
ಪ್ರತಿಧ್ವನಿ ಯಲ್ಲಾಪುರ : ಡೆಂಗಿ ನಿಯಂತ್ರಣದಲ್ಲಿ ಎಲ್ಲ ಇಲಾಖೆಗಳು ಹಾಗೂ ಸಮುದಾಯದ ಸಹಭಾಗಿತ್ವ ಅವಶ್ಯಕತೆ ಇದ್ದು ಯಲ್ಲಾಪುರ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಡೆಂಗಿ ಹರಡದಂತೆ ಎಚ್ಚರಿಕೆ ವಹಿಸುವುದಕ್ಕಾಗಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಭವಿಷ್ಯದ ಡೆಂಗಿ ಮುಕ್ತ ತಾಲೂಕು ನಮ್ಮದಾಗಬೇಕಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಧನವಾಡಕರ್ ಹೇಳಿದರು.

ಅವರು ಸೆ, 23 ರಂದು ಯಲ್ಲಾಪುರ ತಾಲೂಕ ಪಂಚಾಯತ್ ಸಭಾಭವನ ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್, ನಗರಾಭಿವೃದ್ಧಿ, ಪೌರಾಡಳಿತ ಇಲಾಖೆಯ ಅಧಿಕಾರಿಗಳಿಗೆ ರಾಷ್ಟ್ರೀಯ ಡೆಂಗಿ ದಿನ 2026 ರ ಅಂಗವಾಗಿ ಈ ಬಾರಿಯ ಧ್ಯೇಯವಾಕ್ಯವಾದ “ಡೆಂಗಿ ನಿಯಂತ್ರಣಕ್ಕಾಗಿ ಸಮುದಾಯದ ಸಹಭಾಗಿತ್ವ : ಪರಿಶೀಲಿಸಿ, ಸ್ವಚ್ಛಗೊಳಿಸಿ ಹಾಗೂ ಮುಚ್ಚಿಡಿ” ಎಂಬ ಧ್ಯೇಯವಾಕ್ಯದೊಂದಿಗೆ ಅಡ್ವೊಕೇಸಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಹಾಗೂ ಪ್ರಾ.ಆ.ಕೇಂದ್ರ ದೇಹಳ್ಳಿಯ ವೈದ್ಯಾಧಿಕಾರಿಗಳಾದ ಡಾ. ಗಿರೀಶ್ ಗೌಡರ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ತಾಳಿಕೋಟಿ ಇವರು ಸ್ವಾಗತಿಸಿ ವಂದಿಸಿದರು. ತಾಲೂಕಿನ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಾದ ಎ.ಡಿ ಮಂಜುನಾಥ ಆಗೇರ, ಪ್ರಭಾರ ಎ .ಡಿ ಪ್ರಭಾಕರ ಭಟ್ಟ ಹಾಗೂ ಪಿ.ಡಿ. ಒ ರವರು ಇತರ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಹಾಗೂ ಆರೋಗ್ಯ ಇಲಾಖೆಯ ಹಿರಿಯ ನಿರೀಕ್ಷಣಾಧಿಕಾರಿ ವಿ ಎಲ್ ಶಿರೂರ, ಪ್ರವೀಣ ಇನಾಂದಾರ್ ಹಾಗೂ ಅಕ್ಷತಾ ನಾಯ್ಕ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.














Prathidvani Yellapura