
ಪ್ರತಿಧ್ವನಿ ಯಲ್ಲಾಪುರ : ಮೊನ್ನೆ ಯಲ್ಲಾಪುರ ತಾಲೂಕಾ ಮಾರ್ಕೆಟಿಂಗ್ ಸೊಸೈಟಿ ಮೀಟಿಂಗ್ ಗೆ ಹೋಗಿದ್ದೆ.ಹೆಚ್ಚಿನ ಕುರ್ಚಿ ತುಂಬಿತ್ತು. ನನ್ನಹಾಗೇ.. ಸಂಸಾರದ ಹೊಣೆ ತಲೆಯಮೇಲೆ ಹೊತ್ತು ತಾನು ಇಲ್ಲದಿದ್ದರೆ ಸಂಸಾರ ಸರಿಯಾಗಿ ನಡೆಯುವುದಿಲ್ಲ ಇವರು ಎಲ್ಲವನ್ನೂ ಸರಿಯಾಗಿ ನಿಭಾಯಿಸಲಿಕ್ಕಿಲ್ಲ.

ಮಕ್ಕಳಿಗೆ ಜೀವನಾನುಭವ ಸಾಲದು.ಅಂತಿಮ
ಕ್ಷಣದ ವರೆಗೆ ತಾನು ಇವರಿಗಾಗಿ ಹೋರಾಟ
ನಡೆಸುತ್ತಿರುವವನು. ತಾನು ಬೆವರಿಳಿಸಿ ನಿರ್ಮಾಣ
ಮಾಡಿದ ತೋಟ ಮನೆ ಇವುಗಳ ಬಗ್ಗೆ ಮಕ್ಕಳಿಗೆ
ಆಸಕ್ತಿನೇ ಇಲ್ಲ . ಎಂಬ ಭಾವ (ಭಾರ) ಹೊತ್ತು
ಕುಳಿತ 60-65 ರ ಮೇಲಿನ ವೃದ್ಧ ( ಜ್ನಾನ ವೃದ್ಧ)
ವ್ಯಕ್ತಿ ಗಳೇ ಕಾಣುತ್ತಿದ್ದರು.

ಪ್ರತಿಶತ 80 ಕ್ಕೂ ಮಿಕ್ಕಿ ಜೀವನದ ಸಂಧ್ಯಾ ಕಾಲದ
ಹೊಸ್ತಿಲಲ್ಲಿ ನಿಂತವರೇ ಇದ್ದರು. ಉತ್ಸಾಹ ತುಂಬಿದ
ಕೆಲವೇ ಕೆಲವು ಯುವಕರು ಮಾತ್ರ ಅಲ್ಲಲ್ಲಿ ಕಾಣುತ್ತಿದ್ದರು.
ಏಕೆ ಹೀಗಾಗುತ್ತಿದೆ?
ಕೃಷಿಕರ ಮುಂದಿನ ತಲೆಮಾರು ಕುಳಿತಲ್ಲೇ ಜಗತ್ತನ್ನು
ಕಾಣುತ್ತಿದೆ.ಜಗತ್ತಿನ ವಿದ್ಯಮಾನ ತ್ವರಿತಗತಿಯಲ್ಲಿ
ಬದಲಾಗುತ್ತಿರುವುದು, ಇಂದು ಬಡವನಾಗಿದ್ದವ
ಒಂದೆರಡು ವರ್ಷಗಳಲ್ಲೇ ದೊಡ್ಡ ಸಿರಿವಂತ ಬದುಕು
ಅನುಭವಿಸುವುದನ್ನು ಕಂಡು ತಾನೂ ಏಕಾಗಬಾರದು
ಎಂಬ ಮನೋಭಾವ ಹೊತ್ತು ಪ್ಯಾಕೇಜ್ ಬದುಕು
ಹುಡುಕುತ್ತ ಶಹರದ ಕಡೆ ಮುಖಮಾಡಿದ್ದಾರೆ.
ಅಲ್ಲಿ ಕೆಲವರು ಯಶಸ್ಸು ಸಾಧಿಸಿದರೂ ಕೆಲವರು
ಇಲ್ಲೂ ಇಷ್ಟೇ ಎಂದು ನಿರಾಸೆ ಪಟ್ಟರೂ ಮಾಯಾ
ನಗರಿಯ ಓಟಕ್ಕೆ ಸಿಲುಕಿ ಹೊರಬಂದರೆ…
ಮುಂದೇನು? ಎಂಬ ತಾಕಲಾಟಕ್ಕೆ ಸಿಲುಕಿ
ಒದ್ದಾಡುತ್ತಿರುವವರೂ ಕಾಣಸಿಗುತ್ತಾರೆ.
ಬಾಲ್ಯದಲ್ಲಿ ಹಳ್ಳಿ ಮನೆಯಲ್ಲಿ ಹಲವು ಸಮಸ್ಯೆ
ಎದುರಿಸುತ್ತ ಬೆಳೆದವರು.ಅಪ್ಪನ ಪರದಾಟ….
ಈ ವರ್ಷ ಒಂದು ಹಸು ಅಥವಾ ಎಮ್ಮೆ ಖರೀದಿ
ಮಾಡಬೇಕು.ಊಟಕ್ಕೆ ಸಾಕಾಗುವಷ್ಟು ಭತ್ತ
ಬಂದಿದೆ ಅಡಿಕೆ ಬೆಳೆಯೂ ಚನ್ನಾಗಿದೆ ಮನೆಯವರಿಗೆಲ್ಲ
ಹೊಸ ಬಟ್ಟೆ ಖರೀದಿಸಬೇಕು.ಮಗಾ ಈ ವರ್ಷದ
ಪ್ರವಾಸಕ್ಕೆ ನಿನ್ನ ಕಳಿಸುತ್ತೇನೆ.ಹೀಗೆಂದ ವರ್ಷವೇ
ಮಳೆ ಹೆಚ್ಚಾಗಿ ಎಷ್ಟು ಸಾರೆ ಮದ್ದು ಹೊಡೆಸಿದರೂ
ಅಡಿಕೆ ಕೊಳೆ ಬಂದು ಹತ್ತರಲ್ಲಿ ಒಂದು ಭಾಗವೂ
ಕೈಗೆ ಸಿಗದೇ ತಲೆಮೇಲೆ ಕೈ ಹೊತ್ತು ಕುಳಿತ ಅಪ್ಪ
ಏನೂ ಮಾತಾಡದೇ ಮಕ್ಕಳಿಗೆ ಪಾಠ ಹೇಳಿದ್ದಾನೆ.
ತಾಯಿ ಇನ್ನೂ ಹಳೆಯ ಸೀರೆ, ತಮ್ಮನಿಗೆ ಅಣ್ಣನ
ಪುಸ್ತಕ ಅಂಗಿ ಚಡ್ಡಿ.ತಂಗಿಗೆ ಅಕ್ಕನದು.ಹೀಗೆ ಅಪ್ಪನ
ಹೋರಾಟ ಅಮ್ಮನ ಪರದಾಟ ನೋಡುತ್ತ
ದಿನ ಕಳೆದ ಮಕ್ಕಳು ಬಾಲ್ಯದಲ್ಲೇ ಕೃಷಿ ಬಗ್ಗೆ
ರೇಜಿಗೆ ಹುಟ್ಟಿಸಿಕೊಂಡದ್ದು ಒಂದು. ಪಾಲಕರು
ತಾನು ಪಟ್ಟ ಕಷ್ಟಕ್ಕೆ ಮಕ್ಕಳು ಬೀಳಬಾರದು
ಎಂದು ನಡೆಸಿದ ಹೋರಾಟದ ಫಲವಾಗಿ ಮಕ್ಕಳು
ಹಳ್ಳಿ ಬಿಟ್ಟು ಶಹರ ಸೇರಿದ್ದು ಹಳ್ಳಿ ಬರಡಾಗುತ್ತಿದೆ.
ಎಲ್ಲೋ ವರುಷದಲ್ಲಿ ಒಂದೆರಡುಬಾರಿ ಬಂದ
ಮಕ್ಕಳು ಅಪ್ಪನ ಮಾತಿಗೆ ಸ್ವಲ್ಪ ಹಣ ಠೇವಣಿ
ಇಡಲು ಸಹಕಾರಿ ಸಂಘದ ಕಡೆ ಹೋಗಿ ಬರುತ್ತಾರೆ
ಬಿಟ್ಟರೆ ಈ ಮೀಟಿಂಗ್ ಲಾಭ ಹಾನಿ ಅಡಾವೆ ಇದೆಲ್ಲಾ
ಯುವಕರಿಗೆ ಬೇಕಾಗಿಲ್ಲ.
ಕಾರಣ ಗ್ರಾಮಗಳ ಉದ್ಧಾರಕ್ಕಾಗಿ ಕಟ್ಟಿ ಬೆಳೆಸಿದ
ಸಹಕಾರಿ ಸಂಘಗಳ ಭವಿಷ್ಯ ಡೋಲಾಯಮಾನ
ಸ್ಥಿತಿಯಲ್ಲಿ ಇದ್ದು ಇನ್ನು ಕೆಲವೇ ವರ್ಷಗಳಲ್ಲಿ
ಮಾಯವಾದರೂ ಅಚ್ಚರಿ ಇಲ್ಲ.
ಈಗಿರುವ ಒಂದೆರಡು ತಲೆ ಮಾರಿನ ನಂತರ
ಹಣಕಾಸಿನ ಪೂರೈಕೆ ಗೆ ಸಹಕಾರಿ ಸಂಘ ಅವಲಂಬಿಸದ ಜನಾಂಗ ನಿರ್ಮಾಣ ಆದಾಗ
ಸಂಘಗಳು ಅಸ್ತಿತ್ವ ಕಳೆದುಕೊಳ್ಳಬಹುದು.
ಮೊನ್ನೆ ಮೀಟಿಂಗ್ ನಲ್ಲಿ ಕುಳಿತು ಅವಲೋಕಿಸಿದಾಗ
ಬಂದ ವಿಚಾರವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ.
ಪರಿವರ್ತನೆ ಜಗದ ನಿಯಮ.ಇದನ್ನು ನಾವು
ಓದಿದವರಷ್ಟೇ ಅಲ್ಲ. ನೋಡಿದವರೂ ಕೂಡಾ.
ಕಾಲಾಯ ತಸ್ಮೈ ನಮ:












Prathidvani Yellapura