


ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಬಡವರ, ರೈತರ, ಕಾರ್ಮಿಕರ ಪರ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ ಬೂಟಾಟಿಕೆ ಮಾಡುತ್ತಿದ್ದು ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹ ಧನವನ್ನೂ ನೀಡದೇ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಬರ ಪರಿಹಾರ ನೀಡದೇ ರೈತಪರ ವಿವಿದ ಯೋಜನೆಗಳನ್ನು ಅನುಷ್ಠಾನಗೊಳಿಸದೇ ರೈತ ವಿರೋಧಿ ಸರ್ಕಾರವಾಗಿ ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್ ಹೆಗಡೆ ಹೇಳಿದರು.
ಅವರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಸಾಂಕೇತಿಕಾವಗಿ ಹಸುವಿನೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದರು.

ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ಅಲ್ಪ ಸಂಖ್ಯಾತರ ಓಲೈಕೆಗೆ ಮುಂದಾಗಿದೆ. ಗ್ಯಾರಂಟಿಗಳೆಲ್ಲ ನೆಲಕಚ್ಚಿದ್ದು ರಾಜ್ಯದ ಆರ್ಥಿಕತೆ ಹಳಿತಪ್ಪಿದೆ. ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನ 716 ಕೋಟಿಯನ್ನೂ ಸಹ ಬಿಡುಗಡೆ ಮಾಡದ ಸ್ಥಿತಿಯಲ್ಲಿ ಸರ್ಕಾರವಿದೆ. ಇಂತಹ ಸರ್ಕಾರದ ವಿರುದ್ಧ ಜನ ರೊಚ್ಚಿಗೆದ್ದು ರಾಜ್ಯಾದ್ಯಂತ ಪ್ರತಿಭಟಿಸುತ್ತಿರುವುದು ಸರ್ಕಾರದ ಅಸಮರ್ಥತೆಗೆ ಸಾಕ್ಷಿಯಾಗಿದೆ ಎಂದು ಹಳಿಯಾಳ ಮಾಜಿ ಶಾಸಕ ಸುನಿಲ್ ಹೆಗಡೆ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಪ್ರಶಾಂತ ನಾಯ್ಕ, ಶಿವಾಜಿ ನರಸಾನಿ, ಯಲ್ಲಾಪುರ ಮಂಡಲಾಧ್ಯಕ್ಷ ಜಿ.ಎನ್ ಗಾಂವ್ಕರ್, ಹಳಿಯಾಳ ಅಧ್ಯಕ್ಷ ಗಣಪತಿ ಕರಂಜೇಕರ ಹಾಗೂ ಅನಿಲ ಮುತ್ನಾಳ, ಪ್ರಸಾದ ಹೆಗಡೆ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸೋಮೇಶ್ವರ ನಾಯ್ಕ, ಹಿರಿಯರಾದ ರಾಮು ನಾಯ್ಕ, ಸುಬ್ಬಣ್ಣ ಬೋಳ್ಮನೆ, ವೆಂಕಟರಮಣ ಬೆಳ್ಳಿ, ಪಕ್ಷದ ಇನ್ನಿತರ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.



Prathidvani Yellapura