
ಪ್ರತಿಧ್ವನಿ ಯಲ್ಲಾಪುರ : ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿ ಮತ್ತೊಮ್ಮೆ ನೂತನ ಎಸ್.ಐ.ಟಿ ತಂಡ ರಚಿಸಿ ಮರು ತನಿಖೆಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಮರು ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.

ನೂತನ ಎಸ್ಐಟಿ ತಂಡದ ನೇತೃತ್ವವನ್ನು ಖಡಕ್ ಎಸ್.ಪಿ ಯಾಗಿ ಹುಬ್ಬಳ್ಳಿಯಲ್ಲಿ ಹೆಸರಾಗಿದ್ದ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರಿಗೆ ವಹಿಸಿದ್ದು ತಂಡದಲ್ಲಿ 5 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಇದೇ ವೇಳೆ ಪ್ರಕರಣದಲ್ಲಿ ಸಂತೋಷ್ ರಾವ್ ಈಗಾಗಲೇ ವಿಚಾರಣೆ ಎದುರಿಸಿ ಸೆಷನ್ಸ್ ಕೋರ್ಟ್ನಿಂದ ಖುಲಾಸೆಯಾಗಿರುವ ಹಿನ್ನೆಲೆಯಲ್ಲಿ, ಅವರ ವಿರುದ್ಧ ಇದೇ ಪ್ರಕರಣದಲ್ಲಿ ಮತ್ತೊಮ್ಮೆ ತನಿಖೆ ಅಥವಾ ವಿಚಾರಣೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಹೊಸ ಎಸ್.ಐ.ಟಿ ತನಿಖೆಗೆ ಗಡುವು ನೀಡಿದ್ದು ಮೂರು ತಿಂಗಳೊಳಗೆ ಪೂರ್ಣಗೊಳಿಸಿ, ಸಂಬಂಧಪಟ್ಟ ನ್ಯಾಯಾಲಯಕ್ಕೆ ಕಾನೂನು ಪ್ರಕಾರ ಪೊಲೀಸ್ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ವಿಶೇಷ ಎಂದರೆ ತನಿಖೆಯನ್ನು ಯಾವುದೇ ವ್ಯಕ್ತಿ ಅಥವಾ ಹಿಂದಿನ ತನಿಖೆ ಆದೇಶದಲ್ಲಿನ ಅಭಿಪ್ರಾಯಗಳಿಂದ ಪ್ರಭಾವಿತರಾಗದೆ ಸ್ವತಂತ್ರವಾಗಿ ನಡೆಸಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.
ನೂತನ ಎಸ್ಐಟಿ ಶಶಿಕುಮಾರ್ ನೇತೃತ್ವದ ತಂಡ
ಎನ್. ಶಶಿಕುಮಾರ್, ಐ.ಪಿ.ಎಸ್. (ಪೊಲೀಸ್ ಮಹಾನಿರೀಕ್ಷಕರು) – ಮುಖ್ಯಸ್ಥರು, ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಐ.ಪಿ.ಎಸ್. (ಪೊಲೀಸ್ ಕಮಿಷನರ್, ಮಂಗಳೂರು ನಗರ) – ಸದಸ್ಯರು, ನಿಶಾ ಜೇಮ್ಸ್, ಐ.ಪಿ.ಎಸ್. (ಪೊಲೀಸ್ ಅಧೀಕ್ಷಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು) – ಸದಸ್ಯರು, ಲೋಕೇಶ್ ಜಗಲಸಾರ್, ಐ.ಪಿ.ಎಸ್. (ಪೊಲೀಸ್ ಅಧೀಕ್ಷಕರು, ಸಿ.ಐ.ಡಿ, ಬೆಂಗಳೂರು) – ಸದಸ್ಯರು, ವೆಂಕಟೇಶ್ ಪ್ರಸನ್ನ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ) – ಸದಸ್ಯರು. ಈ ವಿಶೇಷ ತನಿಖಾ ತಂಡವನ್ನು ಕರ್ನಾಟಕ ರಾಜ್ಯ ವ್ಯಾಪ್ತಿಗೆ ಸಂಬಂಧಿಸಿದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಕಲಂ 2(1)(ಯು) ಅಡಿಯಲ್ಲಿ ರಚಿಸಿ ಆದೇಶಿಸಲಾಗಿದೆ.












Prathidvani Yellapura