
ಪ್ರತಿಧ್ವನಿ ಯಲ್ಲಾಪುರ : ಹಲವು ವರ್ಷಗಳಿಂದ ಬಾಕಿಯಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಜನವರಿ ಮೊದಲ ವಾರದಲ್ಲಿ ನಡೆಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಡಿಸೆಂಬರ್ನಲ್ಲಿ ಪ್ರಕ್ರಿಯೆ ಆರಂಭವಾಗಲಿದ್ದು, ಇವುಗಳ ನಂತರ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ಸದ್ಯ ಮೀಸಲಾತಿ ಕರಡು ಸಿದ್ಧವಾಗಿದ್ದು, ಚುನಾವಣಾ ಆಯೋಗದ ಅನುಮತಿ ದೊರೆತರೆ ದಿನಾಂಕ ಘೋಷಣೆಯಾಗಲಿದೆ. ಚುನಾವಣಾ ಪ್ರಕ್ರಿಯೆಯನ್ನು ಶೀಘ್ರವಾಗಿ ಚುರುಕುಗೊಳಿಸಲು ಕ್ಯಾಬಿನೆಟ್ ತೀರ್ಮಾನಿಸಿರುವುದಾಗಿ ಮಾಹಿತಿ ದೊರೆತಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಪಂಚಾಯತ್ ಚುನಾವಣೆ ನಡೆಸುವ ಕುರಿತು ಚರ್ಚೆ ನಡೆಯಿತು. ಡಿಸೆಂಬರ್ ನಲ್ಲಿ ಪ್ರಕ್ರಿಯೆ ಆರಂಭಿಸಿ ಜನವರಿ ಮೊದಲ ವಾರದಲ್ಲೇ ಚುನಾವಣೆ ಪೂರ್ಣಗೊಳಿಸಲು ಸಂಪುಟ ಬಯಸಿತು ಎಂದು ತಿಳಿದುಬಂದಿದೆ.
ಚುನಾವಣೆ ನಡೆಸದ ಕಾರಣ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕೇಂದ್ರ ಸರಕಾರದ ಅನುದಾನ ಸ್ಥಗಿತವಾಗಿದ್ದು, ಪಂಚಾಯಿತಿಗಳಲ್ಲಿ ಅಭಿವೃದ್ದಿಗೆ ಹಣ ಇಲ್ಲದಂತಾಗಿದೆ. ಈಗಾಗಲೇ ಐದಾರು ವರ್ಷಗಳು ಕಳೆದುಹೋಗಿದ್ದು, ಈಗಲೂ ಚುನಾವಣೆ ನಡೆಸದಿದ್ದರೆ ಸರಕಾರಕ್ಕೆ ಗೌರವ ಬರುವುದಿಲ್ಲಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜಿಲ್ಲೆ ಮತ್ತು ತಾಲೂಕು ಪಂಚಾಯತ ಚುನಾವಣೆ ನಂತರವೆ ಗ್ರಾಮ ಪಂಚಾಯತ್ ಚುನಾವಣೆ
ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ಹಾಗಾಗಿ, ಮೊದಲಿಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಿ, ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ. ಸದ್ಯ ಮೀಸಲು ಕರಡು ಸಿದ್ದವಾಗಿದ್ದು, ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕ್ಯಾಬಿನೆಟ್ ಬಯಸಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಮೂರು ತಿಂಗಳಷ್ಟೇ ಬಾಕಿ ರಾಜಕೀಯ ರಂಗಿನಾಟಕ್ಕೆ
ಡಿಸೆಂಬರ್ನಲ್ಲಿ ಅಧಿಸೂಚನೆ ಹೊರಡಿಸಿ ಜನವರಿ ಮೊದಲ ವಾರದಲ್ಲಿ ಚುನಾವಣೆ ನಡೆಸಲು ಸರ್ಕಾರ ಬಯಸಿದೆ. ಹೀಗಾಗಿ, ಲೋಕಲ್ ಫೈಟ್ಗೆ ಇನ್ನೂ 2 ತಿಂಗಳು ಮಾತ್ರ ಬಾಕಿ ಇದೆ. ಇನ್ನು ಸಚಿವ ಸಂಪುಟದ ತೀರ್ಮಾಣದ ಬೆನ್ನಲ್ಲೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗೆರಿಗೆದರಲಿವೆ. ಟಿಕೆಟ್ ಆಕಾಂಕ್ಷಿಗಳ, ಗೆಲ್ಲುವ ಸೋಲುವ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆರಂಭವಾಗಲಿದೆ.
ಫಾರಂ -7 ತನಿಖೆ ಚುರುಕು, ಎಸ್ ಐ ಟಿ ಇಲ್ಲ
ಎಸ್ಐಆರ್ ಪ್ರಕ್ರಿಯೆ ಭಾಗವಾಗಿ ಫಾರಂ-7 ವಿಚಾರದಲ್ಲಿನಡೆಯುತ್ತಿರುವ ಬೆಳವಣಿಗೆಗಳ ಕುರಿತು ಕ್ಯಾಬಿನೆಟ್ನಲ್ಲಿ ಗಂಭೀರ ಚರ್ಚೆ ನಡೆಯಿತು. ದೊಡ್ಡ ಪ್ರಮಾಣದಲ್ಲಿ ಫಾರಂ-7 ಸಲ್ಲಿಸಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲು ಬಿಜೆಪಿ ಮುಖಂಡರು ನಡೆಸಿರುವ ಷಡ್ಯಂತ್ರದ ವಿರುದ್ಧ ತನಿಖೆ ಕುರಿತು ಸಮಾಲೋಚನೆ ನಡೆಯಿತು. ಈ ವಿಚಾರದಲ್ಲಿ ಎಸ್ಐಟಿ ರಚನೆಗೆ ಅವಕಾಶ ಇಲ್ಲ. ಈಗಾಗಲೇ ಸ್ಥಳೀಯವಾಗಿ ಎಫ್ಐಆರ್ ದಾಖಲಾಗಿರುವ ಪ್ರಕರಣಗಳ ತನಿಖೆ ಚುರುಕುಗೊಳಿಸಲು ಸಂಪುಟ ಸಭೆ ಬಯಸಿತು ಎಂದು ತಿಳಿದುಬಂದಿದೆ.















Prathidvani Yellapura