Breaking News

ಬೇಡ್ತಿ ಕುಡಿಯುವ ನೀರಿನ ಯೋಜನೆ ಹಾಳುಗೆಡವಿದ್ದಾಯಿತು ಅಳಿದುಳಿದ ವಸ್ತುಗಳ ಕಥೆ ಏನಾಯ್ತು..?

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಯಲ್ಲಾಪುರ : ಇದು ಯಲ್ಲಾಪುರ ತಾಲೂಕಿನ ಇತಿಹಾಸದಲ್ಲಿ ಕಾಣದ ಸಾರ್ವಜನಿಕ ತೆರಿಗೆ ಹಣದ ಮಹಾ ನಿರ್ಲಕ್ಷ್ಯ. ಯಲ್ಲಾಪುರ ಪಟ್ಟಣದಿಂದ ಶಿರಸಿ ರಸ್ತೆಯಲ್ಲಿ ಸುಮಾರು 16 ಕಿಲೋಮೀಟರ್ ಕ್ರಮಿಸಿದರೆ ಸುಂದರ ಹಸಿರು ಪ್ರಕೃತಿ ಮಡಿಲಲ್ಲಿ ಯಲ್ಲಾಪುರ ಮತ್ತು ಶಿರಸಿ ಸಂಪರ್ಕಿಸುವ ಬೃಹತ್ ಸೇತುವೆ ಬೇಡ್ತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

ಅದರ ಸಮೀಪವೆ ಗೇಟಿನೊಳಗೆ ಸಾಗಿದರೆ ಬೇಡ್ತಿ ನದಿ ತಟದಲ್ಲಿ ಪಾಳುಬಿದ್ದ ಕಟ್ಟಡ ಕಣ್ಣಿಗೆ ಬೀಳುತ್ತದೆ ಬೇಡ್ತಿ ಕುಡಿಯುವ ನೀರಿನ ಯೋಜನೆಯ ಪ್ರಮುಖ ಕಟ್ಟಡ ಈಗ ಪಾಳು ಬಿದ್ದಿದೆ.


ಬೇಡ್ತಿ ಕುಡಿಯುವ ನೀರಿನ ಯೋಜನೆಗೆ ತಗುಲಿದ ಒಟ್ಟು ವೆಚ್ಚ ಸುಮಾರು 23 ಕೋಟಿಗು ಅಧಿಕವಾಗಿದೆ.

ಯಲ್ಲಾಪುರ ಪಟ್ಟಣದಿಂದ ಬೇಡ್ತಿ ಕುಡಿಯುವ ನೀರಿನ ಯೋಜನೆಯ ಕಟ್ಟಡಕ್ಕೆ ನೇರ ವಿದ್ಯುತ್ ಸಂಪರ್ಕ ಕೊಂಡೊಯ್ಯುವ ಸಲುವಾಗಿಯೇ ಅರಣ್ಯ ಇಲಾಖೆ ಅನುಮತಿಗೆ ಅದಕ್ಕಾಗಿ ಬಳಸಿದ ಸಿಮೆಂಟ್ ಕಂಬಗಳಿಗೆ ಮತ್ತು ವಿಶೇಷವಾದ ವಿದ್ಯುತ್ ತಂತಿಗೆ ಸುಮಾರು 3 ಕೋಟಿ ವೆಚ್ಛ ತಗಲಿರುವ ಅಂದಾಜಿದೆ.

ಪ್ರತಿಧ್ವನಿ ಯಲ್ಲಾಪುರ ಸುದ್ದಿಯ ಸತ್ಯದರ್ಶನ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಆದರೆ ಕಂಬಗಳು ಬಳಸಿದ್ದ ತಂತಿಗಳು ಸಮರ್ಪಕವಾಗಿರುವುದೇ ಸಂಶಯವಾಗಿದ್ದು ಆ ಹಣವೆಲ್ಲಾ ಕಳ್ಳಕಾಕರ ಪಾಲಾಗುತ್ತಿದೆಯೆ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಯೋಜನೆಯ ಪ್ರಯೋಜನ ಮೂರ್ನಾಲ್ಕು ವರ್ಷದ ವರೆಗೆ ಬಳಸಿಕೊಂಡಿದ್ದು ನಂತರದಲ್ಲಿ ನೀರು ಬಳಕೆಗೆ ಯೋಗ್ಯವಲ್ಲ ಎಂಬ ಕೂಗು ಪಟ್ಟಣದಾದ್ಯಂತ ಕೇಳಿ ಬಂದು ಹಂತ ಹಂತವಾಗಿ ಯೋಜನೆಯ ಕತ್ತು ಹಿಸುಕಲು ಪ್ರಾರಂಭಿಸಲಾಗಿತ್ತು. ಇದರಿಂದ ಯೋಜನೆಯ ಮುಂದುವರಿಕೆಗೆ ತಡೆಯೊಡ್ಡಿದಂತಾಯ್ತು. ಇದನ್ನೆ ಕಾರಣವಾಗಿಟ್ಟುಕೊಂಡು ನೀರು ತರುವುದನ್ನು ನಿಲ್ಲಿಸಿ ಪಟ್ಟಣದಾದ್ಯಂತ ಕೊಳವೆ ಬಾವಿಗಳಿಂದ ನೀರು ಪೂರೈಸಲು ಪ್ರಾರಂಬಿಸಲಾಯಿತು. ಆ ವ್ಯವಸ್ಥೆ ಇಂದಿಗು ಮುಂದುವರೆದು ಯಲ್ಲಾಪುರ ಪಟ್ಟಣ ಪಂಚಾಯತ ಸುಮಾರು 58 ಕೊಳವೆ ಬಾವಿಗಳನ್ನು ಬಳಸಿ ನೀರಿನ ಅವಶ್ಯಕತೆ ಪೂರೈಸುತ್ತಿದೆ. ಇಂತಹ ವ್ಯವಸ್ಥೆ ರಾಜ್ಯದಲ್ಲಿ ಕೆಲವೇ ಪಟ್ಟಣ ಪಂಚಾಯತಗಳಲ್ಲಿದ್ದು ಆ ಸಾಲಿಗೆ ಯಲ್ಲಾಪುರವೂ ಸೇರಿದಂತಾಗಿದೆ.


ಯೋಜನೆಗೆ ಎಳ್ಳು ನೀರು ಬಿಟ್ಟ ನಂತರ ಅದಕ್ಕಾಗಿ ಬಳಸಿದ ಬೃಹತ್ ಯಂತ್ರಗಳು, ವಿದ್ಯುತ್ ಪರಿವರ್ತಕಗಳು, ಪೈಪ್ ಗಳು, ವಯರ್‌ಗಳು, ಮೋಟರ್ ಗಳು ಹಾಗು ಇನ್ನಿತರ ಬೆಲೆಬಾಳುವ ವಸ್ತುಗಳನ್ನು ನಿರ್ವಹಣಾ ಜವಾಬ್ದಾರಿ ಹೊತ್ತಿದ್ದ ಪಟ್ಟಣ ಪಂಚಾಯತ ಎಲ್ಲಿಯಾದರು ಇಟ್ಟಿರಬೇಕು, ಇಲ್ಲ ಎಂದರೆ ಕಳ್ಳರ ಪಾಲಾಗಿರಲೇಬೇಕು. ರವಿವಾರ ನೇರವಾಗಿ ಸ್ಥಳಕ್ಕೆ ಭೇಟಿ ನೀಡಿದ ಕರಾವಳಿ ಮುಂಜಾವು ಪ್ರತಿನಿಧಿ ಅಲ್ಲಿನ ದೃಶ್ಯಗಳನ್ನು ಸೆರೆಹಿಡಿದಿದ್ದು ಮೊದಲಿದ್ದ ಕನಿಷ್ಟ ಸಾಮಾಗ್ರಿಗಳೂ ಇಲ್ಲದೇ ಕಟ್ಟಡ ಖಾಲಿಯಾಗಿ ಪಾಳುಬಿದ್ದಿದೆ.
ಈ ಕುರಿತು ಕರಾವಳಿ ಮುಂಜಾವು ಸೇರಿದಂತೆ ಅನೇಕ ಪತ್ರಿಕೆಗಳು ಕಳೆದ ಕೆಲವು ವರ್ಷಗಳಿಂದ ಸುದ್ದಿಮಾಡಿ ಎಚ್ಚರಿಸುತ್ತಲೆ ಬಂದರು ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಜನರ ತೆರಿಗೆ ಹಣದಲ್ಲಿ ಅನುಷ್ಟಾನಕ್ಕೆ ತಂದಿದ್ದ ಕೋಟ್ಯಾಂತರ ಮೌಲ್ಯದ ಸ್ವತ್ತುಗಳು ಏನಾದವೆಂಬುದು ಉನ್ನತ ಮಟ್ಟದ ತನಿಖೆಗೆ ವಹಿಸಬೇಕಿದೆ ಎಂಬುದು ಹಲವು ನಾಗರಿಕರ ಆಗ್ರಹ ವಾಗಿದೆ.

ಜನರ ತೆರಿಗೆ ಹಣದಿಂದ ಅನುಷ್ಟಾನವಾಗಿದ್ದ ಕೋಟ್ಯಾಂತರ ಮೌಲ್ಯದ ವಸ್ತುಗಳ ಕಥೆ ಏನಾಯಿತು ತಿಳಿಯಬೇಕಿದೆ. ಬಾರಿ ಮೌಲ್ಯದ ವಸ್ತುಗಳು ಯೋಜನಾ ಸ್ಥಳದಲ್ಲಿ ಇರಬೇಕು ಇಲ್ಲವಾದರೆ ಪಟ್ಟಣ ಪಂಚಾಯತ ಸುಪರ್ಧಿಯಲ್ಲಿರಬೇಕು ಇವೆರಡು ಆಗದಿದ್ದರೆ ಇದರಲ್ಲಿ ಮತ್ತೇನೊ ಅಡಗಿದೆ ಎಂಬ ಅನುಮಾನ ನಾಗರಿಕರಲ್ಲಿ ಬರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಯೊಂದನ್ನು ರಚಿಸಿ ಕೋಟ್ಯಾಂತರ ಮೌಲ್ಯದ ಯೋಜನೆಗೆ ಸಂಬಂಧಿಸಿದ ವಸ್ತುಗಳು ಏನಾದವು? ಎಲ್ಲಿ? ಯಾವ ಸ್ಥಿತಿಯಲ್ಲಿದೆ? ಯಾರ ಸುಪರ್ದಿಯಲ್ಲಿದೆ? ಎಂಬುದನ್ನು ತನಿಖೆ ನಡೆಸಿ ನೈಜ ಸತ್ಯವನ್ನು ಜನರಿಗೆ ತಿಳಿಸಬೇಕಿದೆ. ಕಾರಣ ಹಣ ಜನರದ್ದೆ ಆಗಿರುವುದರಿಂದ ಮಾಹಿತಿ ನೀಡುವುದು ಸೂಕ್ತವಾಗಿದೆ ಇಲ್ಲವಾದಲ್ಲಿ ಪಟ್ಟಣ ಪಂಚಾಯತ ಮೇಲಿನ ನಂಬಿಕೆಗೆ ಧಕ್ಕೆಯಾಗಲಿದೆ. ಈ ಕುರಿತು ಸತ್ಯಾಂಶ ಹೊರಬರಲು ತನಿಖೆಗೆ ಆಗ್ರಹಿಸುತ್ತೇನೆ. – ಸತೀಶ್ ಶಿವಾನಂದ ನಾಯ್ಕ್ ಮಂಜುನಾಥ ನಗರ ವಾಡ್೯ ಸದಸ್ಯ


ಯಲ್ಲಾಪುರ ಪ.ಪಂ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಕೆಲವೇ ದಿನಗಳಾಗಿದ್ದು ಬಂದ ಮೊದಲಿಗೆ ಮಾಡಿದ ಕೆಲಸವೆಂದರೆ ಕುಡಿಯುವ ನೀರಿನ ಬಗೆಗಿನ ವ್ಯವಸ್ಥೆಯನ್ನು ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡಿದ್ದೇನೆ. ಬೇಡ್ತಿ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡು ಹಲವು ವರ್ಷಗಳಾಗಿವೆ ಎಂಬ ಮಾಹಿತಿ ದೊರೆತಿದೆ. ಇದೀಗ ಅಲ್ಲಿಗೆ ಬಳಸಿದ ಕೋಟ್ಯಾಂತ ಮೌಲ್ಯದ ವಸ್ತುಗಳಾಗಲೀ, ಅಲ್ಲಿನ ಕಟ್ಟಡದ ಸ್ಥಿತಿಯಾಗಲೀ ಹೇಗಿದೆ ಎಂಬುದು ನನಗೆ ತಿಳಿದಿಲ್ಲ. ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ತಿಳಿದು ಮಾಹಿತಿ ನೀಡುತ್ತೇನೆ.- ಸುನಿಲ್ ಸುಭಾಷ್ ಕಮಲ ಒ ಗಾವೆಡ ಯಲ್ಲಾಪುರ ಪಟ್ಟಣ ಪಂಚಾಯತ


ಕಳೆದ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ, ಹಾಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಪರಿಶ್ರಮ ಮತ್ತು ಇಚ್ಚಾಶಕ್ತಿಯಿಂದ ಯಲ್ಲಾಪುರ ಪಟ್ಟಣಕ್ಕೆ ಶಾಶ್ವತವಾಗಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಬೊಮ್ಮನಹಳ್ಳಿ ಡ್ಯಾಂನಿಂದ ನೀರು ತರುವ ಯೋಜನೆಗೆ ಸರ್ಕಾರದಿಂದ ಅಸ್ತು ಎನಿಸಿ ಈಗಾಗಲೆ ಅಂತಿಮ ಹಂತದ ಸರ್ವೆ ಕಾರ್ಯಗಳು ನಡೆಯುತ್ತಿದೆ. ಮೂಲಗಳ ಪ್ರಕಾರ ಬೇಡ್ತಿ ಯೋಜನೆಗೆ ಬಳಸಿದ ಈಗ ನಿರುಪಯುಕ್ತವಾಗಿರುವ ಬಳಕೆಗೆ ಯೋಗ್ಯವಾದ ವಸ್ತುಗಳನ್ನು ಮರು ಬಳಸುವಂತೆ ಸರ್ಕಾರ ಸೂಚನೆ ನೀಡಿದೆ ಎಂಬುದಾಗಿ ತಿಳಿದು ಬಂದಿದೆ. ಹಾಗಾದರೆ ಬಳಸಬಹುದಾದ ವಸ್ತುಗಳು ಎಲ್ಲಿವೆ? ಯಾವ ಸ್ಥಿತಿಯಲ್ಲಿವೆ? ಎಂಬುದು ಸ್ಪಷ್ಟವಾಗಬೇಕಿದೆ]

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *