
ಪ್ರತಿಧ್ವನಿ ಯಲ್ಲಾಪುರ : ಅಕ್ಟೋಬರ್ 2ರಂದು ಮುಂಬೈ ನಗರದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಮುಂಬೈ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿಯ ಸಹ ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ.

“ಅಕ್ಟೋಬರ್ 2ರ ನಮ್ಮ ಪ್ರತಿಭಟನೆಗೆ ಮುಂಬೈ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪ್ರಜೆಗಳ ಧ್ವನಿಯನ್ನು ಹತ್ತಿಕ್ಕುವ ಇಂತಹ ತಂತ್ರಗಳನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅವರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಒಂದು ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೇನಾದರೂ ಸೆಪ್ಟೆಂಬರ್ 26ರೊಳಗೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸದಿದ್ದರೆ, ಅಕ್ಟೋಬರ್ 2ರಂದು ದೇಶವ್ಯಾಪಿ ಪ್ರತಿಭಟನೆಗೆ ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿತ್ತು. ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ನಿರ್ಧಾರಗಳಲ್ಲಿ ಭಿನ್ನಮತವಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕರೆಯನ್ನು ನೀಡಲಾಗಿತ್ತು. ಮುಂಬೈನಿಂದ ದೇಶವ್ಯಾಪಿ ಪ್ರತಿಭಟನೆಗೆ ಚಾಲನೆ ನೀಡಲಾಗುವುದು ಎಂದು ಕಾಕ್ರೋಚ್ ಜನತಾ ಪಾರ್ಟಿ ತಿಳಿಸಿತ್ತು.

ಆದರೆ, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮುಂಬೈ ಪೊಲೀಸರು, “ಶಿವಾಜಿ ಪಾರ್ಕ್ ಬಳಿ ಪ್ರತಿಭಟನೆಗೆ ಅನುಮತಿ ಮಂಜೂರು ಮಾಡುವ ಅಧಿಕಾರ ನಮಗಿಲ್ಲ. ಈ ವಿಷಯವನ್ನು ಅರ್ಜಿದಾರ ಅಜಿಂಕ್ಯಾ ಶಿಂದೆಗೆ ವಿವರಿಸಲಾಗಿದೆ. ಪ್ರತಿಭಟನೆಗೆ ಮುಂಬೈ ನಗರದಲ್ಲಿ ಪರ್ಯಾಯ ಸ್ಥಳವನ್ನು ಆಯ್ದುಕೊಳ್ಳುವಂತೆ ಹಾಗೂ ಅನುಮತಿಗೆ ಅರ್ಜಿ ಸಲ್ಲಿಸುವಂತೆ ಅವರಿಗೆ ಸಲಹೆ ನೀಡಲಾಗಿದೆ. ಆ ಅರ್ಜಿಯನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಲಾಗುವುದು” ಎಂದು ಅಧಿಸೂಚನೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಆದರೆ, ಈ ಸ್ಪಷ್ಟೀಕರಣಕ್ಕೆ ತಿರುಗೇಟು ನೀಡಿರುವ ಅಭಿಜೀತ್ ದೀಪ್ಕೆ, “ಹಾಗಾದರೆ, ಏಕನಾಥ್ ಶಿಂದೆಗೆ ಹೇಗೆ ಅನುಮತಿ ನೀಡಲಾಯಿತು” ಎಂದು ಪ್ರಶ್ನಿ ಸಿದ್ದಾರೆ.














Prathidvani Yellapura