
ಪ್ರತಿಧ್ವನಿ ಯಲ್ಲಾಪುರ : ಎಸ್.ಎಸ್.ಎಲ್.ಸಿ ಹಿಂದಿ ಪರೀಕ್ಷೆ ಮಾರ್ಚ 31 ರ ಮಂಗಳವಾರ ಜರುಗುತ್ತಿರುವ ಸಂದರ್ಭದಲ್ಲಿ ಸರಕಾರ ಏಕಾಏಕಿಯಾಗಿ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಾಗಿ ಗ್ರೇಡಿಂಗ್ ಪದ್ಧತಿಯನ್ನು ಜಾರಿಗೆ ತರಲು ಕೈಕೊಂಡ ನಿರ್ಧಾರ ವಿದ್ಯಾರ್ಥಿಗಳಲ್ಲಿ ಆತಂಕ ಹಾಗೂ ಗೊಂದಲಕ್ಕೆ ಕಾರಣವಾಗಿದೆ ಮತ್ತು ಇದು ದುಡಿಕಿನ ನಿರ್ಧಾರ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಶೈಕ್ಷಣಿಕ ವ್ಯವಸ್ಥೆಯಲ್ಲಿ ಏನೇ ಬದಲಾವಣೆ ತರುವದಿದ್ದರೂ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಾಡಬೇಕೆ ವಿನಃ ಕೊನೆಯ ಹಂತದಲ್ಲಿ ಅಲ್ಲ. ಹೀಗಾಗಿ ಇದು ಸರ್ಕಾರದ ಏಕಪಕ್ಷೀಯ ಹಾಗು ಅವೈಜ್ಞಾನಿಕ ಕ್ರಮವಾಗಿದೆ. ಈ ರೀತಿಯ ನಿರ್ಧಾರದಿಂದ ಹಿಂದಿ ಭಾಷಾ ಶಿಕ್ಷಕರು ಮುಂಬರುವ ದಿನಮಾನದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಆತಂಕ ಹಾಗೂ ಭಯದ ವಾತಾವರಣದಲ್ಲಿ ಇದ್ದಾರೆ.

ನಮ್ಮ ದೇಶದಲ್ಲಿ ಆರಂಭದ ದಿನದಿಂದಲೂ ತ್ರೀಭಾಷಾ ಸೂತ್ರ ಪಾಲಿಸುತ್ತಾ ಬಂದಿದ್ದು, ಈಗ ಏಕಾಏಕಿಯಾಗಿ ದ್ವಿಭಾಷಾ ಸೂತ್ರಕ್ಕೆ ಬದಲಾವಣೆ ಮಾಡುವುದರಿಂದ ಆಗುವ ಸಾಧಕ ಬಾಧಕಗಳ ಕುರಿತು ಪುನರ್ ಚಿಂತನೆ ಮಾಡಲು ಆಗ್ರಹಿಸಿದ್ದಾರೆ. ಭಾಷಾ ಸೂತ್ರದ ವಿಷಯಕ್ಕೆ ರಾಜಕೀಯ ಬೆರೆಸಬಾರದು ಎಂದು ಹೇಳಿ ಸರ್ಕಾರ ಏನೇ ನಿರ್ಣಯ ಕೈಗೊಂಡರೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವರು.

ಈ ಸಂದರ್ಭದಲ್ಲಿ ಹೋಲಿ ರೋಜರಿ ವಿಜ್ಞಾನ ಬಳಗದ ಜಿಲ್ಲಾಧ್ಯಕ್ಷ ಹಾಗು ವಿಜ್ಞಾನ ಪರಿಷತ್ತು ಸಂಚಾಲಕ ರಾಜಶೇಖರ್, ಹಿಂದಿ ಶಿಕ್ಷಕ ಮತ್ತು ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹಾಗು ಹಿರಿಯ ಪತ್ರಕರ್ತ ಶಂಕರ ಭಟ್ ತಾರಿಮಕ್ಕಿ ಉಪಸ್ಥಿತರಿದ್ದರು.












Prathidvani Yellapura