

ಪ್ರತಿಧ್ವನಿ ಯಲ್ಲಾಪುರ : ಕಳೆದ ಮೂರೂವರೆ ವರ್ಷಗಳಲ್ಲಿ ಭ್ರಷ್ಟ,ಜನವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಬಡವರಿಗೆ ಒಂದೇ ಒಂದು ಮನೆ ನಿರ್ಮಿಸಿಕೊಡಲಾಗಲಿಲ್ಲ. ಈಗ ಅದೇ ಸರಕಾರ ಬಡವರು ಅನಿವಾರ್ಯವಾಗಿ ನಿರ್ಮಿಸಿಕೊಂಡ ಮನೆಗಳನ್ನು ನೆಲಸಮ ಮಾಡುವ ಉದ್ದೇಶದಿಂದ ಅರಣ್ಯ,ಸರಕಾರಿ ಮತ್ತು ಗಾಂವಠಾಣ ದಲ್ಲಿ ನಿರ್ಮಿಸಿಕೊಂಡ ಮನೆಗಳಿಂದ ಕರ ವಸೂಲಿ ಸ್ಥಗಿತಗೊಳಿಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಜನರು ಎಚ್ಚೆತ್ತುಕೊಂಡು ಸಂಘಟಿತ ಹೋರಾಟ ಮಾಡಿ ನಿಮ್ಮ ಹಕ್ಕಿನ ರಕ್ಷಣೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು ಅತಿಕ್ರಮಣ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಬಡವರ ಮನೆ ನಂಬರ್ ರದ್ದತಿಗೆ ರಾಜ್ಯ ಕಾಂಗ್ರೆಸ್ ಸರಕಾರ ಹೊರಡಿಸಿರುವ ಸುತ್ತೋಲೆ ವಿರುದ್ಧ ಯಲ್ಲಾಪುರ ಬಿಜೆಪಿ ಮಂಡಳ ಸರ್ಕಾರದ ವಿರುದ್ಧ ಪ್ರತಿಭಟನೆಯ ಕಹಳೆ ಮೊಳಗಿಸಿದ್ದು ಸೋಮವಾರ “ಗ್ರಾಮಾಪಂಚಾಯತ ಚಲೋ”ಗೆ ಸೋಮವಾರ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸಾದ್ ಹೆಗಡೆ,ಯಲ್ಲಾಪುರ ಬಿಜೆಪಿ ಮಂಡಲಾಧ್ಯಕ್ಷ
ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ಮುಳುಗಿದೆ. ಕೇಂದ್ರ ಸರಕಾರ ನೀಡಿದ ಮನೆಗಳ ನಿರ್ಮಾಣಕ್ಕೆ ಇಲ್ಲಸಲ್ಲದ ಅಡ್ಡಿ ಮುಂದೆ ಮಾಡುತ್ತಿದೆ. ತಾನು ಮಾಡುವುದಿಲ್ಲ,ಬೇರೆಯವರು ಮಾಡಿದರೆ ಸಹಿಸುವುದಿಲ್ಲ ಎಂಬುದು ಕಾಂಗ್ರೆಸ್ ಸರಕಾರದ ಧೋರಣೆ ಎಂದು ಮಂಡಲ ಅಧ್ಯಕ್ಷ ಪ್ರಸಾದ ಹೆಗಡೆ ಟೀಕಿಸಿದರು.
ಉಮೇಶ್ ಭಾಗ್ವತ್, ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಪ್ರಮುಖ
ರಾಜ್ಯ ಕಾಂಗ್ರೆಸ್ ಸರಕಾರ ಬಡವರ ಮೇಲೆ ನಿರಂತರ ಗದಾ ಪ್ರಹಾರ ಮಾಡುತ್ತಿದೆ. ಈ ಹಿಂದೆ ಏಕಾಏಕಿ ಅಡಕೆ ನಿಷೇಧದ ಆತಂಕವನ್ನು ಕಾಂಗ್ರೆಸ್ ಸರಕಾರ ಸೃಷ್ಟಿ ಮಾಡಿತು. ರಾತ್ರೋರಾತ್ರಿ ಆದೇಶ ವಾಪಸ್ ಪಡೆಯಿತು. ಇದರ ಹಿಂದಿನ ಉದ್ದೇಶ ಏನು ಎಂದು ಬಿಜೆಪಿ ಮುಖಂಡ ಉಮೇಶ್ ಭಾಗ್ವತ ಪ್ರಶ್ನೆ ಮಾಡಿದರು.


ಒಂದು ವಾರಕಾಲ ನಡೆಯುವ ಸರಣಿ ಪ್ರತಿಭಟನೆ ಅಂಗವಾಗಿ ಸೋಮವಾರ ಮಲವಳ್ಳಿ ಮಾವಿನಮನೆ ಮತ್ತು ವಜ್ರಳ್ಳಿ ಗ್ರಾಮಪಂಚಾಯತ ಕಚೇರಿ ಎದುರು ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಅತಿಕ್ರಮಣದಾರರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡರು.ಪ್ರತಿದಿನ ಎರಡರಿಂದ ಮೂರು ಪಂಚಾಯತಿ ಎದುರು ಸರಣಿ ಹೋರಾಟಕ್ಕೆ ಯೋಜನೆ ರೂಪಿಸಲಾಗಿದೆ.
ಶೇ 60/80 ಮನೆಗಳ ನಂಬರ್ ಕಳೆದುಕೊಳ್ಳುವ ಭೀತಿ:
ರಾಜ್ಯ ಸರಕಾರದ ಸುತ್ತೋಲೆ ಪ್ರಕಾರ ಪ್ರತಿ ಪಂಚಾಯತದಲ್ಲಿ ಶೇ.60ರಿಂದ 8”ರಷ್ಟು ಮನೆಗಳು ಮನೆ ನಂಬರ್ ಕಳೆದುಕೊಳ್ಳಬೇಕಾಗುತ್ತದೆ ಎಂಬ ಮಾಹಿತಿಯನ್ನು ಪಂಚಾಯತ ಅಧಿಕಾರಿಗಳು ಪ್ರತಿಭಟನಾಕಾರರ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದರು.
ಪ್ರತಿಭಟನೆಯಲ್ಲಿ ಮಂಡಳ ಉಪಾಧ್ಯಕ್ಷ ಸುಬ್ಬಣ್ಣ ಬೊಳ್ಮನೆ,ರಸ್ಮಾ ಕುಣಬಿ,ನಾರಾಯಣ ಕುಣಬಿ,ವಿಪಿ ಹೆಬ್ಬಾರ,ರವಿ ಹುಳಸೆ,ವೆಂಕಟ್ರಮಣ ಕುಣಬಿ,ಜಿಆರ್ ಭಾಗ್ವತ,ಮಹೇಶ ಗಾಂವಕರ,ಗೋಪಾಲ ಸಿದ್ದಿ
ಮುಂತಾದವರು ಇದ್ದರು.










Prathidvani Yellapura