
ಪ್ರತಿಧ್ವನಿ ಯಲ್ಲಾಪುರ : ನಾಲ್ಕು ತಿಂಗಳಿಗೊಮ್ಮೆ ಸ್ನೇಹ ಸಮ್ಮಿಲನ ಹೆಸರಿನಲ್ಲಿ ಕರ್ನಾಟಕ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಗೀತಾಜ್ಞಾನ ಯಜ್ಞದ ಸದಸ್ಯರು ಒಂದೆಡೆ ಸೇರಿ ಗೀತಾ ಪಾರಾಯಣವನ್ನು ನಡೆಸಿ ಗೀತಾ ಪ್ರಸಾರ ಮಾಡಲಾಗುತ್ತಿದೆ. ಹತ್ತು ಕಡೆಗಳಲ್ಲಿ ಯಶಸ್ವಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಈಗಾಗಲೇ ನಡೆಸಲಾಗಿದೆ. ಹನ್ನೊಂದನೆಯ ಸ್ನೇಹ ಸಮ್ಮಿಲನವು ಯಲ್ಲಾಪುರದ ಕಾರ್ಮಿಕ ಭವನದಲ್ಲಿ ಮೇ 17ರಂದು ನಡೆಯಲಿದೆ. ಆನ್ಲೈನ್ ಮೂಲಕ ಪರಿಚಿತವಾದ ಅಪರಿಚಿತ ಮುಖಗಳು ಒಂದೆಡೆ ಸೇರಿ ಪರಿಚಯಮಾಡಿಕೊಂಡು, ಆತ್ಮೀಯರಾಗುವ ಸುಂದರ ಸನ್ನಿವೇಶವಿದು. ಒಂದು ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಸೇರುವ ಈ ಸ್ನೇಹ ಸಮ್ಮಿಲನದಲ್ಲಿ ಗೀತಾಮಹಾತ್ಮೆ ಮತ್ತು ಗೀತಾಜ್ಞಾನ ಸುಧಾ ಪುಸ್ತಕಗಳ ಲೋಕಾರ್ಪಣೆಯಾಗಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

ಇಂದಿನ ಸಮಾಜವು ಭಾರತೀಯ ಸನಾತನ ಜ್ಞಾನ ಪರಂಪರೆಯಿಂದ ಬಹುದೂರ ಸಾಗುತ್ತಿರುವಂತೆ ಭಾಸವಾಗುತ್ತಿದೆ. ಭೋಗಗಳ ಬೆನ್ನು ಹತ್ತಿದ ಮಾನವನ ಮನಸ್ಸು ವಿಕೃತವಾಗುತ್ತಿದೆ. ಆಧುನಿಕ ತಂತ್ರಜ್ಞಾನವು ಯುವಕ ಯುವತಿಯರನ್ನು ದಾರಿತಪ್ಪಿಸುವ ಸಾಧನವಾಗುತ್ತಿದೆ. ಭಗವಂತನ ಶ್ರೇಷ್ಠ ಕೊಡುಗೆಯಾದ ಈ ಜೀವನವನ್ನು ಸಂಸ್ಕಾರಪೂರ್ಣವಾಗಿ, ವ್ಯವಸ್ಥಿತವಾಗಿ, ಸುಂದರವಾಗಿ, ನಡೆಯುವಂತೆ ಮಾಡಲು ಚಂಚಲ ಮನಸ್ಸಿಗೆ ನಿರಂತರವಾಗಿ ತರಬೇತಿ ಕೊಟ್ಟು ಸ್ವಚ್ಛ ಮಾಡುವ ದಿವ್ಯ ಔಷಧಿಯ ಅಗತ್ಯವಿದೆ.

ವೇದಗಳಷ್ಟೇ ಪವಿತ್ರವೂ ಮಂಗಳಕರವೂ ಉಪನಿಷತ್ತುಗಳ ಸಾರವೂ ಮನುಕುಲದ ಜೀವನ ಧರ್ಮ ಗ್ರಂಥವೂ ಎನಿಸಿದ ಭಗವದ್ಗೀತೆಯು ಮನಸ್ಸನ್ನು ಅರಳಿಸುವಂತಹ ಒಂದು ದಿವ್ಯೌಷಧ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಭಗವದ್ಗೀತೆಯಲ್ಲಿರುವ 700 ಶ್ಲೋಕಗಳಲ್ಲಿ ಮಾನವನ ಜೀವನ ನಿರ್ವಹಣೆಗೆ ಬೇಕಾದ ಅತ್ಯುತ್ತಮ ಪಾಠ ಇದೆ.

2020- 21 ರಲ್ಲಿ ಇಡೀ ವಿಶ್ವವೇ ಕೊರೋನಾದಿಂದ ತಲ್ಲಣಗೊಂಡಾಗ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುರುಡಪದವು ನಿವಾಸಿ ನಿವೃತ್ತ ಅಧ್ಯಾಪಕರಾದ ಶ್ರೀ ಸುಬ್ರಾಯ ನಂದೋಡಿಯವರಿಂದ ಆನ್ಲೈನ್ ನಲ್ಲಿ ಭಗವದ್ಗೀತೆಯ ಅಧ್ಯಯನ ಮತ್ತು ಸಂದೇಶವು ಪ್ರಾಯೋಗಿಕವಾಗಿ 60ದಿವಸಗಳ ಕಾಲ ನಡೆಯಿತು.

ಇದೇ ಪ್ರೇರಣಾ ಶಕ್ತಿಯಾಗಿ ಅವರ ಸುಂದರ ಕಲ್ಪನಾ ಕೂಸು ಗೀತಾಜ್ಞಾನ ಯಜ್ಞ ಎಂಬ ಹೆಸರಿನಿಂದ ಕಾಸರಗೋಡು ಜಿಲ್ಲೆಯ ಸಮಾನ ಮನಸ್ಕರಾದ ಶ್ರೀ ದೇವದಾಸ್ ನುಳ್ಳಿಪಾಡಿ, ಶ್ರೀ ಪ್ರಶಾಂತ್, ಶ್ರೀ ಲೋಕೇಶ ಜೋಡುಕಲ್ಲು, ಶ್ರೀ ಸಾಗರ್ ಉಳ್ಳಾಲ ಮೊದಲಾದವರ ಸಹಕಾರದೊಂದಿಗೆ 12 ಜುಲೈ, 2021ರಂದು ಆನ್ಲೈನ್ ಮೂಲಕ ಬೆಳಗಿನ ಜಾವದಲ್ಲಿ ಉದಯಿಸಿತು. ದೇವಸ್ಥಾನದ ಗರ್ಭಗುಡಿಗಳೆಲ್ಲ ಮುಚ್ಚಿರುವ ಆ ಕೊರೋನಾ ಕಗ್ಗತ್ತಲಿನಲ್ಲಿ ಮನೆಗಳೇ ದೇವಾಲಯಗಳಾಗಿ ಎಲ್ಲರ ಬಾಳಿಗೂ ಆಶಾಕಿರಣವಾಯಿತು.

ಪ್ರತಿನಿತ್ಯ ಬೆಳಿಗ್ಗೆ ಅಧ್ಯಯನ ಮತ್ತು ಸಂದೇಶ ಹೆಸರಿನಲ್ಲಿ ವೈವಿಧ್ಯಮಯವಾದ ರೀತಿಯಲ್ಲಿ ಭಗವದ್ಗೀತೆಯ ಶ್ಲೋಕಗಳ ವ್ಯಾಖ್ಯಾನವು, ವಿಶಿಷ್ಟ, ವಿನೂತನ ಅಧ್ಯಾಪನ ಶೈಲಿಯಲ್ಲಿ ನಡೆಯುತ್ತಿದೆ. ಗೀತಾಜ್ಞಾನ ಯಜ್ಞದಲ್ಲಿ ಶ್ರದ್ಧೆ, ಭಕ್ತಿ, ಏಕಾಗ್ರತೆ, ಯಜ್ಞದೃಷ್ಟಿ, ಸಮರ್ಪಣಾ ಭಾವದಿಂದ ಅಧ್ಯಯನ ಮತ್ತು ಸಂದೇಶ ನೀಡುವ 12 ಜನರ ಸಮರ್ಥ ಗುರು ವೃಂದವಿದೆ. ಗುರುವೃಂದದವರೆಲ್ಲರ ಸೂಕ್ತ ಮಾರ್ಗದರ್ಶನ, ಸಹಸ್ರಾರು ಜನರನ್ನು ಮತ್ತೆ ಮತ್ತೆ ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸುವಂತೆ ಮಾಡಿದೆ. ಜೊತೆ ಜೊತೆಗೆ ಎಲೆಮರೆಯ ಕಾಯಿಯಂತೆ ಕೆಲಸ ಮಾಡುವ ಅತ್ಯಂತ ಚಾಣಾಕ್ಷ, ದಕ್ಷ, ಶಿಸ್ತಿನ ಕಾರ್ಯಕರ್ತರ ತಂಡ ಇದೆ. ಆ ಕಾರ್ಯಕರ್ತರ ಯೋಚನೆ, ಯೋಜನೆ ಹಾಗೂ ಅನುಷ್ಠಾನ ಈ ಗೀತಾಜ್ಞಾನ ಯಜ್ಞವನ್ನು ಸಮರ್ಪಕವಾಗಿ, ಸಮರ್ಥವಾಗಿ ಮುನ್ನಡೆಸುವಲ್ಲಿ ಶ್ಲಾಘನೀಯ ಪಾತ್ರವನ್ನು ವಹಿಸುತ್ತಿದೆ. ಗೀತಾಭ್ಯಾಸ ತರಗತಿಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಹಿಂದೆ ಸಹಕರಿಸಿದ, ಈಗ ಸಹಕರಿಸುತ್ತಿರುವ ಬಹುದೊಡ್ಡ ಸಂಖ್ಯೆಯ ಗುರುವೃಂದದಿಂದಾಗಿ ಗೀತಾಜ್ಞಾನ ಯಜ್ಞವು ಸಮಾಜದಲ್ಲಿ ಮಾನ್ಯತೆಯನ್ನು ಗಳಿಸಿದೆ.

ದಿನಾಂಕ 4.1.2026ರಂದು ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜರಗಿದ ಸ್ನೇಹ ಸಮ್ಮಿಲನದಲ್ಲಿ ಪ್ರಧಾನ ಗುರುಗಳಾದ ಶ್ರೀ ಸುಬ್ರಾಯ ನಂದೋಡಿಯವರು ರಚಿಸಿದ ಶ್ರೀಮದ್ಭಗವದ್ಗೀತಾ ಅಧ್ಯಯನ ಮತ್ತು ಸಂದೇಶ ಎಂಬ ಬೃಹತ್ ಗ್ರಂಥವು ಮೂರು ಸಂಪುಟಗಳಲ್ಲಿ ಲೋಕಾರ್ಪಣೆಯಾಯಿತು. ಮೂಲ ಶ್ಲೋಕ, ಪಾರಾಯಣ ಯೋಗ್ಯ ಶ್ಲೋಕ, ಪದಚ್ಛೇದ, ಅರ್ಥ ಸಹಿತ ವ್ಯಾಖ್ಯಾನವನ್ನೊಳಗೊಂಡ ಈ ಗ್ರಂಥ ಜನ ಮೆಚ್ಚುಗೆ ಪಡೆಯಿತು. ಜನಸಾಮಾನ್ಯರಿಗೂ, ಸಂಸ್ಕೃತ ತಿಳಿಯದವರಿಗೂ ಅತ್ಯಂತ ಸುಲಭದಲ್ಲಿ ಗೀತೆಯನ್ನು ಅರ್ಥೈಸಿಕೊಳ್ಳಲು ಉತ್ತಮ ಮಾರ್ಗದರ್ಶಿ ಗ್ರಂಥವಾಗಿ ಸಮಾಜ ಸ್ವೀಕರಿಸಿತು.
ಮೇ,17 ರಂದು ನಡೆಯುವ ಸಾತ್ವಿಕ ಕಾರ್ಯಕ್ರಮ ಸ್ನೇಹ ಸಮ್ಮಿಲನ ಗೀತಾ ಮಹಾತ್ಮೆ- ಗೀತಾಜ್ಞಾನ ಯಜ್ಞ ಸುಧಾ ಪುಸ್ತಕ ಲೋಕಾರ್ಪಣೆ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಹಸ್ರಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ಸಾತ್ವಿಕ ಸದುದ್ದೇಶದ ಸಾರ್ಥಕ ಕಾರ್ಯಕ್ರಮವನ್ನು ಸಾಕ್ಷಾತ್ಕರಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.




Prathidvani Yellapura