
ಪ್ರತಿಧ್ವನಿ ಯಲ್ಲಾಪುರ : ವೈದಿಕ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ವೇದ, ಉಪನಿಷತ್ತು, ಜ್ಯೋತಿಷ್ಯ, ಸಂಸ್ಕೃತ ಇವುಗಳ ಪರಿಪೂರ್ಣ ಅಧ್ಯಯನ ಮಾಡಿದವನಿಗೆ ಸಮಾಜದಲ್ಲಿ ಸದಾ ಶ್ರೇಷ್ಠರೆನಿಸಿಕೊಳ್ಳುತ್ತಾರೆ. ಅಲ್ಲದೇ ಒಬ್ಬ ಐಎಎಸ್ ಅಧಿಕಾರಿಗಿಂತಲೂ ಗೌರವ ಪಡೆಯುತ್ತಾನೆ. ಅಂತಹ ಸನಾತನ ಧರ್ಮದಲ್ಲಿ ನಾವು ಬಂದಿದ್ದೇವೆ. ಅದನ್ನು ಉಳಿಸಿಕೊಂಡು ಹೋಗುವಲ್ಲಿ ಇಂದಿನ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು, ಮಂಗಳವಾರ ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ವೇದ, ಸಂಸ್ಕೃತ ಪಾಠಶಾಲಾ ಸಭಾಭವನದಲ್ಲಿ ವಸಂತ ವೇದ ಸಂಸ್ಕೃತ ಯೋಗ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು.

ಸ್ವರ್ಣವಲ್ಲಿಯ ಪೂಜ್ಯ ಶ್ರೀಗಳು ಇಡೀ ಜಿಲ್ಲೆಯಲ್ಲೇ ಸನಾತನ ಧರ್ಮ, ವೇದ ಇವುಗಳ ಏಳಿಗೆಗಾಗಿ ಸದಾ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಎಲ್ಲೆಡೆ ಇಂತಹ ಶಿಬಿರಗಳು ನಡೆಯುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ನಮ್ಮ ಪರಂಪರೆಯನ್ನು ಉಳಿಸುವ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು.

ನಮ್ಮ ತಾಲೂಕಿನವರೇ ಆದ ಪೂಜ್ಯ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಶ್ರೀಗಳ ವರ್ಧಂತಿ ಉತ್ಸವ ಕೂಡ ಆಚರಿಸಲಾಗುತ್ತಿದೆ. ಅಂತಹ ಸುಸಂದರ್ಭದಲ್ಲಿ ಈ ಶಿಬಿರವನ್ನು ಪ್ರಾರಂಭಿಸುತ್ತಿರುವುದು ಸಂತಸ ಎಂದರು.
ಡಾ.ವೆಂಕಟ್ರಮಣ ಭಟ್ಟ ಹಲಸ್ಖಂಡ ಶಿಬಿರಕ್ಕೆ ಚಾಲನೆ ನೀಡಿ, ಪರಿಣಾಮಕಾರಿಯಾದ ಒಳ್ಳೆಯದಾಗುವ ಪ್ರಕ್ರಿಯೆಗೆ ಧರ್ಮ ಎನ್ನುತ್ತೇವೆ. ನಮ್ಮ ಸನಾತನ ಸಂಸ್ಕೃತಿ ಒಳ್ಳೆಯ ಬದುಕಿಗೆ ಸನ್ಮಾರ್ಗ ತೋರಿಸುತ್ತದೆ. ಸಂಸ್ಕಾರ, ಸಂಸ್ಕೃತಿ ಪ್ರಾಣಿಗಳಿಗಿಲ್ಲ. ಅದು ಮಾನವನಿಗೆ ಮಾತ್ರ. ಧರ್ಮ ನಮಗೆ ಹೇಗೆ ಸಾಗಬೇಕೆನ್ನುವುದನ್ನು ತಿಳಿಸುತ್ತದೆ. ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ಗೌರವ ಪಡೆದಿದೆ. ಧರ್ಮ, ಅರ್ಥ, ಕಾಮ, ಮೋಕ್ಷ ಇವು ಮನುಷ್ಯನ ಶ್ರೇಷ್ಠತೆಗೆ ಕೊಂಡೊಯ್ಯುತ್ತದೆ. ಕಾಮ ಎಂದರೆ ಆಸೆ, ಸುಖ, ಶಾಂತಿ ಎಂದರ್ಥ. ವೇದದ ಅರಿವು ಮಾಡಿಕೊಂಡಾಗ, ಅದರ ಜ್ಞಾನವನ್ನು ಹೆಚ್ಚಿಸಿಕೊಂಡಾಗ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಇಂತಹ ಶಿಬಿರಗಳ ಮೂಲಕ ಕ್ಷಣವೂ ಸಮಯ ವ್ಯರ್ಥವಾಗಿಸದೇ ವಿದ್ಯೆಯನ್ನು ಸಂಪಾದಿಸಿ ಎಂದರು.
ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ ಅಧ್ಯಕ್ಷತೆ ವಹಿಸಿ, ಸಾಂದರ್ಭಿಕ ಮಾತನಾಡಿದರು. ಶ್ರೀ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ತಾಲೂಕಾ ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಯಲ್ಲಾಪುರ ಸೀಮಾ ಅಧ್ಯಕ್ಷ ಎನ್.ಎಂ.ಹೆಗಡೆ ಪಣತಗೇರಿ ಮಾತನಾಡಿದರು. ವೇದಿಕೆಯಲ್ಲಿ ಶಾರದಾಂಬಾ ದೇವಸ್ಥಾನದ ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ, ಸಹಕಾರ್ಯದರ್ಶಿ ನರಸಿಂಹ ಗೇರಗದ್ದೆ, ನಿರ್ದೇಶಕರಾದ ಶಂಕರ ಭಟ್ಟ ತಾರೀಮಕ್ಕಿ, ನಾಗೇಂದ್ರ ಕವಾಳೆ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ವೇದಘೋಷ ಪಠಿಸಿದರು. ಮುಖ್ಯಾಧ್ಯಾಪಕ ಡಾ.ಶಿವರಾಮ ಭಾಗ್ವತ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿ ಕಾರ್ತಿಕೇಯ ಭಟ್ಟ ನಿರ್ವಹಿಸಿದರು. ಅಧ್ಯಾಪಕ ಡಾ.ನರಸಿಂಹ ಭಟ್ಟ ವಂದಿಸಿದರು.









Prathidvani Yellapura