಿದ್ದೇನೆ. ಸರ್ಕಾರದ ಮಟ್ಟದಲ್ಲೂ ಶಾಲಾ ಕಟ್ಟಡದ ದುರಸ್ಥಿಗಾಗಿ ಹಣ ಮಂಜೂರು ಮಾಡುವಂತೆ ಮನವಿ ಮಾಡಿದ್ದೇನೆ. ಯಾವುದಾದರೂ ಅನುದಾನದಲ್ಲಿ ದುರಸ್ಥಿ ಕಾರ್ಯ ಮಾಡಿಕೊಡುವುದಾಗಿ ಭರವಸೆ ನೀಡಿದ್ದು ಶೀಘ್ರದಲ್ಲಿ ಕಾರ್ಯಸಾಧುವಾಗುವ ಸಾಧ್ಯತೆಗಳಿವೆ. ಶಾಲೆಯ ಆವರಣದಲ್ಲಿರುವ ದ್ವಜದ ಕಟ್ಟೆಯೂ ದುರಸ್ಥಿಯಾಗಬೇಕಿದ್ದು ಸ್ವಾತಂತ್ರೊತ್ಸವದ ನಂತರ ಕಾರ್ಯ ಕೈಗೆತ್ತಿಕೊಳ್ಳಲಾಗುವುದು – ನರ್ಮದಾ ರವಿ ನಾಯ್ಕ್, ಪಟ್ಟಣ ಪಂಚಾಯತ ಸದಸ್ಯರು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *