
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಕ್ರಿಯಾಶೀಲರೂ, ಪ್ರಾಮಾಣಿಕರೂ ಆಗಿದ್ದ ಅಂತೋನಿಯವರು ಸದಾ ತನಗಿಂತ ಕರ್ತವ್ಯ ನಿರ್ವಹಿಸುವ ಸಂಸ್ಥೆಯೇ ದೊಡ್ಡದೆಂಬ ಭಾವನೆಯನ್ನು ಹೊಂದಿದ್ದರು. ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ, ವಯೋನಿವೃತ್ತರಾಗುತ್ತಿರುವ ಅಂತೋನಿ ರೋಡ್ರಿಗ್ಸ್ ಜೀವನಸೂತ್ರ ಮತ್ತು ಬದುಕಿನ ತತ್ವಗಳು ಪ್ರತಿಯೊಬ್ಬರಿಗೂ ಅನುಕರಣೀಯ ಎಂದು ಕಾರವಾರದ ಕೆ.ಡಿ.ಇ.ಎಸ್ ಸಂಸ್ಥೆಯ ಕಾರ್ಯದರ್ಶಿ ಫಾ||ವಲೇರಿಯನ್ ಸೀಕ್ವೆರಾ ಹೇಳಿದರು.

ಅವರು ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶಾಲೆಯಲ್ಲಿ 32 ವರ್ಷಗಳ ಸುದೀರ್ಘ ಕಾಲ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗುತ್ತಿರುವ ಅಂತೋನಿ ರೋಡ್ರಿಗ್ಸ್ ಅವರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಮಾತನಾಡಿ, ರೋಜರಿ ಶಾಲೆಯ ಆಸ್ತಿಯೇ ಆಗಿದ್ದ ಅಂತೋನಿಯವರು ಸಮಯವನ್ನು ಲೆಕ್ಕಿಸದ ಕ್ರಿಯಾಶೀಲ ಕಾರ್ಯನಿರ್ವಹಣೆ ಮಾಡುವ ವ್ಯಕ್ತಿಯಾಗಿದ್ದರು. ಶಾಲೆಯ ಕ್ರೀಡಾ ಕಾರ್ಯಕ್ರಮಗಳನ್ನು ಅತ್ಯುತ್ತಮವಾಗಿ ಸಂಘಟಿಸುತ್ತಿದ್ದ ಅವರು, ಶಾಲೆಯ ಮಕ್ಕಳೊಂದಿಗೆ ಮಕ್ಕಳಾಗಿಯೇ ಬೆರೆಯುತ್ತಿದ್ದ ಪರಿ ಅನನ್ಯ ಎಂದರು.

ಸೇವಾ ನಿವೃತ್ತರಾದ ಅಂತೋನಿ ರೋಡ್ರಿಗ್ಸ್ ತಮಗಿತ್ತ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ತನ್ನೊಳಗಿನ ಕ್ರಿಯಾಶೀಲ ಭಾವನೆಗೆ ನಿರಂತರ ಅವಕಾಶ ಕಲ್ಪಿಸಿದ ಹೋಲಿ ರೋಜರಿ ಸಂಸ್ಥೆ ಕುಟುಂಬ ನಿರ್ವಹಣೆಗೆ ಅನುವಾಗಿದೆ. ಆಡಳಿತ ಮಂಡಳಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮತ್ತು ಪಾಲಕರು ತನಗೆ ತೋರಿದ ಪ್ರೀತಿ ವಿಶ್ವಾಸಗಳು ಅಪಾರ. ಅನಿವಾರ್ಯ ಸಂದರ್ಭಗಳಲ್ಲಿ ತನಗೆ ನೆರವು ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞ ಎಂದರು.
ಸೇವಾವಧಿಯಲ್ಲಿ ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಿದ ಅಂತೋನಿ ರೋಡ್ರಿಗ್ಸ್ ಅವರನ್ನು ಶಾಲಾ ಆಡಳಿತ ಮಂಡಳಿ, ವಿವಿಧ ಶಿಕ್ಷಕರು, ಶಾಲೆಯ ಎಲ್ಲ ವಿಭಾಗದ ವಿದ್ಯಾರ್ಥಿಗಳು, ಸಾರ್ವಜನಿಕರು ಸ್ಮರಣಿಕೆ ನೀಡಿ ಬೀಳ್ಕೊಟ್ಟರು. ಸಮಾರಂಭದಲ್ಲಿ ಅಂತೋನಿ ರೋಡ್ರಿಗ್ಸ್ ಅವರೊಂದಿಗೆ ಆಗಮಿಸಿದ್ದ ಅವರ ಪತ್ನಿ ಜ್ಯೋತಿ ಮತ್ತು ಅವರ ಮಕ್ಕಳನ್ನು ಗೌರವಿಸಲಾಯಿತು.
ಕಾರವಾರದ ಕೆ.ಡಿ.ಇ.ಎಸ್ ಸಂಚಾಲಕ ಫಾ||ಪೀಟರ್ ಕರ್ನೆರೊ ಅಧ್ಯಕ್ಷತೆ ವಹಿಸಿದ್ದರು. ರೋಜರಿ ಸಂಸ್ಥೆಯ ಪ್ರಾಥಮಿಕ ವಿಭಾಗದ ಶಿಕ್ಷಕರಾದ ಸುಮನಾ ಭಟ್ಟ, ಪಾರ್ವತಿ ಕೋಡ್ಕಣಿ, ಕ್ಷೇತ್ರ ಶಿಕ್ಷಣ ಸಂಯೋಜಕ ಶ್ರೀರಾಮ ಹೆಗಡೆ, ಸಿ.ಆರ್.ಪಿ ಶಿವಾನಂದ ವೆರ್ಣೇಕರ್ ವೇದಿಕೆಯಲ್ಲಿದ್ದರು. ಶಿಕ್ಷಕ ಜಗದೀಶ ಭಟ್ಟ ಅಂತೋನಿ ರೋಡ್ರಿಗ್ಸ್ ವ್ಯಕ್ತಿತ್ವದ ಕುರಿತಾಗಿ ವಿವರಿಸಿದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಶಿಕ್ಷಕ ಫಾ||ರೇಮಂಡ್ ಫರ್ನಾಂಡಿಸ್ ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಶೇಖರ ನಿರ್ವಹಿಸಿದರು. ಎಂ.ರಾಜಶೇಖರ ವಂದಿಸಿದರು. ನಿವೃತ್ತ ಶಿಕ್ಷಕರನ್ನು ಅಲಂಕೃತ ವೇದಿಕೆಗೆ ವಿದ್ಯಾರ್ಥಿಗಳ ಬ್ಯಾಂಡ್‌ಸೆಟ್ ಮೂಲಕ ಕರೆತರಲಾಯಿತು. ನಿವೃತ್ತ ಶಿಕ್ಷಕರ ಸಾಧನೆಗಳನ್ನು ವೀಡಿಯೊ ಪರದೆಯ ಮೂಲಕ ಪ್ರದರ್ಶಿಸಲಾಯಿತು.

Prathidvani Yellapura